More

    ಬೈರಾಡಿ ಕೆರೆ ಅಭಿವೃದ್ಧಿಗೆ ವೇಗ

    ಮಂಗಳೂರು: ನಗರದಲ್ಲಿ ಹಲವು ವರ್ಷಗಳಿಂದ ಪಾಳು ಬಿದ್ದಿದ್ದ ಒಂದೊಂದೇ ಕೆರೆಗಳು ಜೀರ್ಣೋದ್ಧಾರವಾಗುತ್ತಿದ್ದು, ಗುಜ್ಜರ ಕೆರೆ ಬಳಿಕ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಇನ್ನೊಂದು ಕೆರೆ ಅಳಪೆ ಗ್ರಾಮದ ಪಡೀಲ್‌ನಲ್ಲಿರುವ ಬೈರಾಡಿ ಕೆರೆ. ಸ್ಥಳೀಯ ನಿವಾಸಿಗಳ, ಸಾರ್ವಜನಿಕರ ಹಲವು ಹೋರಾಟಗಳೂ ಇದಕ್ಕೆ ಕಾರಣ.

    ಒಂದು ಕಾಲದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೆ ನೀರಿನ ಸೆಲೆಯಾಗಿದ್ದ ಪಡೀಲಿನ ಬೈರಾಡಿ ಕೆರೆ ಈಗಾಗಲೇ ಒಂದು ಹಂತದ ಅಭಿವೃದ್ಧಿ ಕಂಡಿತ್ತು. ಇದೀಗ ಮತ್ತೆ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ. ಬೈರಾಡಿ ಕೆರೆ ಸುಮಾರು 2.50 ಎಕರೆ ಪ್ರದೇಶದಲ್ಲಿದ್ದು, ಇದರಲ್ಲಿ 1.3 ಎಕರೆ ಪ್ರದೇಶ ನೀರಿನಿಂದ ಆವೃತವಾಗಿದೆ.
    ಕೆರೆಯಲ್ಲಿ ತುಂಬಿದ್ದ ಹೂಳನ್ನು ತೆಗೆಯುವ ಕಾಮಗಾರಿ ಈಗಾಗಲೇ ನಡೆದಿದ್ದು, ಒಂದು ಭಾಗದಲ್ಲಿ ಕೆರೆಗೆ ಮೆಟ್ಟಿಲುಗಳ ನಿರ್ಮಾಣಕ್ಕೆ ಬಾಕಿ ಇತ್ತು. ಸ್ಥಳೀಯ ಮನೆಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆ ಭಾಗದಲ್ಲಿಯೂ ಮೆಟ್ಟಿಲು ನಿರ್ಮಿಸಲಾಗಿದೆ. ಇದರಿಂದ ಕೆರೆಯ ನಾಲ್ಕೂ ಭಾಗಗಳಲ್ಲಿ ಮೆಟ್ಟಿಲುಗಳು ನಿರ್ಮಾಣವಾದಂತಾಗಿದೆ. ಹೆಚ್ಚುವರಿಯಾಗಿ ಕಡಿಮೆ ಎತ್ತರದ ಮೆಟ್ಟಿಲು ನಿರ್ಮಾಣ ಮಾಡಲಾಗಿದೆ ನೀರಿಗೆ ಯಾರೂ ಇಳಿಯದಂತೆ ಕಬ್ಬಿಣದ ಗ್ರಿಲ್ಸ್ ಅಳವಡಿಕೆ ಕಾಮಗಾರಿ ಮೊದಲ ಹಂತದಲ್ಲಿ ನಡೆದಿದ್ದು, ಹೊಸದಾಗಿ ಮೆಟ್ಟಿಲು ನಿರ್ಮಿಸಿದ ಭಾಗದಲ್ಲಿ ಎರಡನೇ ಹಂತದಲ್ಲಿ ನಡೆಯಲಿದೆ. ರಾಷ್ಟ್ರೀಯ ಹೆದ್ದಾರಿಯಿಂದ ನೇರವಾಗಿ ಕೆರೆ ಪ್ರವೇಶಕ್ಕೆ ಸ್ವಾಗತ ಕಮಾನು ನಿರ್ಮಾಣ ಮಾಡಲಾಗಿದೆ. ಕೆರೆಯ ರಕ್ಷಣೆಗೆ ಸೆಕ್ಯುರಿಟಿ ವ್ಯವಸ್ಥೆ ಮಾಡಲು ಉದ್ದೇಶಿದ್ದು, ಪ್ರವೇಶ ದ್ವಾರದಲ್ಲಿ ಸೆಕ್ಯುರಿಟಿ ಕೋಣೆಯನ್ನೂ ಸಿದ್ಧಪಡಿಸಲಾಗಿದೆ. ಕೆರೆ ಪ್ರವೇಶಕ್ಕೆ ರಸ್ತೆ ನಿರ್ಮಾಣವಾಗಿದೆ. ಹೂಳೆತ್ತುವ ಕಾಮಗಾರಿಯೂ ಕೆಲ ತಿಂಗಳ ಹಿಂದೆ ನಡೆದಿದೆ.

    ಮಳೆಗಾಲಕ್ಕೆ ಮುನ್ನ ಪೂರ್ಣ: ಮುಂದಿನ ದಿನಗಳಲ್ಲಿ ಉದ್ಯಾನವನ, ಇಂಟರ್‌ಲಾಕ್ ಅಳವಡಿಕೆ, ವಾಕಿಂಗ್ ಟ್ರ್ಯಾಕ್, ಮಕ್ಕಳ ಆಟದ ಪ್ರದೇಶ ನಿರ್ಮಾಣ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿದೆ. ಇದರಿಂದ ಕೆರೆಯ ಸೌಂದರ್ಯ ಇನ್ನಷ್ಟು ಹೆಚ್ಚಾಗಲಿದ್ದು, ಪ್ರವಾಸಿಗರನ್ನು ಆಕರ್ಷಿಸಲು ನೆರವಾಗಲಿದೆ. ಮಂಗಳೂರು-ಬೆಂಗಳೂರು ಹೆದ್ದಾರಿಗೆ ಹೊಂದಿಕೊಂಡಂತೆ ಇರುವುದು ಕೂಡ ಅನುಕೂಲಕರವಾಗಿದೆ. ಮಳೆಗಾಲಕ್ಕೆ ಮುನ್ನ ಕೆರೆ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ.

    ನಗರದ ಕೆಲವು ಕೆರೆಗಳ ಅಭಿವೃದ್ಧಿ ಮುಡಾದಿಂದ ನಡೆಯುತ್ತಿದೆ. ಬೈರಾಡಿ ಕೆರೆ ಒಂದು ಹಂತದ ಕಾಮಗಾರಿ ಮುಗಿದು, ಇದೀಗ ಮತ್ತೆ ಆರಂಭವಾಗಿದೆ. ಕೆರೆಯನ್ನು ನೀರಿನ ಮೂಲವಾಗಿ ಅಭಿವೃದ್ಧಿ ಪಡಿಸುವುದರೊಂದಿಗೆ, ಪ್ರವಾಸಿಗರ ಆಕರ್ಷಣೆಯ ತಾಣವಾಗಿಯೂ ಮಾಡಲಾಗುವುದು.
    ರವಿಶಂಕರ್ ಮಿಜಾರ್
    ಮುಡಾ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts