More

    ಗಾಂಜಾ ಮಾರಾಟಕ್ಕೆ ಮುಂದಾದರೆ ಹುಷಾರ್!

    ಶಿವಮೊಗ್ಗ: ಗಾಂಜಾ ಬೆಳೆಯುವುದು ಮತ್ತು ಮಾರಾಟ ಮಾಡುವುದು ಕಾನೂನು ಬಾಹಿರ. ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಾರಾಟ ದಂಧೆಯಲ್ಲಿ ಸಿಲುಕಿದ್ದರೆ ಇಲ್ಲಿಗೆ ನಿಲ್ಲಿಸಬೇಕು. ನ್ಯಾಯ ಸಮ್ಮತ ದುಡಿಮೆಗೆ ನಮ್ಮ ವಿರೋಧವಿಲ್ಲ. ಆದಾಯ ಕಡಿಮೆ ಆಗುತ್ತಿದೆ ಎಂದು ಮತ್ತೆ ಗಾಂಜಾ ಮಾರಾಟಕ್ಕೆ ಮುಂದಾದರೆ ಪರಿಣಾಮ ನೆಟ್ಟಗಿರಲ್ಲ.

    ಇದು ಎಸ್ಪಿ ಕೆ.ಎಂ.ಶಾಂತರಾಜು ಗಾಂಜಾ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಆರೋಪಿಗಳಿಗೆ ನೀಡಿದ ಖಡಕ್ ಎಚ್ಚರಿಕೆ.

    ಡಿಎಆರ್ ಮೈದಾನದಲ್ಲಿ ಗುರುವಾರ ಕುಂಸಿ, ಕೋಟೆ, ತುಂಗಾನಗರ ಹಾಗೂ ದೊಡ್ಡಪೇಟೆ ಠಾಣಾ ವ್ಯಾಪ್ತಿಯ ಗಾಂಜಾ ಮಾರಾಟ ಮತ್ತು ಬೆಳೆದು ಸಿಕ್ಕಿಬಿದ್ದು ಜಾಮೀನು ಪಡೆದಿರುವ ಇಬ್ಬರು ಮಹಿಳೆಯರು ಸೇರಿ 91 ಆರೋಪಿಗಳ ಪರೇಡ್ ನಡೆಸಿದ ಅವರು, ಗಾಂಜಾ ಮಾರಾಟ ಮಾಡುತ್ತಿಲ್ಲ, ಬಿಟ್ಟಿದ್ದೇವೆ ಎಂಬ ನಾಟಕಗಳು ಇನ್ಮುಂದೆ ನಡೆಯುವುದಿಲ್ಲ. ಸನ್ನಡತೆ ಕಾಯ್ದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಕಳೆದ 3 ವರ್ಷದಲ್ಲಿ ಮಾಡುತ್ತಿರುವ ಕೆಲಸ, ಆದಾಯದ ಮೂಲ ಪರಿಶೀಲಿಸಲಾಗುವುದು. ಒಂದು ವೇಳೆ ನಿಮ್ಮ ಕೆಲಸಕ್ಕೂ ಆದಾಯಕ್ಕೂ ತಾಳೆ ಆಗದಿದ್ದರೆ ನಿಮ್ಮನ್ನು ಮತ್ತೆ ಬಿಡುವ ಪ್ರಶ್ನೆಯೇ ಇಲ್ಲ. ಆಗ ಪೊಲೀಸರ ಇನ್ನೊಂದು ಮುಖವನ್ನು ಪರಿಚಯಿಸಬೇಕಾಗುತ್ತದೆ ಎಂದರು.

    ಸ್ಥಳೀಯ ಪೊಲೀಸರು ಆಯಾ ಠಾಣಾ ವ್ಯಾಪ್ತಿ ಗಾಂಜಾ ಆರೋಪಿತರ ಮೇಲೆ ನಿಗಾ ಇಡಬೇಕು. ಮತ್ತೆ ಮತ್ತೆ ಗಾಂಜಾ ಮಾರಾಟದಲ್ಲಿ ತೊಡಗಿದರೆ ಕಠಿಣ ಕಾನೂನು ಜಾರಿಗೊಳಿಸಬೇಕು. ನಿಮ್ಮ ಮನೆಗಳಿಗೆ ಬಂದು ತಪಾಸಣೆ ಮಾಡಲಾಗುವುದು. ನಿಮ್ಮ ಮನೆಯಲ್ಲಿ ಗಾಂಜಾ ಇಡದೆ ಬೇರೆಡೆ ಇಟ್ಟಿರುವುದು ತಿಳಿದುಬಂದರೆ ಅದಕ್ಕೆ ನೀವೇ ನೇರ ಹೊಣೆ ಎಂದು ಹೇಳಿದರು.

    ನಿಮ್ಮ ಮೇಲೆ ನಿರಂತರವಾಗಿ ನಿಗಾ ಇಡಲಾಗುವುದು. ನಿಮ್ಮನ್ನು ಬಿಟ್ಟು ಬೇರೆ ಯಾರಾದರೂ ಗಾಂಜಾ ಮಾರಾಟ ಮಾಡುತ್ತಿದ್ದರೆ ನನ್ನ ಗಮನ (9480803301)ಕ್ಕೆ ತರಬೇಕು. ನಿಮ್ಮ ಹೆಸರು ಗುಪ್ತವಾಗಿಡಲಾಗುವುದು ಎಂದರು.

    ಎಎಸ್ಪಿ ಡಾ. ಎಚ್.ಟಿ.ಶೇಖರ್ ಮಾತನಾಡಿ, ಸನ್ನಡತೆ ಸರಿಪಡಿಸಿಕೊಳ್ಳದಿದ್ದರೆ, ಜಾಮೀನು ರದ್ದು ಮಾಡಲು ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಲಾಗುವುದು. ನಮ್ಮ ಬಳಿ ವ್ಯಾಪಾರ ಮಾಡುತ್ತಿದ್ದೇನೆ ಎಂದು ಫೋಸ್ ನೀಡಿ ಗಾಂಜಾ ಮಾರಾಟ, ಸಾಗಣೆಯಲ್ಲಿ ತೊಡಗಿದರೆ ಮುಂದೆ ಕಷ್ಟ ಅನುಭವಿಸುತ್ತೀರಿ ಎಂದು ಎಚ್ಚರಿಸಿದರು.

    ಕೋರ್ಟ್ ವಿಚಾರಣೆಗಳಿಗೆ ಖುದ್ದು ಹಾಜರಾಗಬೇಕು. ತಲೆಮರೆಸಿಕೊಂಡು ಓಡಾಡಿದರೆ ಮತ್ತೆ ಹಳೇ ಕೇಸ್​ಗಳ ಮೇಲೆ ಪುನಃ ಜೈಲಿಗೆ ಕಳುಹಿಸಲಾಗುವುದು ಎಂದರು. ಡಿವೈಎಸ್ಪಿ ಉಮೇಶ್ ನಾಯ್್ಕ ಪೊಲೀಸ್ ಇನ್​ಸ್ಪೆಕ್ಟರ್​ಗಳಾದ ಆರ್.ವಸಂತ್​ಕುಮಾರ್, ಟಿ.ಕೆ.ಚಂದ್ರಶೇಖರ್, ದೀಪಕ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts