More

    ಬೈಕಂಪಾಡಿ ಎಪಿಎಂಸಿ ಮಾರುಕಟ್ಟೆಗೆ ಸಗಟು ವ್ಯಾಪಾರಿಗಳ ಸ್ಥಳಾಂತರ

    ಮಂಗಳೂರು: ನಗರದ ಸೆಂಟ್ರಲ್ ಮಾರುಕಟ್ಟೆಯಲ್ಲಿದ್ದ ಸಗಟು ವ್ಯಾಪಾರಿಗಳು ಬೈಕಂಪಾಡಿ ಎಪಿಎಂಸಿ ಪ್ರಾಂಗಣಕ್ಕೆ ತಾತ್ಕಾಲಿಕ ಸ್ಥಳಾಂತರ ಪ್ರಕ್ರಿಯೆಗೆ ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದರೂ, ಪ್ರಸ್ತುತ ಉತ್ತಮ ಸ್ಪಂದನೆ ವ್ಯಕ್ತಪಡಿಸಿದ್ದಾರೆ. ಶನಿವಾರ ಶೇ.90ರಷ್ಟು ಸಗಟು ವ್ಯಾಪಾರಿಗಳು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ.

    ಪ್ರಾಂಗಣದೊಳಗೆ ವಿದ್ಯುತ್ ದೀಪ, ಕುಡಿಯುವ ನೀರು, ಶೌಚಗೃಹ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಲಾಗಿದೆ. ಗಿಡಗಂಟಿಗಳನ್ನು ಕಡಿದು ಶುಚಿಗೊಳಿಸಲಾಗಿದೆ. ಮೂರು ದಿನಗಳಿಂದ 90ರಷ್ಟು ಲಾರಿಗಳು ವಿವಿಧ ಕಡೆಗಳಿಂದ ತರಕಾರಿ, ಹಣ್ಣು ಹೇರಿಕೊಂಡು ಇಲ್ಲಿಗೆ ಬರುತ್ತಿವೆ. ಶನಿವಾರ 100ಕ್ಕೂ ಅಧಿಕ ವ್ಯಾಪಾರಿಗಳು ವ್ಯಾಪಾರ ನಡೆಸಿದ್ದಾರೆ.

    ಮುಂಜಾನೆ 3 ಗಂಟೆಯಿಂದಲೇ ಸಗಟು ವ್ಯಾಪಾರಿಗಳು ಎಪಿಎಂಸಿ ಪ್ರಾಂಗಣಕ್ಕೆ ಬರುತ್ತಿದ್ದಾರೆ. ದಿನದಿಂದ ದಿನಕ್ಕೆ ಚಿಲ್ಲರೆ ವ್ಯಾಪಾರಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ವ್ಯಾಪಾರಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಎಪಿಎಂಸಿ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಗಮನ ವಹಿಸುತ್ತಿದ್ದಾರೆ. ಬೆಳಗ್ಗೆ 11ರ ತನಕವೂ ವ್ಯಾಪಾರ ನಡೆಯುತ್ತಿದೆ.

    ಉಳಿದ ತರಕಾರಿಗಳನ್ನು ಸಂಗ್ರಹಿಸಿಡಲು ಗೋದಾಮು ವ್ಯವಸ್ಥೆ ಕಲ್ಪಿಸಲಾಗಿದೆ. ಕೆಲವು ಗೋದಾಮುಗಳಿಗೆ ಬಾಗಿಲು ಇನ್ನಷ್ಟೇ ಅಳವಡಿಸಬೇಕಾಗಿದೆ. ಅದಕ್ಕೆ ಬೇಕಾದ ಪರಿಕರಗಳು ಸಿಗದೇ ಇರುವುದರಿಂದ ಈ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆ ಇದೆ. ಲಭ್ಯವಿದ್ದ ಪರಿಕರಗಳನ್ನು ಉಪಯೋಗಿಸಿಕೊಂಡು ವಿದ್ಯುತ್ ದೀಪ, ಕುಡಿಯುವ ನೀರು ಹಾಗೂ ಇತರ ವ್ಯವಸ್ಥೆ ಮಾಡಲಾಗಿದೆ.

    ಬ್ಲೀಚಿಂಗ್ ಸ್ಪ್ರೇ ಛೇಂಬರ್: ಕರೊನಾ ವೈರಸ್ ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಎಪಿಎಂಸಿ ಪ್ರಾಂಗಣದೊಳಗೆ ಪ್ರವೇಶಿಸುವ ಪ್ರತಿಯೊಬ್ಬ ವ್ಯಾಪಾರಿಯೂ ಮಾಸ್ಕ್ ಧರಿಸಬೇಕು. ಒಳಗೆ ಹೋದ ಬಳಿಕ ತೆಗೆದಿಡದೆ ವ್ಯಾಪಾರ ಮಾಡುವಾಗಲೂ ಧರಿಸುವುದು ಕಡ್ಡಾಯ. ಪ್ರಾಂಗಣದೊಳಗೆ ಪ್ರವೇಶಿಸುವ ವ್ಯಾಪಾರಸ್ಥರನ್ನು ಬ್ಲೀಚಿಂಗ್ ಸ್ಪ್ರೇಗೆ ಒಳಪಡಿಸಲು ಛೇಂಬರ್ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದ್ದು, ಮನಪಾ ಆರೋಗ್ಯಾಧಿಕಾರಿಗಳು ನಿಗಾ ಇಟ್ಟಿದ್ದಾರೆ. ಪ್ರಾಂಗಣದೊಳಗೆ ಉತ್ಪಾನೆಯಾಗುವ ತರಕಾರಿ ತ್ಯಾಜ್ಯಗಳನ್ನು ಆಯಾ ದಿನವೇ ಆ್ಯಂಟನಿ ವೇಸ್ಟ್ ಸಂಸ್ಥೆ ಸಾಗಾಟ ಮಾಡುತ್ತಿದೆ. ಪ್ರತಿ ದಿನ ಪ್ರಾಂಗಣದೊಳಗೆ ಫಾಗಿಂಗ್, ಬ್ಲೀಚಿಂಗ್, ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ. ತಪಾಸಣೆಗೆ ಪೊಲೀಸರನ್ನೂ ನಿಯೋಜಿಸಲಾಗಿದೆ.

    ಕೆಲವು ಅಂಗಡಿ ಕೋಣೆ, ಗೋದಾಮುಗಳಿಗೆ ಬಾಗಿಲು ಮತ್ತಿತರ ಕಾಮಗಾರಿ ಆಗಬೇಕಾಗಿದೆ. ಪೂರಕ ಪರಿಕರ ಲಭ್ಯತೆ ಸಮಸ್ಯೆಯಿಂದ ವಿಳಂಬವಾಗುತ್ತಿದೆ. ಶೀಘ್ರ ಅಂಗಡಿ ಕೋಣೆ, ಗೋದಾಮು ಏಲಂ ಮಾಡಲಾಗುವುದು. ವ್ಯಾಪಾರಿಗಳು ಎಪಿಎಂಸಿ ಹಾಗೂ ಮನಪಾ ಲೈಸೆನ್ಸ್ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಬೇಕು. 15 ದಿನಗಳ ಒಳಗಾಗಿ ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲಿದೆ.
    – ಪ್ರವೀಣ್ ಕುಮಾರ್ ಎಸ್., ಅಧ್ಯಕ್ಷರು, ಎಪಿಎಂಸಿ ಮಂಗಳೂರು

    ಒಂದು ವಾರದಿಂದ ವ್ಯಾಪಾರ ಮಾಡುತ್ತಿದ್ದೇವೆ. ಹೋಗಿ ಬರಲು ದೂರವಾಗುವುದು ಬಿಟ್ಟರೆ ಉಳಿದಂತೆ ವ್ಯವಸ್ಥೆ ಉತ್ತಮವಾಗಿದೆ. ಬೇಕಾದಷ್ಟು ಸ್ಥಳಾವಕಾಶ ಇರುವುದರಿಂದ ಆರಾಮವಾಗಿ ವ್ಯಾಪಾರ ಮಾಡಲು ಸಾಧ್ಯವಾಗಿದೆ. ಪ್ರತಿಯೊಬ್ಬರೂ ಆರಂಭದಿಂದಲೇ ಶುಚಿತ್ವಕ್ಕೆ ಆದ್ಯತೆ ನೀಡಬೇಕಾಗಿದೆ.
    – ಮಹಮ್ಮದ್ ಮನ್ಸೂರ್, ಸಗಟು ವ್ಯಾಪಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts