More

    ಇವತ್ತಿನವರೆಗೂ ಕೋಟೆ ನಾಡು ಸೇಫ್

    ಅಶೋಕ ಶೆಟ್ಟರ
    ಬಾಗಲಕೋಟೆ: ಇಡೀ ವಿಶ್ವವನ್ನೆ ಗಢಗಢ ನಡುಗಿಸುತ್ತಿರುವ ಕರೊನಾ ವೈರಸ್ ಕರುನಾಡಲ್ಲೂ ರಣಕೇಕೆ ಹಾಕುತ್ತಿದೆ. ಇಂತ ಸಂದಿಗ್ಧ ಸಂದರ್ಭದಲ್ಲಿ ಕೋಟೆ ನಾಡು ಬಾಗಲಕೋಟೆ ಜಿಲ್ಲೆ ಈ ವರೆಗೂ ಸೇಫ್ ಝೋನ್‌ನಲ್ಲಿ ಇದೆ. ಆದರೆ, ಕಳೆದ ಮೂರ್ನಾಲ್ಕು ದಿನಗಳಿಂದ ಕ್ಷಣ ಕ್ಷಣಕ್ಕೂ ಆ ಒಂದು ಘಟನೆ ತೀವ್ರ ಆತಂಕ ಸೃಷ್ಟಿಸುತ್ತಿದೆ.

    ಜಿಲ್ಲೆಯ ಗಡಿಗಳಿಗೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ಹೊರರಾಜ್ಯದ ಜನರ ದಂಡು ಜಿಲ್ಲೆಯ ಜನರಲ್ಲಿ ಭಯ, ಭೀತಿ ಉಂಟು ಮಾಡುತ್ತಿದೆ. ಕಳೆದ ಒಂದು ವಾರದಲ್ಲಿ ಹೊರ ರಾಜ್ಯಗಳಿಂದ ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ಕಾಣಿಸಿಕೊಂಡವರು ಸಂಖ್ಯೆ ಹತ್ತು ಸಾವಿರ ಗಡಿ ತಲುಪುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

    ಮುಖ್ಯವಾಗಿ ಬೆಂಗಳೂರಿನಿಂದ ಗೂಡ್ಸ್‌ಗಾಡಿಗಳಲ್ಲಿ ತಂಡೋಪತಂಡವಾಗಿ ಬರುತ್ತಿರುವ ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ತಾನ ಮೂಲದವರು. ಒಂದು ಕಡೆಗೆ ರಾಜ್ಯ ಸರ್ಕಾರ ಯಾರು ಎಲ್ಲಿದ್ದಾರೆ ಅಲ್ಲಿಯೆ ಇರಬೇಕು ಎನ್ನುವ ಸೂಚನೆ ನೀಡಿದ್ದರೂ ಸಹ ಇಳಕಲ್ಲ ತಾಲೂಕಿನ ಹನಮನಾಳ ಚೆಕ್‌ಪೋಸ್ಟ್ ಕಡೆಗೆ ಹರಿದು ಬರುತ್ತಿರುವ ಜನರ ದಂಡು ದಿಗಿಲು ಮೂಡಿಸಿದೆ.

    ಶನಿವಾರ ಬೆಳಗಿನವರೆಗೂ ಜಿಲ್ಲಾಡಳಿತ ಸಂಗ್ರಹಿಸಿರುವ ಅಂಕಿ-ಅಂಶಗಳ ಪ್ರಕಾರವೇ ಹೊರಗಿನಿಂದ ನಮ್ಮ ಜಿಲ್ಲೆಯ ಗಡಿಗೆ ಬಂದು ತಲುಪಿದವರು ಸಂಖ್ಯೆ 8500 ಎನ್ನುವುದು. ಸಮಾಧಾನದ ವಿಷಯವೆಂದರೆ ಹೊರ ರಾಜ್ಯಗಳ ಜನರನ್ನು ಅಧಿಕೃತವಾಗಿ ಪ್ರವೇಶಕ್ಕೆ ಅವಕಾಶ ಕೊಟ್ಟಿಲ್ಲ. ಅನೇಕರನ್ನು ವಾಹನಗಳ ಸಮೇತ ವಾಪಸ್ಸು ಕಳುಹಿಸಲಾಗಿದೆ.

    ಆದರೆ, ಕೆಲವರು ಚೆಕ್‌ಪೋಸ್ಟ್ ಕಾಣಿಸುತ್ತಿದ್ದಂತೆ ವಾಹನ ನಿಲ್ಲಿಸಿ ಚೆಕ್‌ಪೋಸ್ಟ್ ತಪ್ಪಿಸಿ ಅಡ್ಡ ಮಾರ್ಗಗಳನ್ನು ಹಿಡಿದುಕೊಂಡು ಎಲ್ಲೆಲ್ಲೋ ಹೊರಟಿದ್ದಾರೆ. ಅವರು ಎಲ್ಲಿ ಸೇರಿಕೊಳ್ಳುತ್ತಾರೋ? ಅವರಲ್ಲಿ ಯಾರಾದರೂ ಕರೊನಾ ವೈರಸ್ ಸೋಂಕಿತರೇನಾದರೂ ಇದ್ದರೆ ಹೇಗೆ? ಎನ್ನುವ ಆತಂಕ ಜನರಲ್ಲಿ ಮನೆ ಮಾಡುತ್ತಿದೆ.

    ಇದೇ ಕಾರಣಕ್ಕೆ ಹೆದ್ದಾರಿಗೆ ಹೊಂದಿಕೊಂಡಿರುವ ಅನೇಕ ಗ್ರಾಮಸ್ಥರು ಹೊರ ರಾಜ್ಯಗಳ ಜನರ ಭೀತಿಯಿಂದಾಗಿ ತಮ್ಮ ಗ್ರಾಮಗಳಿಗೆ ಸ್ವಯಂ ನಿರ್ಬಂಧದ ಬೇಲಿ ಹಾಕುತ್ತಿದ್ದಾರೆ.

    ಮಾನವಿಯತೆ ಮೆರೆದ ಜನತೆ
    ಇನ್ನು ಬೆಂಗಳೂರಿನಿಂದ ಹರಿದು ಬರುತ್ತಿರುವ ಹೊರ ರಾಜ್ಯದ ಜನರಿಂದ ಆತಂಕ ಮನೆ ಮಾಡಿದ್ದರೂ ಅವರ ಪರದಾಟ ನೋಡಲಾಗದೆ ಅನೇಕರು ಅವರಿಗೆ ಹಣ್ಣು, ಬ್ರೆಡ್, ನೀರು ಕೊಟ್ಟು ಮಾನವಿಯತೆ ಮೆರೆಯುತ್ತಿದ್ದಾರೆ.

    ಲಾಕ್‌ಡೌನ್ ಹಿನ್ನೆಲೆ ಉದ್ಯೋಗ, ಕೈಯಲ್ಲಿ ದುಡ್ಡು ಇಲ್ಲದೆ ಹೇಗಾದರೂ ಮಾಡಿ ತಮ್ಮೂರು ಸೇರಿಕೊಳ್ಳಬೇಕು ಎನ್ನುವ ಧಾವಂತದಲ್ಲಿ ಸಾವಿರಾರು ಜನರು ಬರುತ್ತಿದ್ದಾರೆ. ಬಂದವರಲ್ಲಿ ಅನೇಕ ಮಹಿಳೆಯರು ಚಿಕ್ಕಚಿಕ್ಕ ಮಕ್ಕಳನ್ನು ಹೊತ್ತುಕೊಂಡು ಉಪವಾಸ, ವನವಾಸ ಮಾಡುತ್ತ ರಣಬಿಸಿಲಿನಲ್ಲಿ ನಡೆದುಕೊಂಡು ಹೋಗುವ ದೃಶ್ಯ ಕರಳು ಹಿಂಡಿದಂತಾಗುತ್ತಿದೆ.

    ಆ ತಾಯಂದಿರ ಪರಿಸ್ಥಿತಿ ನೋಡಲಾಗದೆ ಹನಮನಾಳ ಚೆಕ್‌ಪೋಸ್ಟ್‌ನಲ್ಲಿ ಅನೇಕರು ಹಣ್ಣು, ನೀರು, ಬ್ರೆಡ್ ಕೊಟ್ಟರು. ಏನಾದರಾಗಲಿ, ದಯವಿಟ್ಟು ನಮ್ಮೂರಿಗೆ ಹೋಗಲು ಬಿಡಿ ಎಂದು ಹೊರರಾಜ್ಯದ ನೂರಾರು ಜನರು ಅಂಗಲಾಚುತ್ತಿದ್ದಾರೆ. ಈ ಬಗ್ಗೆ ಚೆಕ್‌ಪೋಸ್ಟ್ ಅಧಿಕಾರಿಗಳಿಗೂ ಏನು ಮಾಡುವುದು ತಿಳಿಯದಂತಾಗಿದ್ದಾರೆ.

    ನೂರು ಕಿ.ಮೀ. ನಡೆದು ಬಂದ ಕನ್ನಡಿಗರು
    ಒಂದು ಕಡೆಗೆ ಹೊರ ರಾಜ್ಯದಿಂದ ಜನರು ಜಿಲ್ಲೆಯ ಗಡಿಗಳಲ್ಲಿ ಜನರು ಹರಿದು ಬರುತ್ತಿದ್ದಾರೆ. ಮತ್ತೊಂದು ಕಡೆಗೆ ತುತ್ತಿನ ಚೀಲ ತುಂಬಿಕೊಳ್ಳಲು ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಗುಳೆ ಹೋಗಿರುವ ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಜನರು ಅಲ್ಲಿ ಇರಲು ಆಗದೆ, ಇಲ್ಲಿಗೆ ಬರಲು ಆಗದೆ ಪರದಾಡುತ್ತಿದ್ದಾರೆ.

    ಗೋವಾದಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದ ನೂರಾರು ಜನರನ್ನು ಅಲ್ಲಿಂದ ಹೊರ ಹಾಕುತ್ತಿದ್ದಾರಂತೆ. ನಿನ್ನೆ ಗೋವಾದಿಂದ ತರಕಾರಿ ವಾಹನಗಳಲ್ಲಿ ಬೆಳಗಾವಿಗೆ ಬಂದಿದ್ದ ನೂರಾರು ಜನರು ಅಲ್ಲಿಂದ ವಾಹನ ಇಲ್ಲದೆ ನಡೆದುಕೊಂಡು ಬರುತ್ತಿದ್ದಾರೆ. ಶನಿವಾರ ಬೆಳಗ್ಗೆ ಬೆಳಗಾವಿಯಿಂದ ನಡೆದುಕೊಂಡು ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಲೋಕಾಪುರಗೆ ಆಗಮಿಸಿದ್ದ 29 ಜನರನ್ನು ಚೆಕ್ ಪೋಸ್ಟ್‌ನಲ್ಲಿ ತಡೆದರು. ಇದರಲ್ಲಿ ಮೂವರು ಜಿಲ್ಲೆಯವರು ಇದ್ದು, ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಯಿತು.

    ಉಳಿದ 26 ಜನರ ಬಗ್ಗೆ ಜಿಲ್ಲೆಯ ಅಧಿಕಾರಿಗಳು ಚರ್ಚಿಸಿ, ಸಂಜೆ ವೇಳೆ ಅವರನ್ನು ಬಾಗಲಕೋಟೆ ತಾಲೂಕಿನ ರಾಂಪೂರ ಗಡಿವರೆಗೆ ಹೋಗಲು ವಾಹನ ವ್ಯವಸ್ಥೆ ಮಾಡಿ ಕಳುಹಿಸಿದರು. ಅಲ್ಲಿಂದ ವಿಜಯಪುರ ಜಿಲ್ಲಾಡಳಿತ ಅವರ ಬಗ್ಗೆ ಮುಂದಿನ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ.

    ಮಹಾರಾಷ್ಟ್ರದಲ್ಲಿ ಕಣ್ಣೀರು ಹಾಕುತ್ತಿರುವ ಜಿಲ್ಲೆಯವರು
    ಇನ್ನು ಕರೊನಾ ಎಫೆಕ್ಟ್‌ನ ಲಾಕ್‌ಡೌನ್‌ನಿಂದಾಗಿ ಮಹಾರಾಷ್ಟ್ರದಲ್ಲಿ ದುಡಿಯಲು ಹೋಗಿದ್ದ 12 ಜನರು ಕೆಲಸ ಇಲ್ಲದೆ, ಕೈಯಲ್ಲಿ ದುಡ್ಡು ಇಲ್ಲದೆ ಹಸಿವಿನಿಂದ ಬಳಲುತ್ತಿದ್ದಾರೆ. ಆ ಬಗ್ಗೆ ಅವರೇ ತಮ್ಮ ಪರಿಸ್ಥಿತಿ ಬಗ್ಗೆ ವಿಡಿಯೋ ಮಾಡಿ, ನಮ್ಮ ನೆರವಿಗೆ ಬನ್ನಿ ಬಾಗಲಕೋಟೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

    ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಾನಾಪುರ ತಾಂಡಾ, ಹುಲ್ಲಿಕೇರಿ ತಾಂಡಾದ 12 ಜನರು ಕಲ್ಲು ಒಡೆಯುವ ಕೆಲಸಕ್ಕೆ ತೆರಳಿದ್ದಾರೆ. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆ ರಾಜಾಪುರ ತಾಲೂಕಿನ ಹಾತಿವ್ಲಾ ಗ್ರಾಮದಿಂದ ಮೂರು ಕಿ.ಮೀ. ದೂರದಲ್ಲಿ ಇರುವ ಗುಡ್ಡಗಾಡು ಪ್ರದೇಶದಲ್ಲಿ ಕಲ್ಲು ಒಡೆಯುತ್ತಿದ್ದರು. ಇದೀಗ ಒಂದು ವಾರದಿಂದ ಕೆಲಸ ಇಲ್ಲ, ಕೈಯಲ್ಲಿ ದುಡ್ಡಿಲ್ಲ. ಹೋರಗೆ ಹೋಗಲು ಪೊಲೀಸರು ಬಿಡುತ್ತಿಲ್ಲ. ತಿನ್ನಲು ಆಹಾರ ಇಲ್ಲದೆ ಸಂಕಷ್ಟದಲ್ಲಿ ಇದ್ದೇವೆ. ಚಿಕ್ಕ ಚಿಕ್ಕ ಮಕ್ಕಳು ಇದ್ದಾರೆ. ತಾವು ವಾಸ ಇರುವ ಗುಡಿಸಲಲ್ಲಿ ಇರುವ ಖಾಲಿ ಪಾತ್ರೆಗಳನ್ನು ತೋರಿಸಿ ಅಳಲು ತೋಡಿಕೊಂಡಿರುವ ವಿಡಿಯೋ ತಮ್ಮ ಆಪ್ತರಿಗೆ ಕಳುಹಿಸಿದ್ದು, ತಮ್ಮ ಸಹಾಯಕ್ಕೆ ಬರುವಂತೆ ಜಿಲ್ಲಾಡಳಿತಕ್ಕೆ ಪರಿಪರಿಯಾಗಿ ಬೇಡಿಕೊಂಡಿದ್ದಾರೆ.

    ಇಚಲಕರಂಜಿಯಲ್ಲಿ 250 ಜನರ ಸಂಕಷ್ಟ
    ಮಹಾರಾಷ್ಟ್ರದ ಇಚಲಕರಂಜಿ ನಗರಕ್ಕೆ ಕೂಲಿ ಕೆಲಸಕ್ಕೆ ತೆರಳಿದ್ದ ಗುಳೇದಗುಡ್ಡ ತಾಲೂಕಿನ ಹಾನಾಪುರ, ಹುಲ್ಲಿಕೇರಿ ತಾಂಡಾದ 250 ಕಾರ್ಮಿಕರು ಕೆಲಸ ಇಲ್ಲದೆ ಊಟಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ. ನಮ್ಮ ಗ್ರಾಮಕ್ಕೆ ತೆರಳಲು ವ್ಯವಸ್ಥೆ ಮಾಡಿ, ಇಲ್ಲವೆ ಇಲ್ಲಿಯೆ ಊಟಕ್ಕೆ ಅನುಕೂಲ ಮಾಡಿ ಎಂದು ಮನವಿ ಮಾಡಿದ್ದಾರೆ.

    166 ಜನರ ಆರೋಗ್ಯದ ಮೇಲೆ ನಿಗಾ
    ಜಿಲ್ಲೆಯಲ್ಲಿ ಈ ವರೆಗೂ 166 ಜನರ ಆರೋಗ್ಯದ ಮೇಲೆ ಜಿಲ್ಲಾಡಳಿತ ನಿಗಾ ವಹಿಸಿದೆ. 154 ಜನರಿಗೆ ಮನೆಯಲ್ಲಿ ಐಸೋಲೇಶನ್‌ಗೆ ಒಳಪಡಿಸಲಾಗಿದೆ. 12 ಜನರನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಒಟ್ಟು 65 ಜನರಿಗೆ 14 ದಿನಗಳ ಐಸೋಲೇಶನ್ ಪೂರ್ಣಗೊಂಡಿದೆ. ಒಟ್ಟು 12 ಜನರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಿದ್ದು, 10 ನೆಗಟಿವ್ ಬಂದಿದೆ. ಒಂದು ಮಾದರಿ ತಿರಸ್ಕೃತಗೊಂಡಿದ್ದು, ಒಂದು ಮಾದರಿಯ ವರದಿ ಬರಬೇಕಿದೆ. ಹೀಗಾಗಿ ಜಿಲ್ಲೆಯಲ್ಲಿ ಈ ವರೆಗೂ ಕರೊನಾ ವೈರಸ್ ಸೋಂಕು ಪತ್ತೆ ಆಗಿಲ್ಲ, ಆತಂಕ ಪಡುವ ಅಗತ್ಯ ಇಲ್ಲ. ಆದರೆ, ಎಚ್ಚರಿಕೆ ಇರಲಿ, ಸರ್ಕಾರ ಮತ್ತು ಜಿಲ್ಲಾಡಳಿತದ ಆದೇಶವನ್ನು ಚಾಚು ತಪ್ಪದೆ ಪಾಲಿಸುವ ಮೂಲಕ ನಿಮ್ಮ ಆರೋಗ್ಯ ರಕ್ಷಣೆ ಜೊತೆಗೆ ಸಮಾಜದ ಇತರರ ಆರೋಗ್ಯ ರಕ್ಷಣೆಗೂ ಸಹಕರಿಸುವಂತೆ ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಜಿಲ್ಲಾಧಿಕಾರಿ ಕ್ಯಾಪ್ಟನ್ ಕೆ. ರಾಜೇಂದ್ರ ಅವರು ಸಾರ್ವಜನಿಕರಲ್ಲಿ ಕೋರಿದ್ದಾರೆ.

    ಜಿಲ್ಲೆಯ ಗಡಿಗಳಲ್ಲಿ ಹಾಕಿರುವ ಚೆಕ್‌ಪೋಸ್ಟ್‌ನಿಂದ ಕಟ್ಟುನಿಟ್ಟಾಗಿ ಪರಿಶೀಲನೆ ಮಾಡಲಾಗುತ್ತಿದೆ. ಈಗಾಗಲೆ ನಮ್ಮ ಗಡಿಯಲ್ಲಿ ಬಂದು ಸೇರಿಕೊಂಡಿದ್ದರೆ ಈ ಬಗ್ಗೆ ಸೂಕ್ತ ಕ್ರಮವನ್ನು ಜಿಲ್ಲಾ ಟಾಸ್ಕ್‌ಪೋರ್ಸ್ ಸಮಿತಿ ಕೈಗೊಳ್ಳುತ್ತದೆ.
    ಲೋಕೇಶ ಜಗಲಾಸರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಬಾಗಲಕೋಟೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts