More

    ಬಡವರ ಪಾಲಿಗೆ ವರದಾನವಾಗಲಿ: ಸಿದ್ಧೇಶ್ವರ ಸ್ವಾಮೀಜಿ

    ಬಾಗಲಕೋಟೆ : ಕರುಣೆಯ ಗೋಡೆ ಹೆಸರಿನಲ್ಲಿ ಬಡವರ ಸೇವೆಗೆ ಮುಂದಾಗಿರುವುದು ದಾನ-ಧರ್ಮ-ಸಾಮಾಜಿಕ ಸೇವೆಯ ಹೊಸ ಪರಂಪರೆಯಾಗಿದೆ. ಇದು ಇನ್ನೂ ಹೆಮ್ಮರವಾಗಿ ಬೆಳೆಯಬೇಕು. ಬಡವರು ತಮಗೆ ಬೇಕಾದ ವಸ್ತುಗಳನ್ನು ಯಾವ ಸಂಕೋಚವಿಲ್ಲದೆ ಇಲ್ಲಿಗೆ ಬಂದು ಪಡೆಯಬೇಕು ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

    ನಗರದ ತುಳಸಿಗಿರೀಶ ಮಧುಮೇಹ ಆಸ್ಪತ್ರೆ ಮತ್ತು ಮಧುಮೇಹ ಸಂಶೋಧನಾ ಪ್ರತಿಷ್ಠಾನ ಹೊಸದಾಗಿ ಆರಂಭಿಸಿದ ಕರುಣೆಯ ಗೋಡೆ (ನಿಮಗೆ ಬೇಡವಾದ ವಸ್ತುಗಳನ್ನು ಇಡಿ, ಅಗತ್ಯವಿದ್ದರೆ ತೆಗೆದುಕೊಳ್ಳಿ) ನೂತನ ಸೇವೆಯನ್ನು ಶನಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

    ಶ್ರೀಮಂತರು, ಬಡವರು ಎನ್ನದೆ ತಾವು ಬಳಸಿ, ಇಲ್ಲವೇ ಬೇಡವಾದ ವಸ್ತುಗಳನ್ನು ಇಲ್ಲಿಟ್ಟು, ಬೇಕಾಗುವ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ಒಂದು ಒಳ್ಳೆಯ ಸಾಮಾಜಿಕ ಸೇವೆ. ತಮಗೆ ಬೇಡವಾದ ವಸ್ತುಗಳನ್ನು ತಮ್ಮ ಮನೆಯ ಎದುರಿನ ರಸ್ತೆಯ ಬದಿಗೆ ಇಟ್ಟಿರುತ್ತಾರೆ. ಆ ವಸ್ತುಗಳನ್ನು ಬೇಕಾದವರು ತೆಗೆದುಕೊಂಡು ಹೋಗುತ್ತಾರೆ. ಇಂತಹ ದಾನದ ಸೇವೆ ವಿದೇಶದಲ್ಲಿ ನೋಡಿದ್ದೆ. ನಮ್ಮಲ್ಲಿ ಇರಲಿಲ್ಲ. ಬಾಗಲಕೋಟೆಯಲ್ಲಿ ದಾನ-ಸೇವೆಯ ಹೊಸ ಪರಂಪರೆ ಆರಂಭಿಸಿರುವುದು ಬಹಳ ಸಂತೋಷ. ಇದು ಎಲ್ಲ ಬಡವರ ಪಾಲಿನ ಬದುಕಿನ ಗೋಡೆಯಾಗಬೇಕು ಎಂದರು.

    ಕೇಸರಟ್ಟಿಯ ಬಾಲಶಿವಯೋಗಿ ಸೋಮಲಿಂಗ ಸ್ವಾಮೀಜಿ ಮಾತನಾಡಿ, ದಯವೇ ಧರ್ಮದ ಮೂಲವಯ್ಯ ಎಂಬಂತೆ ಕರುಣೆಯ ಗೋಡೆ, ಸಾಮಾಜಿಕ ಸೇವೆಗೆ ಸಜ್ಜಾಗಿದೆ. ಬಡವರು, ಹಿಂದುಳಿದವರಿಗೆ ಇದು ಸಹಕಾರಿಯಾಗಲಿದೆ. ಎಲ್ಲರಲ್ಲೂ ದಾನ ಮಾಡುವ ಸ್ವಭಾವ ಬೆಳೆಯಬೇಕು. ಆಸೆ ಇಲ್ಲದ ಸೇವೆ ಇರಬೇಕು ಎಂದು ತಿಳಿಸಿದರು.

    ತುಳಸಿಗಿರೀಶ ಮಧುಮೇಹ ಆಸ್ಪತ್ರೆ ಮತ್ತು ಮಧುಮೇಹ ಸಂಶೋಧನಾ ಪ್ರತಿಷ್ಠಾನದ ಮುಖ್ಯಸ್ಥ ಡಾ.ಬಾಬುರಾಜೇಂದ್ರ ನಾಯಕ ಮಾತನಾಡಿ, ನಮ್ಮಲ್ಲಿ ಎಷ್ಟೋ ವಸ್ತುಗಳನ್ನು ಬಳಸದೆ ಹಾಗೆ ಇಡುತ್ತೇವೆ. ಕೆಲವರು ಎಸೆಯುತ್ತಾರೆ. ಅಂತಹ ವಸ್ತುಗಳು ಬಡವರ ಮನೆ ಸೇರಬೇಕು. ಅವರಿಗೆ ನಿತ್ಯ ಬಳಕೆಗೆ ಬರುವ ವಸ್ತುಗಳು ದೊರೆಯಬೇಕು. ಅದಕ್ಕಾಗಿ ಕರುಣೆಯ ಗೋಡೆ ಎಂಬ ಹೊಸ ಪರಿಕಲ್ಪನೆಯ ಸೇವೆ ಆರಂಭಿಸಲಾಗಿದೆ. ನಗರದ ಜನರು, ತಮಗೆ ಬೇಡವಾದ, ಬಳಸಲು ಅಗತ್ಯವಾಗುವ ವಸ್ತುಗಳನ್ನು ಇಲ್ಲಿಗೆ ತಂದು ಇಡಬೇಕು. ಹಲವು ಸಂಘಟನೆಗಳು ಬೆಂಬಲ ನೀಡಿದ್ದು, ಪ್ರಥಮ ಬಾರಿಗೆ ಆರಂಭವಾದ ಈ ಕರುಣೆಯ ಗೋಡೆಗೆ ಎಲ್ಲರ ಸಹಕಾರ ಇರಲಿ ಎಂದು ಮನವಿ ಮಾಡಿದರು.

    ಡಾ.ಶೀತಲ ನಾಯಕ, ಡಾ.ಸಂದೀಪ ಹುಯಿಲಗೋಳ, ಬಿಎಸ್‌ಡಬ್ಲುೃ ಸದಸ್ಯ ಪ್ರದೀಪ ಕುಲಕರ್ಣಿ, ಅಮರೇಶ ಕೊಳ್ಳಿ, ಮಂಜುಳಾ ಮಿಸ್ಕಿನ್, ಪ್ರಕಾಶ ನಾಯಕ, ಬಾಲಗಂಗಾಧರ ನಾಯಕ, ಸುನೀಲ ನಾಯಕ ಇತರರು ಉಪಸ್ಥಿತರಿದ್ದರು.

    ದೇವರು ನಮಗೆ ಮಳೆ, ಗಾಳಿ, ನೀರು ಕೊಟ್ಟಿದ್ದಾನೆ. ದೇವರಿಗೆ ನಾನು ಕೊಟ್ಟೇ ಎಂಬ ಭಾವ ಇರಲ್ಲ. ಮೌನವಾಗಿ ಕೊಡುತ್ತಲೇ ಇರುತ್ತಾನೆ. ನಾವೆಲ್ಲ ಪಡೆಯುತ್ತಲೇ ಇರುತ್ತೇವೆ. ಪಡೆದ ನಾವೆಲ್ಲ ಒಂದಷ್ಟು ದಾನ-ಧರ್ಮ ಮಾಡಬೇಕು. ಈ ಕರುಣೆಯ ಗೋಡೆ ಮೇಲೆ ಎಲ್ಲರೂ ಒಂದಷ್ಟು ವಸ್ತುಗಳನ್ನು ಇಡೋಣ. ದಾನದ ಹೊಸ ಪದ್ಧತಿ ಇದು. ಇದೊಂದು ಸಮಾಧಾನದ ಕಾರ್ಯ. ಮೌನವಾಗಿ ಮಾಡಿದ ದಾನ, ಮೌನವಾಗಿ ಸ್ವೀಕಾರ ಮಾಡಬೇಕು. ಬಡತನ ನಿರ್ಮೂಲನೆಗೆ ಇದೊಂದು ರಹದಾರಿ.
    ಸಿದ್ಧೇಶ್ವರ ಸ್ವಾಮೀಜಿ ವಿಜಯಪುರ ಜ್ಞಾನಯೋಗಾಶ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts