More

    ಸಭೆಗೆ ಬಾರದ ಅಧಿಕಾರಿಗಳಿಗೆ ನೋಟಿಸ್ ಕೊಡಿ

    ಬಾಗಲಕೋಟೆ: ಅಭಿವೃದ್ಧಿ ಕೈಗೊಳ್ಳಲು ರಾಜ್ಯ ಸರ್ಕಾರ ಒತ್ತು ಕೊಡುತ್ತಿದೆ. ಆದರೆ, ಅಧಿಕಾರಿಗಳ ಕಾರ್ಯವೈಖರಿಗಳು ಸಾಥ್ ನೀಡುತ್ತಿಲ್ಲ. ಸಭೆಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಕೆಲವು ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದು, ಅವರಿಗೆ ನೋಟಿಸ್ ಕೊಡಿ ಎಂದು ಶಾಸಕ ವೀರಣ್ಣ ಚರಂತಿಮಠ ಖಡಕ್ ಸೂಚನೆ ನೀಡಿದರು.

    ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಸೋಮವಾರ ಬಾಗಲಕೋಟೆ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ಬಾಗಲಕೋಟೆ, ಹುನಗುಂದ ತಾಲೂಕು ಪಂಚಾಯಿತಿ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕೋವಿಡ್ ಸಂಕಷ್ಟದ ಸಂದರ್ಭದಲ್ಲಿಯೂ ರಾಜ್ಯ ಸರ್ಕಾರ ಅಭಿವೃದ್ಧಿ ಒತ್ತು ನೀಡಿದೆ. ನಿಗದಿತ ಅವಧಿಯೊಳಗೆ ಪ್ರಗತಿ ಸಾಧಿಸುತ್ತಿಲ್ಲ. ಹೀಗೆ ಆದರೆ ಸಹಿಸಲು ಸಾಧ್ಯವಿಲ್ಲ. ಅಧಿಕಾರಿಗಳು ತಮ್ಮ ಕೆಲಸ ಕಾರ್ಯಗಳಲ್ಲಿ ಸುಧಾರಣೆ ಮಾಡಿಕೊಳ್ಳಬೇಕು. ಸರ್ಕಾರ ಅನುದಾನ ಲ್ಯಾಪ್ಸ್ ಆಗದಂತೆ ಜಾಗೃತಿ ವಹಿಸಬೇಕು. ಯೋಜನೆ, ಕಾರ್ಯಕ್ರಮ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಮಾರ್ಚ್ ಅಂತ್ಯಕ್ಕೆ ಕಾಮಗಾರಿಗಳು ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ಕಾರಣ ಹೇಳಬಾರದು ಎಂದು ನಿರ್ದೇಶನ ನೀಡಿದರು.

    ಬಾಗಲಕೋಟೆ ತಾಲೂಕಿನ ಸೀಗಿಕೇರಿ ಗ್ರಾಮದ ಜನರಿಗೆ ಸ್ಮಶಾನವಿಲ್ಲ. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದಾರೆ. ಕಂದಾಯ ಭೂಮಿಯು ಲಭ್ಯತೆ ಇಲ್ಲದ ಕಾರಣ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಸೀಗಿಕೇರಿ ಸಮೀಪದ ಭೂಮಿ ಸ್ಮಶಾನ ನೀಡಬೇಕು. ಇನ್ನು ಅಚನೂರು, ಚೌಡಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅನುದಾನ ಲಭ್ಯವಿದ್ದರೂ ಭವನ ನಿರ್ಮಾಣವಾಗಿಲ್ಲ. ಕೆಲವು ಕಡೆ ತಾಂತ್ರಿಕ ಸಮಸ್ಯೆ ಇದೆ. ಅವುಗಳನ್ನು ಬಗೆಹರಿಸಿ ಕೂಡಲೇ ಭವನ ನಿರ್ಮಾಣ ಮಾಡಬೇಕು. ಅನುದಾನ ಲ್ಯಾಪ್ಸ್ ಆಗದಂತೆ ನೋಡಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಇನ್ನು ಶಿರೂರು ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳ ಮುಖ್ಯರಸ್ತೆಗಳಲ್ಲಿ ಅನಧಿಕೃತವಾಗಿ ಗೂಡಂಗಡಿ ನಿರ್ಮಿಸಲಾಗಿದೆ. ಅವುಗಳ ತೆರೆವಿಗೆ ಅಧಿಕಾರಿಗಳು ಕ್ರಮ ವಹಿಸಬೇಕು. ಹಳ್ಳಿಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಒತ್ತು ನೀಡಬೇಕು. ಶೌಚಗೃಹ ನಿರ್ಮಾಣ, ಶಾಲೆ ಕೊಠಡಿಗಳ ನಿರ್ಮಾಣ, ನವೀಕರಣ ಸೇರಿದಂತೆ ಎಲ್ಲ ರೀತಿಯ ಸುಧಾರಣೆ ಕ್ರಮ ತೆಗೆದುಕೊಂಡು ಗ್ರಾಮೀಣಾಭಿವೃದ್ಧಿ ಮಾಡಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಗೋಲ್‌ಮಾಲ್ ನಡೆಯದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

    ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಪ್ರಗತಿ ಸಾಧಿಸಿದ ಅಧಿಕಾರಿಗಳಿಗೆ ವೀರಣ್ಣ ಚರಂತಿಮಠ ತರಾಟೆಗೆ ತೆಗೆದುಕೊಂಡರು. ಬಾಗಲಕೋಟೆ ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ, ಹುನಗುಂದ ತಾಪಂ ಅಧ್ಯಕ್ಷ ಅನೀಲ ನಾಡಗೌಡ, ತಾಪಂ ಇಒ ಎನ್.ವೈ.ಬಸರಿಗಿಡದ, ತಹಸೀಲ್ದಾರಗಳಾದ ಗುರುಸಿದ್ದಯ್ಯ ಹಿರೇಮಠ, ಬಸವರಾಜ ನಾಗರಾಳ ಸೇರಿದಂತೆ ಇತರರು ಇದ್ದರು.

    ಕಳ್ಳಬಟ್ಟಿ ಸರಾಯಿ ಮೇಲೆ ಕಠಿಣ ಕ್ರಮ
    ಹುನಗುಂದ ತಾಲೂಕಿನ ಅಬಕಾರಿ ಅಧಿಕಾರಿ ಮಂಜುನಾಥ ಸಿಂಗರಡ್ಡಿ ಮಾತನಾಡಿ, ತಾಲೂಕಿನ ವಿವಿಧೆಡೆ ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದ ಅಡ್ಡೆಗಳ ಮೇಲೆ ದಾಳಿ ಮಾಡಲಾಗಿದೆ. ಲೈಸೆನ್ಸ್ ಪಡೆದುಕೊಂಡರೂ ನಕಲಿ ಮದ್ಯ ಮಾರಾಟ ಮಾಡಿದವರಿಗೆ ದಂಡ ವಿಧಿಸಲಾಗಿದೆ. ಒಂದು ವರ್ಷದ ಅವಧಿಯಲ್ಲಿ 38 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಕಳ್ಳಬಟ್ಟ್ಟಿ ತಡೆಗಟ್ಟಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

    ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ವೀರಣ್ಣ ಚರಂತಿಮಠ, ಕೆಲವು ಕಡೆ ಬ್ಯಾರಲ್‌ಗಟ್ಟಲೆ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುವ ಪ್ರಕರಣಗಳು ಕಂಡು ಬಂದಿವೆ. ಈ ಬಗ್ಗೆ ಕ್ರಮ ವಹಿಸಬೇಕು. ಅನಧಿಕೃತ ಮಳಿಗೆಗಳ ಮೇಲೆಯೂ ದಾಳಿ ಮಾಡುವುದರ ಜತೆಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts