More

    ಕೂಡಲೇ ಒತ್ತುವರಿ ತೆರವುಗೊಳಿಸಿ

    ಬಾಗಲಕೋಟೆ: ಹಳೇ ಬಾಗಲಕೋಟೆ, ವಿದ್ಯಾಗಿರಿ ಭಾಗದಲ್ಲಿ ರಸ್ತೆ, ಚರಂಡಿ, ನಗರಸಭೆಗೆ ಸೇರಿದ ಜಾಗಗಳು ವ್ಯಾಪಕ ಪ್ರಮಾಣದಲ್ಲಿ ಒತ್ತುವರಿಯಾಗಿವೆ. ಕಣ್ಣಾರೆ ಕಂಡರೂ ಸುಮ್ಮನೇ ಕುಳಿತರೆ ಹೇಗೆ?. ಕೂಡಲೇ ಒತ್ತುವರಿ ತೆರವುಗೊಳಿಸಬೇಕು ಎಂದು ಶಾಸಕ ವೀರಣ್ಣ ಚರಂತಿಮಠ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

    ನಗರದ ನಗರಸಭೆ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಾಗಲಕೋಟೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಂಕಾ ಮಸೀದಿ ಹಿಂದುಗಡೆ, ಹಿನ್ನೀರು ಪ್ರದೇಶದ ಬಯಲು ಜಾಗ, ವಿದ್ಯಾಗಿರಿಯ ಕೆಲವು ಬಡಾವಣೆ, ಕಿಲ್ಲಾ ಪ್ರದೇಶದಲ್ಲಿ ಅತಿಕ್ರಮಣ ಮಾಡಿಕೊಂಡು ಶೆಡ್, ಶೌಚಗೃಹ, ಕಟ್ಟಡ ನಿರ್ಮಿಸಲಾಗಿದೆ. ಇದರಿಂದ ಕಾಮಗಾರಿಗಳು ನಡೆಸಲು ಸಾಧ್ಯವಾಗುತ್ತಿಲ್ಲ. ರಸ್ತೆಗಳು ಇಕ್ಕಾಟಾಗಿ ರೂಪುಗೊಂಡಿವೆ. ಅನಧಿಕೃತವಾಗಿ ಕಸಾಯಿ ಖಾನೆಗಳು ನಿರ್ಮಾಣಗೊಂಡಿವೆ. ಮುಲಾಜಿಲ್ಲದೆ ಅತಿಕ್ರಮಣ ತೆರವುಗೊಳಿಸಬೇಕು ಎಂದರು. ಸದಸ್ಯರು ಕೂಡ ಈ ಕುರಿತು ಸಭೆಯಲ್ಲಿ ಧ್ವನಿ ಎತ್ತಿದರು.

    ಹಿನ್ನೀರು ಪ್ರದೇಶದಲ್ಲಿ ಅರಣ್ಯೀಕರಣ
    ಬಾಗಲಕೋಟೆ ನಗರದ ಹಿನ್ನೀರು ಪ್ರದೇಶದ ವಿವಿಧೆಡೆ ವ್ಯಾಪಕ ಪ್ರಮಾಣದಲ್ಲಿ ಬಯಲು ಜಾಗ ಇದೆ. ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರ ಗಮನ ತಂದ ಬಳಿಕ ಅರಣ್ಯ ಇಲಾಖೆ ಸಹಯೋಗದಲ್ಲಿ ಹಿನ್ನೀರು ಪ್ರದೇಶದಲ್ಲಿ ಅರಣ್ಯೀಕರಣ ಮಾಡಲು ಒಪ್ಪಿಗೆ ನೀಡಿದ್ದಾರೆ. ನಗರಸಭೆ, ಬಿಟಿಡಿಎ ನೇತೃತ್ವದಲ್ಲಿ ಬಯಲು ಪ್ರದೇಶ ಸ್ವಚ್ಛಗೊಳಿಸಿ ಜೂನ್ ವೇಳೆ ಸಸಿಗಳನ್ನು ನೆಡಲಾಗುವುದು ಎಂದು ಶಾಸಕ ಚರಂತಿಮಠ ಸಭೆಗೆ ತಿಳಿಸಿದರು.

    ನವನಗರದಲ್ಲಿ ತೆರಿಗೆ ಸಂಗ್ರಹಿಸಿ
    ನಗರಸಭೆ ಸಿಎ ನಿವೇಶನಗಳನ್ನು ಬುಡಾಗೆ ಹಸ್ತಾಂತರ ಮಾಡಲು ಕ್ರಮ ತೆಗೆದುಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ಹರಾಜು ಹಾಕಲಾಗುವುದು. ನವನಗರದ ಯೂನಿಟ್-1, 2 ರಲ್ಲಿ ಕೆಜೆಪಿ ಮಾಡಲು ಬಿಟಿಡಿಎದಿಂದ 27 ಲಕ್ಷ ರೂ. ಪೌರಾಡಳಿತ ಇಲಾಖೆಗೆ ಭರಣ ಮಾಡಲಾಗಿದೆ. ಶೀಘ್ರದಲ್ಲಿ ಕೆಲಸ ಪೂರ್ಣಗೊಂಡು ಉತಾರೆ ನೀಡಲಾಗುವುದು. ನವನಗರದಲ್ಲಿನ ಕಟ್ಟಡ, ನಿವೇಶನ ನೀರು, ಆಸ್ತಿ ತೆರಿಗೆ ಸಂಗ್ರಹಕ್ಕೆ ಆಯುಕ್ತರು ಕ್ರಮ ತೆಗೆದುಕೊಳ್ಳಬೇಕು ಎಂದರು.

    ಈ ವೇಳೆ ಆಯುಕ್ತ ವಿ.ಮುನಿಶಾಮಪ್ಪ ಪ್ರತಿಕ್ರಿಯೆ ನೀಡಿ, ನವನಗರದ ಎರಡು ಯೂನಿಟ್‌ಗಳು ಬಿಟಿಡಿಎದಿಂದ ನಗರಸಭೆಗೆ ಹಸ್ತಾಂತರವಾಗಿಲ್ಲ. ಹೀಗಾಗಿ ತೆರಿಗೆ ಭರಣ ಬಗ್ಗೆ ಕೆಲವು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ವೀರಣ್ಣ ಚರಂತಿಮಠ ವಾರ್ಡ್ ರಚನೆ ಮಾಡಲಾಗಿದೆ ಎಂದ ಮೇಲೆ ನವನಗರ ನಗರಸಭೆಗೆ ಹಸ್ತಾಂತರ ಮಾಡಲಾಗಿದೆ ಎಂದರ್ಥ. ತೆರಿಗೆ ಸಂಗ್ರಹ ಬಗ್ಗೆ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ಠರಾವು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಸೂಚನೆ ನೀಡಿದರು.

    ಅಲ್ಲದೆ, ಬಡವರಿಗೆ ಆಶ್ರಯ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಿಕೊಳ್ಳಲು 15 ಎಕರೆ ಜಮೀನು ಬಿಟಿಡಿಎದಿಂದ ನಗರಸಭೆಗೆ ಹಸ್ತಾಂತರ ಮಾಡಲಾಗಿದೆ. ನಗರಸಭೆಯಿಂದ 20 ಲಕ್ಷ ರೂ. ಬಿಟಿಡಿಎದಿಂದ ಪಾವತಿಸಬೇಕು ಎಂದು ಪುನರ್ವಸತಿ ಅಧಿಕಾರಿ ಗಣಪತಿ ಪಾಟೀಲ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯಕ್ತ ವಿ.ಮುನಿಶಾಮಪ್ಪ ಆಶ್ರಯ ಬಡಾವಣೆಯಿಂದ ನಗರಸಭೆಗೆ ಯಾವುದೇ ಆದಾಯ ಇಲ್ಲ. ಸ್ಲಂ ಬೋರ್ಡ್ ಕಾಲನಿ ನಿರ್ಮಾಣ ಮಾಡಲಾಗುತ್ತದೆ. ಆದ್ದರಿಂದ ಅವರಿಂದ ಹಣ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ನಗರಸಭೆಯಿಂದ ಕಷ್ಟವಾಗಲಿದೆ ಎಂದು ಹೇಳಿದರು.

    ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ಸಂಸದ ಪಿ.ಸಿ.ಗದ್ದಿಗೌಡರ, ಬಿಟಿಡಿಎ ಪುನರ್ವಸತಿ ಅಧಿಕಾರಿ ಗಣಪತಿ ಪಾಟೀಲ, ಸದಸ್ಯರಾದ ಶಶಿಕಲಾ ಮಜ್ಜಗಿ, ಸವಿತಾ ಲೆಂಕೆನ್ನವರ, ಸರಸ್ವತಿ ಕುರಬರ, ರಾಜು ಬಳೂಲಮಠ, ಶ್ರೀನಿವಾಸ ಸಜ್ಜನ, ಚನ್ನವೀರ ಅಂಗಡಿ, ಹಾಜಿಸಾಬ ದಂಡಿನ ಹಾಗೂ ಅಧಿಕಾರಿಗಳು ಇದ್ದರು.

    ಸಮಸ್ಯೆಗಳನ್ನು ಪ್ರಸ್ತಾಪಿಸಿದ ಸದಸ್ಯರು
    ಚರಂಡಿಗಳನ್ನು ಸರಿಯಾಗಿ ಸ್ವಚ್ಛಗೊಳಿಸುತ್ತಿಲ್ಲ. ಸೋಡಿಯಂ ಲೈಟ್‌ಗಳು ಒಡೆದು ಹೋಗಿವೆ, ದುರಸ್ತಿಗೊಳಿಸುತ್ತಿಲ್ಲ. ಹಳೇ ನಗರದಲ್ಲಿ 150, ವಿದ್ಯಾಗಿರಿಯಲ್ಲಿ 100 ಮ್ಯಾನ್‌ವೋಲ್‌ಗಳು ಇದ್ದು, ಅಪಾಯದ ಗಂಟೆ ಭಾರಿಸುತ್ತಿವೆ. 24*7 ಕುಡಿಯುವ ನೀರು ಯೋಜನೆಯಲ್ಲಿ ಇದುವರೆಗೂ ಒಂದು ಹನಿ ನೀರು ಬಂದಿಲ್ಲ. ವಿನಾಯಕ ನಗರ, ಸ್ಟೇಷನ್ ರಸ್ತೆಯಲ್ಲಿ ರಸ್ತೆಗಳು ಹದಗೆಟ್ಟು ಹೋಗಿವೆ. ಟೆಂಡರ್ ಆಗಿದ್ದರು ಸಹ ನವನಗರದ ಅನೇಕ ಸೆಕ್ಟರ್‌ಗಳಲ್ಲಿ ಇದುವರೆಗೂ ಕಾಮಾಗಾರಿ ಆರಂಭವಾಗಿಲ್ಲ ಎಂದು ಸದಸ್ಯರು ಸಾಮಾನ್ಯ ಸಭೆಯಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.

    ನಗರದಲ್ಲಿ ಸ್ವಚ್ಛತೆ ಕಾಪಾಡಬೇಕು. ರಸ್ತೆ ಸುಧಾರಣೆಗೆ ಅಧಿಕಾರಿಗಳು ಗಮನ ಹರಿಸಬೇಕು. ಮ್ಯಾನ್‌ವೋಲ್, ವಿದ್ಯುತ್ ಕಂಬ ದುರಸ್ತಿಗೊಳಿಸಬೇಕು. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು, ಅಧಿಕಾರಿಗಳು ನಿತ್ಯವು ಸಂಚರಿಸಿ ಸಮಸ್ಯೆಗಳನ್ನು ಆಲಿಸಬೇಕು. ನಗರಸಭೆ ಸದಸ್ಯರು ಗಮನಕ್ಕೆ ತರುವ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು.
    ವೀರಣ್ಣ ಚರಂತಿಮಠ ಶಾಸಕ ಬಾಗಲಕೋಟೆ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts