More

    ಜವಳಿ ಪಾರ್ಕ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿ

    ಬಾಗಲಕೋಟೆ: ಜಿಲ್ಲೆಯಲ್ಲಿ ಟೆಕ್ಸಟೈಲ್ ಪಾರ್ಕ ನಿರ್ಮಾಣ ಅವಶ್ಯಕತೆ ಇದ್ದು, ಪಾರ್ಕ್ ನಿರ್ಮಾಣಕ್ಕೆ ಜಾಗ ಗುರುತಿಸಿ ಕ್ರಿಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಪಿ.ಸಿ.ಗದ್ದಿಗೌಡರ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಿಲ್ಲಾಡಳಿತ ಭವನದ ಆವರಣದಲ್ಲಿರುವ ನೂತನ ಜಿ.ಪಂ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮೂರನೇ ತ್ರೈಮಾಸಿಕ ದಿಶಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಇಳಕಲ್ಲ ಸೀರೆ, ಗುಳೇದಗುಡ್ಡದ ಕಣಕ್ಕೆ ಹೊಸ ರೀತಿ ಮಾರುಕಟ್ಟೆ ಕಲ್ಪಿಸಬೇಕಿದೆ. ಟೆಕ್ಸ್‌ಟೈಲ್ ಪಾರ್ಕ ನಿರ್ಮಿಸಿದರೆ ನೇಕಾರರಿಗೆ ಅನುಕೂಲವಾಗಲಿದೆ. ಆದ್ದರಿಂದ ಪಾರ್ಕ ನಿರ್ಮಾಣಕ್ಕೆ ಪ್ರಸ್ತಾವನೆ ರೂಪಿಸಬೇಕು ಎಂದರು.

    ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ 40 ಕೋಟಿ ರೂ.ಗಳ ಅನುದಾನ ನೀಡಾಗುತ್ತಿದೆ. ಬೇರೆ ಕಡೆ ನಿರ್ಮಿಸಲಾದ ಜವಳಿ ಪಾರ್ಕಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಸೂಕ್ತವಾದ ಪ್ರಸ್ತಾವನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಲು ಕ್ರಮ ವಹಿಸಬೇಕು. ಮೀನು ಕೃಷಿಗೆ ಅಭಿವೃದ್ಧ್ದಿಗೆ ಅಧಿಕಾರಿಗಳು ಮುಂದಾಗಬೇಕು. ಮೀನು ಕೃಷಿ ಕೈಗೊಳ್ಳಲು ಪ್ರೋತ್ಸಾಹ ನೀಡಲು ಅಧಿಕ ಪ್ರಮಾಣದಲ್ಲಿ ಲೈಸನ್ಸ್ ನೀಡಬೇಕು. ಜಲಾಶಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೀನಿನ ಮರಿಗಳನ್ನು ಬಿಡಬೇಕು ಎಂದು ತಿಳಿಸಿದರು.

    ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅನುದಾನದ ಕೊರತೆ ಇರುವದಿಲ್ಲ. ಆಯ್ಕೆಯಾದ ಲಾನುಭವಿಗಳು ಮನೆ ನಿರ್ಮಾಣದ ಹಂತವಾರು ಜಿಪಿಎಸ್ ಮಾಡಿದರೆ ಮಾತ್ರ ಹಣ ಜಮೆಯಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು. ಜಿಲ್ಲೆಯಲ್ಲಿ 2016-17 ರಿಂದ 2019-20ವರೆಗೆ ಒಟ್ಟು 3859 ಪೈಕಿ 1850 ಮಾತ್ರ ಪೂರ್ಣಗೊಂಡಿವೆ. 947 ಮನೆಗಳು ಇನ್ನು ಪ್ರಾರಂಭವಾಗಿಲ್ಲ. ಕೂಡಲೇ ಆರಂಭಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

    ಸ್ವಚ್ಛ ಭಾರತ ಯೋಜನೆಯಡಿ ಶೌಚಗೃಹ ನಿರ್ಮಾಣವಾದ ಬಗ್ಗೆ ಅಂಕಿ ಸಂಖ್ಯೆ ತೋರಿಸುವುದು ಮುಖ್ಯವಲ್ಲ. ಅವುಗಳ ಬಳಕೆಗೆ ಕ್ರಮವಹಿಸಬೇಕು. ಶೌಚಗೃಹ ಉಪಯೋಗದ ಬಗ್ಗೆ ಜಾಗೃತಿ ಮೂಡಿಸಬೇಕು. ಅಧಿಕಾರಿಗಳು ಪ್ರತಿ ತಾಲೂಕಿಗೆ 10 ಗ್ರಾಮಗಳಿಗೆ ಭೇಟಿ ನೀಡಿ ಶೌಚಗೃಹ ಬಳಕೆಯಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಗುರಿ ತಲುಪಲು ಕ್ರಮವಹಿಸಬೇಕು. ಮುಳುಗಡೆ ಪ್ರದೇಶದಲ್ಲಿ ನರೇಗಾದಡಿ ಗಿಡ ಹಚ್ಚಲು ಅರಣ್ಯ ಇಲಾಖೆಯ ಕ್ರಮವಹಿಸಬೇಕು. ಜಲಜೀವನ ಮಿಷನ್ ಯೋಜನೆಯಡಿ ಸಾಕಷ್ಟು ಅನುದಾನವಿದ್ದು, ಪ್ರತಿಯೊಂದು ಮನೆಗಳಿಗೆ ನಲ್ಲಿ ಕಲೆಕ್ಷನ್ ಕೊಡಿ. ಬರುವ ಬೇಸಿಗೆಯಲ್ಲಿ ಅನುಕೂಲವಾಗಲಿದೆ ಎಂದರು. ಜಿಲ್ಲೆಯಲ್ಲಿ ಯಾವುದೇ ಮನೆಗೆ ವಿದ್ಯುತ್ ಸಂಪರ್ಕ ಹೊಂದಿಲ್ಲವೆಂಬ ಕೂಗು ಕೇಳಬಾರದು. ಈ ನಿಟ್ಟಿನಲ್ಲಿ ಹೆಸ್ಕಾಂ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

    ಜಿಲ್ಲೆಯಲ್ಲಿರುವ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಕೌಶಲ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಉದ್ಯೋಗ ಮೇಳವನ್ನು ಸಹ ಆಯೋಜಿಸಲು ತಿಳಿಸಿದರು. ಪ್ರಕಸ್ತ ಸಾಲಿನಲ್ಲಿ 80 ಜನರಿಗೆ ತರಬೇತಿ ನೀಡಿ 27 ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ಆತ್ಮ ನಿರ್ಭರ ಯೋಜನೆಯಡಿ ಅರ್ಜಿ ಸಲ್ಲಿಸಿದ ಎಲ್ಲ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ವಿತರಣೆಯಾಗಬೇಕು. ಜಿಲ್ಲೆಯಲ್ಲಿ ಕೇವಲ ಶೇ.60 ರಷ್ಟು ಮಾತ್ರ ಪ್ರಗತಿಯಾಗಿದೆ. ಉಳಿದವರಿಗೆ ಸಾಲ ವಿತರಿಸಬೇಕು ಎಂದು ಸಂಸದ ಗದ್ದಿಗೌಡರ ನಿರ್ದೇಶನ ನೀಡಿದರು.

    ಸಭೆಯಲ್ಲಿ ಶಾಸಕ ವೀರಣ್ಣ ಚರಂತಿಮಠ, ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಒ ಟಿ.ಭೂಬಾಲನ್, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ ಇತರರು ಉಪಸ್ಥಿತರಿದ್ದರು.

    ಶೌಚಗೃಹಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಗ್ರಾಮಗಳಲ್ಲಿ ಬಯಲು ಜಾಗೆಯಲ್ಲಿ ಬೆಳೆದ ಮುಳ್ಳುಕಂಟಿ ಗಿಡಗಳನ್ನು ಸ್ವಚ್ಚಗೊಳಿಸಿದರೆ ಬಯಲು ಮಲ ವಿಸರ್ಜನೆ ಸಂಪೂರ್ಣ ನಿಲ್ಲುತ್ತವೆ. ಕೇಂದ್ರ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು.
    – ವೀರಣ್ಣ ಚರಂತಿಮಠ ಶಾಸಕ



    ಜವಳಿ ಪಾರ್ಕ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts