More

    ಅಗತ್ಯ ಸುರಕ್ಷತಾ ಕ್ರಮ ಪಾಲಿಸಿ

    ಬಾಗಲಕೋಟೆ: ಜಿಲ್ಲೆಯಲ್ಲಿ ಅ.4 ರಂದು ನಡೆಯಲಿರುವ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಗೆ ಕೋವಿಡ್-19 ಹಿನ್ನೆಲೆಯಲ್ಲಿ ಎಲ್ಲ ರೀತಿಯ ಸುರಕ್ಷಿತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ನಡೆದ ಟಿಇಟಿ ಪರೀಕ್ಷೆಯ ಪೂರ್ವ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಟಿಇಟಿ ಪರೀಕ್ಷೆಗಳು ಎರಡು ಅವಧಿಯಲ್ಲಿ ನಡೆಯಲಿದ್ದು, ಬೆಳಗಿನ ಅವಧಿಯ ಪತ್ರಿಕೆ-1ಕ್ಕೆ 8 ಪರೀಕ್ಷಾ ಕೇಂದ್ರಗಳನ್ನು, ಮಧ್ಯಾಹ್ನದ ಅವಧಿಯ ಪತ್ರಿಕೆ-2ಕ್ಕೆ 19 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಬೆಳಗಿನ ಅವಧಿಗೆ ಒಟ್ಟು 2795 ಅಭ್ಯರ್ಥಿಗಳು ಹಾಗೂ ಮಧ್ಯಾಹ್ನದ ಅವಧಿಗೆ 6364 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.

    ಕೋವಿಡ್-19 ಹಿನ್ನೆಲೆಯಲ್ಲಿ ಪರೀಕ್ಷೆಯಲ್ಲಿ ಎಸ್.ಒ.ಪಿ. ಪ್ರಕಾರ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು. ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಪರೀಕ್ಷಾ ಕೇಂದ್ರದ ಎಲ್ಲ ಕೊಠಡಿ, ಪೀಠೋಪಕರಣ ಹಾಗೂ ಶೌಚಗೃಹಗಳಿಗೆ ಕಡ್ಡಾಯವಾಗಿ ಪರೀಕ್ಷೆ ಹಿಂದಿನ ದಿನ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 1 ಹೆಚ್ಚುವರಿ ಪರೀಕ್ಷಾ ಕೊಠಡಿಯನ್ನು ಕಾಯ್ದಿರಿಸಬೇಕು. ಪರೀಕ್ಷಾ ಅಭ್ಯರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪರೀಕ್ಷೆಗೆ ಅರ್ಧ ಗಂಟೆ ಮುಂಚಿತವಾಗಿ ಹಾಜರಾಗಲು ತಿಳಿಸಿ ಆರೋಗ್ಯ ತಪಾಸಣೆಗೆ ಒಳಪಡಿಸಲು ಸೂಚಿಸಿದರು.

    ಪ್ರತಿ ಪರೀಕ್ಷಾ ಕೇಂದ್ರಕ್ಕೆ ಆರೋಗ್ಯ ತಪಾಸಣಾ ಕೌಂಟರ್‌ನ್ನು ಪರೀಕ್ಷಾ ಕೇಂದ್ರದ ಮುಖ್ಯ ದ್ವಾರದಲ್ಲಿ ತೆರೆಯಬೇಕು. ಆರೋಗ್ಯ ಇಲಾಖೆಯಿಂದ ಇಬ್ಬರು ಅರೆ ವೈದ್ಯಕೀಯ ಸಿಬ್ಬಂದಿ ಅಥವಾ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಬೇಕು. ಪರೀಕ್ಷೆಯ ಎರಡು ಅವಧಿಯಲ್ಲಿಯೂ ಅಭ್ಯರ್ಥಿಗಳ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಅಲ್ಲದೆ, ಪರೀಕ್ಷಾ ಕಾರ್ಯದಲ್ಲಿ ತೊಡಗಿರುವ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಕಡ್ಡಾಯವಾಗಿ ಆರೋಗ್ಯ ತಪಾಸಣೆ ನಂತರ ಪರೀಕ್ಷಾ ಕೇಂದ್ರಕ್ಕೆ ತೆರಳಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಓರ್ವ ಮುಖ್ಯ ಅಧೀಕ್ಷಕ, ಸ್ಥಾನಿಕ ಜಾಗೃತ ದಳ ಅಧಿಕಾರಿಗಳನ್ನು ನೇಮಿಸಬೇಕು. ಅಲ್ಲದೆ, 5 ಜನ ವೀಕ್ಷಕರನ್ನು ಸಹ ನೇಮಿಸಲಾಗುವುದು. ನೇಮಕಗೊಂಡ ಮಾರ್ಗಾಧಿಕಾರಿಗಳು ಸಮಯಕ್ಕೆ ಸರಿಯಾಗಿ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಬೇಕು. ಪರೀಕ್ಷೆಗೆ ಹಾಜರಾಗುವ ಪರೀಕ್ಷಾ ಅಭ್ಯರ್ಥಿಗಳೇ ಕುಡಿಯುವ ನೀರನ್ನು ತರಲು ತಿಳಿಸಬೇಕು ಎಂದರು.

    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಎಸ್.ಬಿರಾದಾರ, ಪರೀಕ್ಷಾ ನೋಡಲ್ ಅಧಿಕಾರಿ ಎ.ಕೆ.ಬಸಣ್ಣವರ ಸೇರಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಉಪಸ್ಥಿತರಿದ್ದರು.

    ಪಾಸಿಟಿವ್ ಅಭ್ಯರ್ಥಿಗಳಿಗೂ ಅವಕಾಶ
    ಕೋವಿಡ್-19 ಪಾಸಿಟಿವ್ ಅಭ್ಯರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶವಿದ್ದು, ಅಂತಹ ಅಭ್ಯರ್ಥಿಗಳಿದ್ದಲ್ಲಿ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್‌ನಲ್ಲಿ ಎಲ್ಲ ರೀತಿಯ ವ್ಯವಸ್ಥೆಗೆ ಕ್ರಮವಹಿಸಬೇಕು. ಅಭ್ಯರ್ಥಿ ತಾಲೂಕು ಕೋವಿಡ್ ಕೇರ್ ಸೆಂಟರ್‌ನಲ್ಲಿದ್ದರೆ ಅವರನ್ನು ಜಿಲ್ಲಾ ಕೋವಿಡ್ ಕೇರ್ ಸೆಂಟರ್‌ಗೆ ಕರೆ ತರಲು ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕು. ಹೋಮ್ ಐಸೋಲೇಷನ್‌ನಲ್ಲಿರುವ ಕೋವಿಡ್ ಪಾಸಿಟಿವ್ ಅಭ್ಯರ್ಥಿಗಳು ಆರೋಗ್ಯದಲ್ಲಿ ಸುಸ್ಥಿತಿಯಲ್ಲಿರುವ ಬಗ್ಗೆ ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರ ಹಾಗೂ ಅಭ್ಯರ್ಥಿಯ ಪಾಲಕ, ಪೋಷಕರ ಅಪಾಯ ಒಪ್ಪಿಗೆ ಪತ್ರವನ್ನು ಪಡೆದು ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಅಧಿಕಾರಿಗಳಿಗೆ ತಿಳಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts