More

    ಕುರುಬ ಸಮಾಜದಿಂದ ಬೃಹತ್ ರ‌್ಯಾಲಿ

    ಬಾಗಲಕೋಟೆ: ಸಾಮಾಜಿಕ ಜಾಲತಾಣಗಳಲ್ಲಿ ಕುರುಬ ಸಮಾಜದ ಮಹಾಪುರುಷರು, ಸ್ವಾತಂತ್ರೃ ಹೋರಾಟಗಾರರು, ದಾರ್ಶನಿಕರ ಅಶ್ಲೀಲ ಭಾವಚಿತ್ರ ಪ್ರಕಟಿಸಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಕುರುಬರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಲಾಯಿತು.

    ವಿಜಯಪುರ, ಬೆಳಗಾವಿ ಸೇರಿ ಜಿಲ್ಲೆಯ ವಿವಿಧ ಭಾಗದಿಂದ ಆಗಮಿಸಿದ್ದ ಕುರುಬ ಸಮಾಜದ ಬಾಂಧವರು ನವನಗರದ ಕಾಳಿದಾಸ ಕಾಲೇಜು ಮೈದಾನದಲ್ಲಿ ರ‌್ಯಾಲಿ ನಡೆಸಿದರು. ನಂತರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಹೋರಾಟ ನಿಶ್ಚಿತ ಎಂದು ಪ್ರತಿಭಟನಾಕಾರರು ಗುಡುಗಿದರು.

    ಸಂಘದ ಜಿಲ್ಲಾಧ್ಯಕ್ಷ ಡಿ.ಬಿ.ಸಿದ್ದಾಪುರ ಮಾತನಾಡಿ, ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳು ಮನರಂಜನೆ, ಪರಸ್ಪರ ಮಾಹಿತಿಗಾಗಿ ಮೀಸಲಾಗಬೇಕು. ಆದರೆ, ಒಂದು ಸಮಾಜವನ್ನು ಗುರಿಯಾಗಿಸಿ ಮಹಾನ್ ಪುರುಷರನ್ನು ಅಪಮಾನ ಮಾಡುವ ಕೆಟ್ಟ ಪ್ರವೃತಿ ಬಂದಿರುವುದು ನಾಚಿಕೆಗೇಡಿನ ಸಂಗತಿ. ದೇಶ, ಸಮಾಜದ ಒಳಿತಿಗಾಗಿ ಶ್ರಮಿಸಿದವರಿಗೆ ಅಗೌರವದಿಂದ ನಡೆದುಕೊಳ್ಳುವುದು ಅಕ್ಷಮ್ಯ ಅಪರಾಧವಾಗಿದೆ. ಪೊಲೀಸ್ ಇಲಾಖೆ ಇಂತಹ ವಿಷಯದಲ್ಲಿ ಮುಲಾಜು ಇಲ್ಲದೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

    ಹುಲಿಜಂತಿಯ ಮಾಳಿಂಗರಾಯ ಮಹಾರಾಜರು, ಮುಗಳಖೋಡದ ಕನಕ ಬ್ರಹ್ಮ ವಿದ್ಯಾಶ್ರಮದ ಚಿನ್ಮಯಾನಂದ ಸ್ವಾಮೀಜಿ ರ‌್ಯಾಲಿಯ ನೇತೃತ್ವ ವಹಿಸಿದ್ದರು. ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಸಮಾಜದ ಮುಖಂಡರಾದ ರಕ್ಷಿತಾ ಈಟಿ, ಸಾಬು ಮಶ್ಯಾಳ, ಸುರೇಶ ಇಜೇರಿ, ಕಾಶಿನಾಥ ಹುಡೇದ, ಹನುಮಂತ ಅಪ್ಪನವರ, ಮಳಿಯಪ್ಪ ಗುಳಬಾಳ, ಆತ್ಮಾನಂದ ಜಾಲಿಹಾಳ ಸೇರಿ ಇತರರು ಉಪಸ್ಥಿತರಿದ್ದರು.

    ಯುವಕರು ತಾವು ಏನು ಮಾಡುತ್ತಿದ್ದೇವೆ ಎನ್ನುವುದರ ಬಗ್ಗೆ ಎಚ್ಚರದಿಂದ ಇರಬೇಕು. ಯಾರದೋ ಪ್ರಚೋದನೆ, ಕುಮ್ಮಕ್ಕು ಅಥವಾ ದುರುದ್ದೇಶದಿಂದ ಸಾಮಾಜಿಕ ಜಾಲತಾಣಗಳನ್ನು ದುರಪಯೋಗ ಮಾಡಿಕೊಳ್ಳಬಾರದು. ದೇವರ ಸಮಾನರಾಗಿರುವ ಮಹಾನ್ ಪುರುಷರನ್ನು ಅಪಮಾನ ಮಾಡುವುದು ಅಕ್ಷಮ್ಯ ಅಪರಾಧ. ಸರ್ಕಾರ ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
    ಮಾಳಿಂಗರಾಯ ಮಹಾರಾಜರು, ಹುಲಿಜಂತಿ

    ಎಚ್ಚರದಿಂದ ಸಾಮಾಜಿಕ ಜಾಲತಾಣ ಬಳಸಿ
    ಸಾಮಾಜಿಕ ಜಾಲತಾಣಗಳಲ್ಲಿ ಬೇಜವಾಬ್ದಾರಿ, ದುರುದ್ದೇಶದಿಂದ ದೇವರು, ಮಹಾನ್ ನಾಯಕರ ಅಶ್ಲೀಲ ಚಿತ್ರ ಪ್ರಕಟಿಸಿ ಸಮಾಜದಲ್ಲಿನ ಶಾಂತಿ ಕದಡುವ ಪ್ರಯತ್ನ ಮಾಡುವುದು ಸರಿಯಲ್ಲ. ಇಂತಹ ಪ್ರಕರಣಗಳನ್ನು ಜಿಲ್ಲೆಯಲ್ಲಿ ಗಂಭೀರವಾಗಿ ಪರಿಗಣಿಸಲಾಗಿದ್ದು, ಪ್ರಕರಣ ದಾಖಲಿಸಿ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ತಿಳಿಸಿದ್ದಾರೆ.

    ಈ ಕುರಿತು ಪ್ರಕಟಣೆ ನೀಡಿರುವ ಅವರು, ಗ್ರೂಫ್ ಆಡ್ಮಿನ್, ಪೋಸ್ಟ್ ಮಾಡಿದ ವ್ಯಕ್ತಿ ಹಾಗೂ ಮಾಹಿತಿ ಹಂಚಿಕೆ ಮಾಡಿದವರ ವಿರುದ್ಧವು ಪ್ರಕರಣ ದಾಖಲಿಸಲಾಗುವುದು. ಕಳೆದ ತಿಂಗಳು ಜಿಲ್ಲೆಯಲ್ಲಿ ಇಂತಹ ಎರಡು ಪ್ರಕರಣಗಳನ್ನು ದಾಖಲಿಸಿ ಸಂಬಂಧಿತ ಆರೋಪಿಗಳನ್ನು ಬಂಧಿಸಲಾಗಿದೆ. ಆದ್ದರಿಂದ ಯುವಕರು ಸಾಮಾಜಿಕ ಜಾಲತಾಣಗಳನ್ನು ಎಚ್ಚರದಿಂದ ಬಳಸಬೇಕು ಎಂದು ತಿಳಿಸಿದ್ದಾರೆ.



    ಕುರುಬ ಸಮಾಜದಿಂದ ಬೃಹತ್ ರ‌್ಯಾಲಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts