More

    ಸಾವಿನ ಮನೆಯಲ್ಲಿ ರಾಜಕಾರಣ ಮಾಡಬೇಡಿ

    ಬಾಗಲಕೋಟೆ: ಸಿದ್ದರಾಮಯ್ಯ ಹಿರಿಯರು, ಮುಖ್ಯಮಂತ್ರಿಯಾಗಿದ್ದವರು, ಈಗ ವಿಪಕ್ಷ ನಾಯಕರಾಗಿದ್ದಾರೆ. ಹೀಗಾಗಿ ಅವರು ಸಾವಿನ ಮನೆಯಲ್ಲಿ ರಾಜಕಾರಣ ಮಾಡಬಾರದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

    ಕರೊನಾ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದ್ದು, ಬಿಜೆಪಿ ಸುಳ್ಳಿನ ಕಾರ್ಖಾನೆ ಎಂದು ಜರಿದಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಶುಕ್ರವಾರ ಬಾಗಲಕೋಟೆಯಲ್ಲಿ ತಿರುಗೇಟು ನೀಡಿದರು.

    ಕರೊನಾದಿಂದ ಈಗ ಇಡೀ ಮಾನವ ಕುಲವೇ ಸಂಕಷ್ಟದಲ್ಲಿದೆ. ಈ ಸಂದರ್ಭದಲ್ಲಿ ಸರ್ಕಾರಕ್ಕೆ ಒಳ್ಳೆಯ ಸಲಹೆ ಕೊಟ್ಟು ಸರ್ಕಾರದೊಂದಿಗೆ ಕೈಜೋಡಿಸಲಿ, ಇದರಲ್ಲಿ ರಾಜಕಾರಣ ಮಾಡುವುದು ಬೇಡ. ರಾಜ್ಯದಲ್ಲಿ ಸಾವು-ನೋವುಗಳ ಸಂಖ್ಯೆ ತಪ್ಪಿಸುವಲ್ಲಿ ಸಹಕಾರ ನೀಡುವ ಕೆಲಸ ಮಾಡಲಿ ಎಂದು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದರು.

    ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್‌ಡೌನ್ ಮುಂದುವರಿಸಬೇಕು ಎನ್ನುವ ಐಸಿಎಂಆರ್ ವರದಿಯನ್ನು ನಮ್ಮವರು ಪರಿಶೀಲನೆ ಮಾಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ವಿಷಯ ಇನ್ನೂ ಚರ್ಚೆಗೆ ಬಂದಿಲ್ಲ ಎಂದು ಡಿಸಿಎಂ ಹೇಳಿದರು.

    ರಾಜ್ಯದಲ್ಲಿ ವ್ಯಾಕ್ಸಿನ್ ಅಭಾವ ಆಗುತ್ತಿರುವ ಬಗ್ಗೆ ಮಾತನಾಡಿದ ಕಾರಜೋಳ, ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಕೊಡಲು ಮೊದಲ ಆದ್ಯತೆ ಕೊಡಬೇಕು ಎಂದು ಹೇಳಿದ್ದೇವೆ. ಈಗಾಗಲೇ ಸರ್ಕಾರ ಮೂರು ಕೋಟಿ ವ್ಯಾಕ್ಸಿನ್‌ಗೆ ಆರ್ಡರ್ ಕೊಟ್ಟಿದೆ. ಇದರಲ್ಲಿ 2 ಕೋಟಿ ಕೋವಿಶೀಲ್ಡ್, 1 ಕೋಟಿ ಕೋವ್ಯಾಕ್ಸಿನ್ ಇದೆ. ಇವತ್ತಿನವರೆಗೂ 10 ಲಕ್ಷ ಕೂಡ ಪೂರೈಕೆ ಆಗಿಲ್ಲ. ನಾನೇ ಕೋವಿಡ್ ಟಾಸ್ಕ್ ಫೋರ್ಸ್ ಚೇರ್ಮನ್ ಇದ್ದಾಗಲೇ ಆರ್ಡರ್ ಕೊಟ್ಟಿದ್ದೆ. ನನಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ವಹಿಸಿದ ಮೇಲೆ ಸಂಪೂರ್ಣ ಬೆಂಗಳೂರಿನಲ್ಲಿ ಇರುವುದು ಕಷ್ಟವಾಗುತ್ತೆ. ಹೀಗಾಗಿ ಚೇರ್ಮನ್ ಹುದ್ದೆ ಬೇರೆಯವರಿಗೆ ಕೊಡಿ ಎಂದು ನಾನು ಸಿಎಂಗೆ ಮನವಿ ಮಾಡಿದ್ದೆ ಎಂದರು.

    ಎರಡನೇ ಅಲೆ ಯುವಕರಲ್ಲಿ ಹೆಚ್ಚು ಸಾವು-ನೋವು ಸಂಭವಿಸುತ್ತಿದೆ. ಯುವಕರು ಕರೊನಾ ಬಂದ ತಕ್ಷಣವೇ ಆಸ್ಪತ್ರೆಗೆ ಬರುತ್ತಿಲ್ಲ. ಉಸಿರಾಟ ತೊಂದರೆ ತೀವ್ರವಾದ ಬಳಿಕ ಆಸ್ಪತ್ರೆಗೆ ಬರುತ್ತಿದ್ದಾರೆ. ಆ ಮಟ್ಟಕ್ಕೆ ಹೋಗಬಾರದು. ತಕ್ಷಣವೇ ತೋರಿಸುವಂತಹ ಕೆಲಸ ಆಗಬೇಕು. ಯುವಕರು, ಮುದುಕರು ಯಾರೇ ಆಗಿರಲಿ ಸೋಂಕು ಬಂದ ತಕ್ಷಣ ಚಿಕಿತ್ಸೆ ಪಡೆಯುವ ಕೆಲಸ ಆಗಬೇಕು. ನಾನು ಗುರುವಾರ ರಾಮದುರ್ಗಕ್ಕೆ ಹೋಗಿದ್ದೆ. ಅಲ್ಲಿ ಸೋಂಕು ಬಂದವರ ಪೈಕಿ ಶೇ.75 ರಷ್ಟು ಯುವಕರು ಇದ್ದಾರೆ. ಇದು ಎಂತಹ ನೋವಿನ ಸಂಗತಿ? ಇವತ್ತು ಸಾವು ನೋವು ಆಗುತ್ತಿರುವುದು ಯುವಕರಲ್ಲಿ ಹೆಚ್ಚಿದೆ ಎನ್ನುವ ಆತಂಕವನ್ನು ಹೊರಹಾಕಿದರು.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts