More

    ಸಿದ್ದರಾಮಯ್ಯಗೆ ಪುಷ್ಪ ಸಿಂಚನ..!

    ಬಾಗಲಕೋಟೆ: ಸಿದ್ದರಾಮಯ್ಯ ಮುಂದಿನ ಸಿಎಂ, ಸಿದ್ದರಾಮಯ್ಯ ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು. ಹೀಗಂತ ಅನೇಕರು ನಾಮಫಲಕ ಹಿಡಿದು ಪ್ರದರ್ಶನ ಮಾಡಿದರೆ, ಸಾವಿರಾರು ಜನರು ಒಕ್ಕೊರಲಿನ ಕೂಗು ಹಾಕುತ್ತಿದ್ದರು.

    ಇದು ಸೋಮವಾರ ಹುಬ್ಬಳ್ಳಿಯಿಂದ ರಸ್ತೆ ಮಾರ್ಗವಾಗಿ ಬಾದಾಮಿಗೆ ಬರುತ್ತಿದ್ದ ಸಿದ್ದರಾಮಯ್ಯ ಅವರಿಗೆ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್‌ನಲ್ಲಿ ಕಂಡು ಕೇಳಿ ಬಂದ ದೃಶ್ಯ.

    ಸಿದ್ದರಾಮಯ್ಯ ಅವರು ಕುಳಗೇರಿ ಕ್ರಾಸ್‌ಗೆ ಬರುತ್ತಿದ್ದಂತೆ ವರುಣ ದರ್ಶನ ಶುರುವಾಗಿತ್ತು. ಮಳೆ ಹನಿಗಳ ಸಿಂಚನ ಒಂದು ಕಡೆ ಇದ್ದರೆ ಮತ್ತೊಂದೆಡೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಿದ್ದು ಅಭಿಮಾನಿಗಳು ಪುಷ್ಪ ಸಿಂಚನಗೈದು ಸಿದ್ದರಾಮಯ್ಯ ಅವರನ್ನು ಅದ್ದೂರಿಯಾಗಿ ಬರಮಾಡಿಕೊಂಡರು.

    ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಸಿದ್ದರಾಮಯ್ಯ ಅವರು ಮತ್ತೆ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಬೇಕು. ನಿಮ್ಮನ್ನು ಭಾರಿ ಬಹುಮತದಿಂದ ಗೆಲ್ಲಿಸಿಕೊಂಡು ಬರುತ್ತೇವೆ. ಮುಂದೆ ನೀವೇ ಮುಖ್ಯಮಂತ್ರಿ ಆಗಬೇಕು ಎಂದು ಹಕ್ಕೊತ್ತಾಯ ಮಾಡಿದರು.
    ಸಿದ್ದರಾಮಯ್ಯ ಅವರ ಕಾರಿಗೆ ಮುಗಿಬಿದ್ದ ಜನರು ಘೋಷಣೆ ಕೂಗಿ ನಾಮಫಲಕ ಪ್ರದರ್ಶಿಸಿದರು. ಪುಷ್ಪಗಳನ್ನು ಎರಚಿ ಸಂಭ್ರಮಿಸಿದರು.
    ಈ ಎಲ್ಲ ದೃಶ್ಯಗಳನ್ನು ಕಂಡ ಸಿದ್ದರಾಮಯ್ಯ ಕಾರಿನ ಡೋರ್ ಬಳಿ ಎದ್ದು ನಿಂತು ಅಭಿಮಾನಿಗಳ ಕಡೆ ಕೈ ಬೀಸಿದರು. ಮಾಜಿ ಸಿಎಂಗೆ ಹಸ್ತಲಾಘವ ಮಾಡಲು ಜನರು ಮತ್ತೆ ಮುಗಿಬಿದ್ದರು. ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

    ಹೆರಿಟೇಜ್ ಬಳಿಯೂ ಬಂದ ಅಭಿಮಾನಿಗಳು
    ಕುಳಗೇರಿ ಕ್ರಾಸ್‌ನಿಂದ ಅಭಿಮಾನಿಗಳಿಗೆ ಕೈಬೀಸಿ ಬಾದಾಮಿಗೆ ಆಗಮಿಸಿದ ಸಿದ್ದರಾಮಯ್ಯ ಅವರು ಕೃಷ್ಣಾ ಹೆರಿಟೇಜ್‌ಗೆ ತೆರಳುತ್ತಿದ್ದಂತೆ ಅಲ್ಲಿಯೂ ನೂರಾರು ಜನರು ಸೇರಿದ್ದರು. ಅವರೂ ಸಹ ಸಿದ್ದರಾಮಯ್ಯ ಅವರಿಗೆ ಇದೇ ಆಗ್ರಹ ಮಾಡಿ ಸಿದ್ದರಾಮಯ್ಯ ಪರವಾಗಿ ಘೋಷಣೆ ಕೂಗಿದರು. ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮತ್ತೆ ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು ಎಂದು ಒತ್ತಾಯಗಳು ಕೇಳಿ ಬರುತ್ತಿದ್ದರೆ ಮತ್ತೊಂದೆಡೆ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ ಶುರುವಾಗಿದೆ.

    ಸಿದ್ದರಾಮಯ್ಯ ಬಾದಾಮಿಯಿಂದ ಮತ್ತೆ ಸ್ಪರ್ಧೆ ಮಾಡಲ್ಲ, ತಾವೊಂದು ಕೈ ನೋಡಬೇಕು ಎಂದು ಅನೇಕ ಆಕಾಂಕ್ಷಿಗಳು ಇದ್ದಾರೆ. ಈಗ ಸಿದ್ದು ಅಭಿಮಾನಿಗಳ ಒತ್ತಡಕ್ಕೆ ಮಣಿದು ಮತ್ತೆ ಸ್ಪರ್ಧೆ ಮಾಡಿದರೆ ಎನ್ನುವ ತಳಮಳದಲ್ಲಿ ಇದ್ದಂತಿದೆ.

    ಕಳೆದ ಸಲ ಸಿದ್ದರಾಮಯ್ಯಗಾಗಿ ಕ್ಷೇತ್ರ ತ್ಯಾಗ ಮಾಡಿದ್ದ ಬಿ.ಬಿ. ಚಿಮ್ಮನಕಟ್ಟಿ ಅವರೂ ಕೂಡ ಈ ಸಲ ಟಿಕೆಟ್ ತಮಗೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಒಂದು ಗುಂಪು ಹಾಗೂ ಸಿದ್ದು ಅಭಿಮಾನಿಗಳು ಮಾಜಿ ಸಿಎಂಗೆ ಒತ್ತಡ ಹಾಕುತ್ತಿದ್ದು ಅವರು ಹೇಗೆ ಸ್ವೀಕರಿಸುತ್ತಾರೆ ಎನ್ನುವುದು ಸಹ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಟಿಕೆಟ್ ಆಕಾಂಕ್ಷಿಗಳು ಈ ಬಗ್ಗೆ ಏನನ್ನೂ ಬಾಯಿ ಬಿಟ್ಟು ಹೇಳುತ್ತಿಲ್ಲ. ಕಾಯ್ದು ನೋಡುವ ತಂತ್ರಕ್ಕೆ ಶರಣಾದಂತಿದೆ.

    ಕೋವಿಡ್ ನಿಯಮಗಳೆಲ್ಲ ಗೋವಿಂದ…!
    ಸಿದ್ದರಾಮಯ್ಯ ಅವರು ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸಿ ಕಳೆದ ವಾರ ಐದು ನೂರು ಜನರು ಬೆಂಗಳೂರಿಗೆ ತೆರಳಿ ಒತ್ತಾಯಿಸಿದ್ದರು. ಅದಾದ ಬಳಿಕ ಸೋಮವಾರ ಕ್ಷೇತ್ರಕ್ಕೆ ಬರುತ್ತಿದ್ದಂತೆ ಸಾವಿರಾರು ಜನರು ಸಿದ್ದು ವಾಹನಕ್ಕೆ ಮುಗಿಬಿದ್ದು ಇಲ್ಲಿಂದಲೇ ಸ್ಪರ್ಧಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಸಾವಿರಾರು ಜನರು ಗುಂಪು ಸೇರಿದ್ದರಿಂದ ಕೋವಿಡ್ ನಿಯಮಗಳೆಲ್ಲವೂ ಗೋವಿಂದ ಎನ್ನುವಂತಾಗಿತ್ತು. ಅನೇಕರು ಮಾಸ್ಕ್ ಸಹ ಹಾಕಿರಲಿಲ್ಲ. ಪರಸ್ಪರ ಅಂತರ ಕೇಳಲೇ ಬೇಡಿ ಎನ್ನುವಂತಿತ್ತು. ಅನೇಕರಿಗೆ ಸಿದ್ದರಾಮಯ್ಯ ದೂರ ಸರಿರಿ, ಮಾಸ್ಕ್ ಹಾಕಿಕೊಳ್ಳಿ ಎಂದು ಹೇಳುತ್ತಲೇ ಇದ್ದರು. ಆದರೆ, ಆ ಗದ್ದಲದಲ್ಲಿ ಅದನ್ನು ಕೇಳಿಸಿಕೊಳ್ಳಲು ಯಾರೂ ತಯಾರಿರಲಿಲ್ಲ.

    ಸಿದ್ದರಾಮಯ್ಯ ಶಾಸಕರಾದ ಬಳಿಕ ಬಾದಾಮಿ ಕ್ಷೇತ್ರಕ್ಕೆ 1500 ರಿಂದ 2000 ಕೋಟಿ ರೂ. ಅನುದಾನ ತಂದಿದ್ದಾರೆ. ಅವರು ಮತ್ತೆ ಬಾದಾಮಿಯಿಂದ ಸ್ಪರ್ಧೆ ಮಾಡಬೇಕು ಎನ್ನುವುದು ಒಂದು ಗುಂಪು ಅಲ್ಲ, ಇಡಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಆಗ್ರಹವಾಗಿದೆ. ಅಭಿವೃದ್ಧಿಗಾಗಿ ಕ್ಷೇತ್ರಕ್ಕೆ ಸಿದ್ದರಾಮಯ್ಯ ಬೇಕು ಎನ್ನುವುದು ಪಕ್ಷಾತೀತವಾಗಿ ಜನರ ಒತ್ತಾಯವಾಗಿದೆ.
    ಪಿ.ಆರ್. ಗೌಡರ ಜಿ.ಪಂ. ಮಾಜಿ ಉಪಾಧ್ಯಕ್ಷ, ಬಾದಾಮಿ

    ಬಾದಾಮಿ ಜನರು ಬಹಳ ಅಭಿಮಾನದಿಂದ ಇಲ್ಲಿಂದಲೇ ಸ್ಪರ್ಧೆ ಮಾಡಬೇಕು ಅಂತಿದ್ದಾರೆ. ಅವರ ಆಸೆಗೆ ತಣ್ಣೀರು ಎರಚಲು ತಯಾರಿಲ್ಲ. ಈ ಬಗ್ಗೆ ನಾನು ಈಗಾಗಲೇ ಬೆಂಗಳೂರಿನಲ್ಲೇ ಹೇಳಿದ್ದೇನೆ. ನಾನು ಬಾದಾಮಿಯಿಂದಲೇ ಸ್ಪರ್ಧಿಸುತ್ತೇನೆ.
    ಸಿದ್ದರಾಮಯ್ಯ, ಬಾದಾಮಿ ಶಾಸಕ, ಮಾಜಿ ಸಿಎಂ

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts