More

    ಶರಣರು ಒಂದೇ ಜಾತಿಗೆ ಸೀಮಿತರಲ್ಲ

    ಬಾಗಲಕೋಟೆ: ಲಿಂಗ ಭೇದ, ಜಾತಿಭೇದ, ವರ್ಣಭೇದ ವಿರುದ್ಧ ತಮ್ಮ ವಚನಗಳ ಮೂಲಕ ಜನರ ಮನ ಮುಟ್ಟಿದವರು ಕಾಯಕ ಶರಣರು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರುಗಿ ಹೇಳಿದರು.

    ನವನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಸಮಾಜದಲ್ಲಿ ಸಮಾನತೆ ಎಷ್ಟು ಅವಶ್ಯವಾಗಿದೆ ಎಂಬುವುದನ್ನು ಜನರಿಗೆ ತಿಳಿಸುವ ಕಾರ್ಯ ಮಾಡಿದ್ದಾರೆ. ಅಂಥವರ ತತ್ವಾದರ್ಶವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

    ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮದಲ್ಲಿ 12ನೇ ಶತಮಾನದಲ್ಲಿ ಆಗಿ ಹೋದ ಎಲ್ಲ ಶರಣರು, ವಚನಕಾರರಿಗೆ ಗೌರವ ನೀಡುವ ಉದ್ದೇಶದಿಂದ 108 ಶರಣರ ಗ್ರಾಮ ಸ್ಥಾಪನೆ ಮಾಡಲು ಈಗಾಗಲೇ ಸರ್ಕಾರ ನಿರ್ಧರಿಸಿದೆ ಎಂದರು.

    ನ್ಯಾಯವಾದಿ ಪರಶುರಾಮ ಮಹಾರಾಜನವರ ಉಪನ್ಯಾಸ ನೀಡಿ, ಸಂವಿಧಾನ ಸರ್ವರೂ ಸಮಾನ ಎಂದು ಹೇಳುತ್ತದೆ. ಆದರೆ ನಮಗೆ ಇದುವರೆಗೂ ಸಾಮಾಜಿಕ ಸಮಾನತೆ ಸಾಧಿಸಲು ಸಾಧ್ಯವಾಗಿಲ್ಲ. ಆದರೆ, 12ನೇ ಶತಮಾನದಲ್ಲಿ ಯಾವುದೇ ಸಂವಿಧಾನ ಇರಲಿಲ್ಲ. ಅಂತಹ ಕಾಲದಲ್ಲಿ ತಮ್ಮ ವಚನಗಳ ಮೂಲಕ ಜನರನ್ನು ತಲುಪಿ ಸಮಾನತೆ ಸಾರಿದ ಮಹಾನ್ ಸಾಧಕರು ನಮ್ಮ ಕಾಯಕ ಶರಣರು ಎಂದು ಬಣ್ಣಿಸಿದರು.

    ಕೆಳ ಜಾತಿ ಶರಣರು ಯಾರಿಗೂ ಕಡಿಮೆ ಇಲ್ಲ ಎಂದು ತಿಳಿಸುವ ಮಟ್ಟಿಗೆ ಕುಲಗಳನ್ನು ಮೆಟ್ಟಿ ನಿಂತು ವಚನಗಳನ್ನು ರಚಿಸಿದ್ದಾರೆ. ಇವರ ಈ ವಚನಗಳು ಕರ್ನಾಟಕದಲ್ಲಿ ಲಿಂಗಾಯತ ಚಳವಳಿಗೆ ಕಾರಣವಾಗಿ ಅನುಭವ ಮಂಟಪದಲ್ಲಿ ವಚನಕ್ರಾಂತಿ ಹುಟ್ಟಿಸಿ ಸಮಾನತೆಗೆ ನಾಂದಿ ಹಾಕಿದ್ದಾರೆ ಎಂದರು.

    ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅಶೋಕ ತೋಟದ, ತಹಸೀಲ್ದಾರ್ ಗುರುಸಿದ್ದಯ್ಯ ಹಿರೇಮಠ, ದಿಶಾ ಸಮಿತಿ ಹಾಗೂ ಬಾಬು ಜಗಜೀವನರಾವ್ ಸಮಿತಿ ಸದಸ್ಯ ರಾಜು ಮಣ್ಣಿಕೇರಿ, ಸಮಾಜದ ಮುಖಂಡ ಎಂ.ಆರ್.ಹೊಸಮನಿ ಇತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಶಿರೂರ ಸ್ವಾಗತಿಸಿ, ವಂದಿಸಿದರು.

    ಜಿಲ್ಲಾಡಳಿತ ಭವನದಿಂದ ಕಾಯಕ ಶರಣರ ಭಾವಚಿತ್ರ ಮೆರಣಿಗೆಗೆ ನಡೆಯಿತು. ವಿವಿಧ ಜಾನಪದ ಕಲಾತಂಡಗಳೊಂದಿಗೆ ನವನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಬೇಡ್ಕರ್ ಭವನಕ್ಕೆ ತಲುಪಿತು.

    ಈ ಶರಣರ ವಚನಗಳ ಕೀರ್ತಿ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ವಿಶ್ವವ್ಯಾಪಿಯಾಗಿದೆ. ಅವರ ಯೋಚನೆಗಳು, ಅಲೋಚನೆಗಳು ಇಂದಿಗೂ ಪ್ರಚಲಿತವಾಗಿವೆ. ಅದಕ್ಕಾಗಿ ಸರ್ಕಾರ ಇಂತಹ ಜಯಂತಿಗಳನ್ನು ಆಚರಣೆ ಮಾಡುವ ಮೂಲಕ ಜನರಿಗೆ ಸಮಾನತೆ ಕುರಿತು ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ.
    ಪ್ರೊ.ಮಾರ್ಕಂಡಯ್ಯ ದೊಡ್ಡಮನಿ ಉಪನ್ಯಾಸಕ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts