ಬಿಜೆಪಿಯಿಂದ ಗ್ರಾಮ ಸ್ವರಾಜ್ಯ ಸಮಾವೇಶ

2 Min Read
ಬಿಜೆಪಿಯಿಂದ ಗ್ರಾಮ ಸ್ವರಾಜ್ಯ ಸಮಾವೇಶ

ಬಾಗಲಕೋಟೆ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸಲು ಹಾಗೂ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬಲ ಪಡಿಸುವ ಉದ್ದೇಶದಿಂದ ಗ್ರಾಮ ಸ್ವರಾಜ್ಯ ಸಮಾವೇಶ ರಾಜ್ಯ ವ್ಯಾಪಿ ಹಮ್ಮಿಕೊಳ್ಳಲಾಗುತ್ತಿದೆ. ಇದರ ಭಾಗವಾಗಿ ಜಿಲ್ಲೆಯಲ್ಲಿ ನ.29 ರಂದು ಎರಡು ಕಡೆ ಸಮಾವೇಶ ಏರ್ಪಡಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು.

ಅಂದು ಬೆಳಗ್ಗೆ 11 ಗಂಟೆಗೆ ಮುಧೋಳದಲ್ಲಿ ಹಾಗೂ ಮಧ್ಯಾಹ್ನ 3 ಗಂಟೆಗೆ ಬೀಳಗಿಯಲ್ಲಿ ಸಮಾವೇಶ ನಡೆಯಲಿದ್ದು, ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಡಿಸಿಎಂ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಂಸದರಾದ ಪಿ.ಸಿ.ಗದ್ದಿಗೌಡರ, ರಮೇಶ ಜಿಗಜಿಣಗಿ, ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಪಕ್ಷದ ಪದಾಧಿಕಾರಿಗಳು, ಶಕ್ತಿ ಕೇಂದ್ರದ ಪ್ರಮುಖರು, ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ 400 ರಿಂದ 500 ಜನ ಮಾತ್ರ ಪಾಲ್ಗೊಳ್ಳಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಧೋಳ, ತೇರದಾಳ, ಜಮಖಂಡಿ ಮತಕ್ಷೇತ್ರ ಸೇರಿ ಮುಧೋಳದಲ್ಲಿ ಸಮಾವೇಶ ಹಾಗೂ ಬಾಗಲಕೋಟೆ, ಬೀಳಗಿ, ಬಾದಾಮಿ, ಹುನಗುಂದ ಮತಕ್ಷೇತ್ರ ಸೇರಿ ಬೀಳಗಿಯಲ್ಲಿ ಸಮಾವೇಶ ನಡೆಸಲಾಗುತ್ತಿದ್ದು, ಈ ಮತಕ್ಷೇತ್ರದ ನಾಯಕರು, ಪಕ್ಷದ ಮುಖಂಡರು ಪಾಲ್ಗೊಳ್ಳಲ್ಲಿದ್ದಾರೆ ಎಂದರು.

ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಶೇ.80 ಸ್ಥಾನಗಳಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗಿದೆ. ಪ್ರಥಮ ಹಂತದಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಬೂತ್‌ಮಟ್ಟದ ಮೂಲಕ ಪಕ್ಷವನ್ನು ಸಂಘಟಿಸಲಾಗುವುದು. ಗ್ರಾಮ ಪಂಚಾಯಿತಿ ಚುನಾವಣೆಗೋಸ್ಕರ ಪಂಚ ಸೂತ್ರಗಳನ್ನು ಅನುಸರಿಸಲಾಗುತ್ತಿದೆ. ವಾರ್ ರೂಂಗಳ ರಚನೆ, ಕಾಲ್ ಸೆಂಟರ್‌ಗಳ ಕಾರ್ಯಾರಂಭ, ಪ್ರತಿ ಬೂತ್‌ನಲ್ಲಿ 5 ಜನ ಒಳಗೊಂಡ ಪಕ್ಷದ ಕಾರ್ಯಕರ್ತರ ಪಂಚ ರತ್ನ ತಂಡ ರಚನೆ, ಪೇಜ್ ಪ್ರಮುಖರ ನಿಯುಕ್ತಿ. ಇವುಗಳನ್ನು ಪಕ್ಷವು ಅತ್ಯಂತ ವ್ಯವಸ್ಥಿತವಾಗಿ ಕಾರ್ಯಗತಗೊಳಿಸುತ್ತಿದೆ ಎಂದು ಹೇಳಿದರು.

See also  ಸಾಮಾಜಿಕ ನ್ಯಾಯದಲ್ಲಿ ರಾಜಿ ಇಲ್ಲ

ಪಕ್ಷದ ಮುಖಂಡರಾದ ರಾಜು ನಾಯ್ಕರ, ವೆಂಕಟೇಶಪ್ರಸಾದ ಮಾಲಿಪಾಟೀಲ, ಸತೀಶ ಎಸ್. ಸುದ್ದಿಗೋಷ್ಠಿಯಲ್ಲಿ ಇದ್ದರು.

ಜಿಲ್ಲಾ ಪಂಚಾಯಿತಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಮಂಡಳಿ ಚುನಾವಣೆಯಲ್ಲಿ ನಡೆದ ಬೆಳವಣಿಗೆ ಬಗ್ಗೆ ಪಕ್ಷದಲ್ಲಿ ಗಂಭೀರ ಚಿಂತನೆ ನಡೆದಿದೆ. 8 ಜನ ನಿರ್ದೇಶಕರು ಬಿಜೆಪಿಯವರು ಇದ್ದರೂ ಡಿಸಿಸಿ ಬ್ಯಾಂಕ್ ಬಿಜೆಪಿಗೆ ಒಲಿಯಲಿಲ್ಲ. ಗುಪ್ತವಾಗಿ ಮತದಾನ ನಡೆದಿದ್ದರಿಂದ ಯಾರು ತಪ್ಪಿತಸ್ಥರು ಎನ್ನುವುದು ಗುರುತಿಸಲು ಸಾಧ್ಯವಾಗುವುದಿಲ್ಲ. ಡಿಸಿಎಂ ಗೋವಿಂದ ಕಾರಜೋಳ ಹಾಗೂ ಪಕ್ಷದ ಮುಖಂಡರು ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸಲಾಗುವುದು. ಸಮಿತಿ ರಚನೆ ಮಾಡಿ ತಪ್ಪಿತಸ್ಥರನ್ನು ಗುರುತಿಸಿ ಕ್ರಮ ತೆಗೆದುಕೊಳ್ಳಲಾಗುವುದು.
ಶಾಂತಗೌಡ ಪಾಟೀಲ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ

Share This Article