More

    ಜನರ ಸಮಸ್ಯೆ ಪರಿಹರಿಸುವ ಆಸಕ್ತಿ ಸರ್ಕಾರಕ್ಕಿಲ್ಲ

    ಬಾಗಲಕೋಟೆ: ರಾಜ್ಯ ಸರ್ಕಾರ ಅಕ್ಷರ ದಾಸೋಹ ಯೋಜನೆಯಡಿ ಮಕ್ಕಳಿಗೆ ಆಹಾರ ಧಾನ್ಯ ಕೊಡುತ್ತಿಲ್ಲ. ಕಳೆದ 7 ತಿಂಗಳಿನಿಂದ ಈ ಸಮಸ್ಯೆ ಇದ್ದು, ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ. ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನಯಾ ಪೈಸೆ ನೀಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪುರ ಆರೋಪಿಸಿದರು.

    ಸದನದಲ್ಲಿ ಇಂತಹ ವಿಚಾರಗಳ ಬಗ್ಗೆ ಮಾತನಾಡುವುದಕ್ಕೆ ಅವಕಾಶ ನೀಡುತ್ತಿಲ್ಲ. ಜನರ ಸಮಸ್ಯೆ ಪರಿಹರಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಆಸಕ್ತಿ ಇಲ್ಲ. ಬಿಜೆಪಿ ಸರ್ಕಾರಗಳಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಗೋಹತ್ಯೆ ಕಾನೂನು ಜಾರಿಗೆ ತಂದರು. ಗೋ ರಕ್ಷಣೆ ಮಾಡುವ ರೈತರಿಗೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಗೋವು ರಕ್ಷಣೆ ರಾಮ ಭಕ್ತರು ಮಾಡುತ್ತಾರೆ ಅನ್ನೋದು ಗೋವಿಂದ ಗೋವಿಂದ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು.

    ಕೃಷಿ ಮೂರು ಕಾನೂನುಗಳಿಂದ ಅನ್ನದಾತರಿಗೆ ಅನ್ಯಾಯವಾಗಿದೆ. ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ದೇಶವೇ ಹೊತ್ತಿ ಉರಿಯುತ್ತಿದೆ. ತೈಲ ಬೆಲೆ ಏರಿಕೆಯಾಗಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ದ್ವಿಗುಣಗೊಂಡಿದೆ. ಜನ ಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಜಿಎಸ್‌ಟಿ ಪಾಲು ರಾಜ್ಯಕ್ಕೆ ಬಾರದಿರುವ ಕುರಿತು 25 ಸಂಸದರು ತುಟಿ ಪಿಟಿಕ್ ಅನ್ನುತ್ತಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರಕ್ಕೆ ಕೇಳುತ್ತಿಲ್ಲ. ಕೇಂದ್ರ ಸರ್ಕಾರ ಓಲೈಕೆ ಮಾಡುವುದರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಕೋವಿಡ್, ಅತಿವೃಷ್ಟಿ ಸಂದರ್ಭದಲ್ಲಿ ಕೇಂದ್ರ ಜನರಿಗೆ ಸಹಾಯ ಹಸ್ತ ಚಾಚಲಿಲ್ಲ. ಇದನ್ನು ರಾಜ್ಯ ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು. ನಮ್ಮ ಹಕ್ಕುಗಳನ್ನು ಗಟ್ಟಿ ಧ್ವನಿಯಲ್ಲಿ ಕೇಳಬೇಕು ಎಂದು ಒತ್ತಾಯಿಸಿದರು.

    ಕಾಂಗ್ರೆಸ್ ಮುಖಂಡರಾದ ಲೋಕಣ್ಣ ಕೊಪ್ಪದ, ನಾಗರಾಜ ಹದ್ಲಿ, ದಾನೇಶ ತಡಸಲೂರ, ಕಾಶಿನಾಥ ಹುಡೇದ ಸುದ್ದಿಗೋಷ್ಠಿಯಲ್ಲಿ ಇದ್ದರು.

    ರಾಜ್ಯ ಬಿಜೆಪಿ ಸರ್ಕಾರ ಸಚಿವರ ಖಾತೆ ಬದಲಾವಣೆಯಲ್ಲಿ ನಿರತವಾಗಿದೆ. ಜನ ಉಪಯೋಗಿ ಕಾರ್ಯ ಮಾಡುತ್ತಿಲ್ಲ. ಇದರಿಂದ ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಅಗತ್ಯ ವಸ್ತುಗಳು, ಇಂಧನ ಬೆಲೆ ಹೆಚ್ಚಳ ಮಾಡಿ ಜನ ಸಾಮಾನ್ಯರ ಮೇಲೆ ಬರೆ ಎಳೆಯುತ್ತಿದೆ. ಕೇಂದ್ರ ಸರ್ಕಾರಕ್ಕೆ ಕಿಂಚಿತ್ತು ಜನರ ಕಾಳಜಿ ಇಲ್ಲ.
    ಎಸ್.ಜಿ. ನಂಜಯ್ಯನಮಠ ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ



    ಜನರ ಸಮಸ್ಯೆ ಪರಿಹರಿಸುವ ಆಸಕ್ತಿ ಸರ್ಕಾರಕ್ಕಿಲ್ಲ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts