More

    ಪ್ರವಾಹದ ಅಬ್ಬರಕ್ಕೆ 50 ಗ್ರಾಮಗಳು ಬಾಧಿತ

    ಬಾಗಲಕೋಟೆ: ಪ್ರಸಕ್ತ ವರ್ಷ ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಘಟಪ್ರಭಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬಂದಿದ್ದರಿಂದ ನದಿ ತೀರದಲ್ಲಿ ಪ್ರವಾಹ ಸ್ಥಿತಿ ಎದುರಾಗಿದ್ದು, ಈವರೆಗೂ ಜಿಲ್ಲೆಯಲ್ಲಿ 50 ಗ್ರಾಮಗಳು ಪ್ರವಾಹ ಬಾಧಿತವಾಗಿವೆ. ಆದರೆ, ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ತಿಳಿಸಿದರು.

    ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಪ್ರವಾಹ ಪರಿಸ್ಥಿತಿ ಕುರಿತು ಶುಕ್ರವಾರ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

    ಸದ್ಯ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ತಗ್ಗಿದೆ. ಶುಕ್ರವಾರ ಕೃಷ್ಣಾ ನದಿಗೆ 3.5 ಲಕ್ಷ ಕ್ಯೂಸೆಕ್, ಘಟಪ್ರಭಾ ನದಿಗೆ 13,492 ಹಾಗೂ ಮಲಪ್ರಭಾ ನದಿಗೆ 6,407 ಕ್ಯೂಸೆಕ್ ಹರಿದು ಬರುತ್ತಿದೆ. ಆಲಮಟ್ಟಿ ಜಲಾಶಯದಿಂದ 4.20 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಅಪಾಯ ಇಲ್ಲ ಎಂದರು.

    ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಯಾವುದೇ ಜೀವಹಾನಿ ಉಂಟಾಗಿಲ್ಲ. 24 ಜಾನುವಾರುಗಳು ಸಾವನ್ನಪ್ಪಿದ್ದು, ಸರ್ಕಾರದ ನಿಯಮಾವಳಿ ಪ್ರಕಾರ ಪರಿಹಾರ ಒದಗಿಸಲು ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಲಾಗಿದೆ. ಇನ್ನು ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಮಳೆ ಆಗಿಲ್ಲ. ಇದರಿಂದ ಮನೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಧಕ್ಕೆ ಆಗಿಲ್ಲ. ಜು.21 ರಿಂದ ಈ ವರೆಗೂ 96 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಹೇಳಿದರು.

    ಜಿಲ್ಲೆಯಲ್ಲಿ ಈವರೆಗೂ 50 ಗ್ರಾಮಗಳು ಪ್ರವಾಹರಿಂದ ಬಾಧಿತವಾಗಿವೆ. 9,760 ಕುಟುಂಬಗಳ 38,058 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲದೆ, 34,959 ಜಾನುವಾರುಗಳನ್ನು ಸಹ ಸ್ಥಳಾಂತರಿಸಲಾಗಿದೆ. ಸಂತ್ರಸ್ತರಿಗೆ ಸ್ಥಾಪಿಸಲಾದ 58 ಪರಿಹಾರ ಕೇಂದ್ರಗಳಲ್ಲಿ 15,180 ಜನರು ಇದ್ದಾರೆ. ಜಾನುವಾರುಗಳಿಗೆ 995 ಟನ್‌ಗಳನ್ನು ಮೇವು ವಿತರಿಸಲಾಗಿದೆ. ಮೇವಿನ ಕೊರತೆ ಇರುವುದಿಲ್ಲ. ಅವಶ್ಯಕತೆ ಇದ್ದವರಿಗೆ ಮೇವು ವಿತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಕಾಳಜಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಹಾಲಿನ ವ್ಯವಸ್ಥೆಗೆ ಸೂಚಿಸಲಾಗಿದೆ ಎಂದರು.

    ಪ್ರವಾಹದಿಂದ 160 ಗ್ರಾಮಗಳಲ್ಲಿನ ಬಿತ್ತನೆ ಪ್ರದೇಶ ಜಲಾವೃತಗೊಂಡಿರುತ್ತದೆ. ಒಟ್ಟು 19,299 ಹೆಕ್ಟೇರ್ ಕೃಷಿ ಹಾಗೂ 796.60 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಜಲಾವೃತವಾಗಿವೆ. ಪ್ರವಾಹದ ನೀರು ಇಳಿದ ಮೇಲೆ ಸಮೀಕ್ಷೆ ಮಾಡಲಾಗುವುದು. ಪ್ರವಾಹದಿಂದ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ 95 ಕಿ.ಮೀ., ಪಿಆರ್‌ಇಡಿ ಅಡಿ 344 ಕಿ.ಮೀ. ರಸ್ತೆ ಹಾನಿಗೊಳಗಾಗಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ 3 ಹಾಗೂ ಪಿಆರ್‌ಇಡಿ ವ್ಯಾಪ್ತಿಯ 19 ಸೇತುವೆಗಳು ಹಾನಿಗೊಳಗಾಗಿವೆ. ಹೆಸ್ಕಾಂಗೆ ಸಂಬಂಧಿಸಿದಂತೆ 6,247 ವಿದ್ಯುತ್ ಕಂಬ, 1859 ಟ್ರಾನ್ಸಾರ್ಮರ್, 17 ವಿದ್ಯುತ್ ಮಾರ್ಗಗಳು ಹಾನಿಗೊಳಗಾಗಿವೆ. 63 ಅಂಗವಾಡಿ ಕೇಂದ್ರಗಳ ಸುತ್ತ ನೀರು ಆವರಿಸಿದೆ. 30 ಶಾಲೆಗಳು ಜಲಾವೃತಗೊಂಡಿದ್ದು, 19 ಕುಡಿಯುವ ನೀರಿನ ಯೋಜನೆಗಳು ಸಹ ಹಾನಿಗೊಳಗಾಗಿವೆ. ಕುಡಿಯುವ ನೀರಿನ ಅಭಾವವಿದ್ದಲ್ಲಿ ಟ್ಯಾಂಕರ್ ಮೂಲಕ ಸರಬರಾಜುಗೆ ಕ್ರಮವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಜಿಪಂ ಸಿಇಒ ಟಿ.ಭೂಬಾಲನ್, ಎಸ್ಪಿ ಲೋಕೇಶ ಜಗಲಾಸರ್ ಇದ್ದರು.

    ಮೂರಲೇ ಅಲೆಗೆ ಸಿದ್ಧತೆ
    ಇನ್ನು ಕೋವಿಡ್ ವಿಚಾರವಾಗಿ ಜಿಲ್ಲೆಯಲ್ಲಿ 2ನೇ ಅಲೆ ತಗ್ಗಿದ್ದರೂ ಇನ್ನು 40 ಸಕ್ರಿಯ ಪ್ರಕರಣಗಳು ಇವೆ. ಅಲ್ಲದೆ, ಜಿಲ್ಲೆಯಲ್ಲಿ ಜನರು ಮಾಸ್ಕ್ ಹಾಕಿಕೊಳ್ಳುವುದು ಕಡಿಮೆ ಕಂಡು ಬರುತ್ತಿದೆ. ಹೀಗಾಗಿ ಜನರು ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಮಾಸ್ಕ್, ಸಾನಿಟೈಜಿಂಗ್, ಸಾಮಾಜಿಕ ಅಂತರಕ್ಕೆ ಒತ್ತುಕೊಡಬೇಕು. ಅಲ್ಲದೆ, ಮೂರನೇ ಅಲೆ ಎದುರಾದಲ್ಲಿ ಅದನ್ನು ಎದರುಸಲು ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಶಿವಯೋಗಿ ಕಳಸದ ಹೇಳಿದರು.

    ಜಿಪಂ ಕ್ರಿಯಾಯೋಜನೆಗೆ ಅನುಮೋದನೆ
    ಜಿಲ್ಲಾ ಪಂಚಾಯಿತಿಯ 370.22 ಕೋಟಿ ರೂ. ಕ್ರಿಯಾ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಈ ಪೈಕಿ 112.24 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ 55 ಕೋಟಿ ರೂ. ವೇತನಕ್ಕೆ ಬಳಕೆ ಆಗಲಿದ್ದು, ಉಳಿದಂತೆ ಜಿಪಂ ವತಿಯಿಂದ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ಶಿವಯೋಗಿ ಕಳಸದ ತಿಳಿಸಿದರು.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts