More

    ಮಂದಿರ ನಿರ್ಮಾಣದಲ್ಲಿ ಭಾಗಿಯಾಗಿ

    ಬಾಗಲಕೋಟೆ: ರಾಮ ಮಂದಿರ ನಿರ್ಮಾಣದ ಮೂಲಕ ಭಾರತೀಯರ ಶತಮಾನಗಳ ಕನಸು ನನಸಾಗುತ್ತಿದ್ದು, ಭವ್ಯ ಮಂದಿರ ನಿರ್ಮಾಣಕ್ಕಾಗಿ ನಡೆಯಲಿರುವ ನಿಧಿ ಸಮರ್ಪಣಾ ಕಾರ್ಯಕ್ರಮದಲ್ಲಿ ಸರ್ವರೂ ಭಾಗಿಯಾಗಬೇಕು ಎಂದು ಮಂದಿರದ ಟ್ರಸ್ಟಿಯೂ ಆಗಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

    ಭಾನುವಾರ ನಗರದ ಮಾರವಾಡಿಗಲ್ಲಿಯ ಮಹೇಶ್ವರಿ ಮಂಗಲ ಕಾರ್ಯಾಲಯದಲ್ಲಿ ರಾಮಮಂದಿರ ನಿಧಿ ಸಮರ್ಪಣ ಅಭಿಯಾನದ ಕಾರ್ಯಾಲಯ ಉದ್ಘಾಟಿಸಿ ಚರಂತಿಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಬೈಠಕ್‌ನಲ್ಲಿ ಅವರು ಮಾತನಾಡಿದರು.

    ಭವ್ಯ ಮಂದಿರಕ್ಕಾಗಿ ಅನೇಕ ಸಂತರು, ಕಾರ್ಯಕರ್ತರು ಪ್ರಾಣವನ್ನೇ ತ್ಯಾಗ ಮಾಡಿದ್ದರು, ಅವರ ತ್ಯಾಗದ ಪರಿಣಾಮ ಇದು ಭವ್ಯ ಮಂದಿರ ನಿರ್ಮಾಣವಾಗುತ್ತಿದೆ ಎಂದರು.

    ಹಿಂದಿನವರು ಮಂದಿರ ನಿರ್ಮಾಣಕ್ಕಾಗಿ ಹೋರಾಡಿದ್ದಾರೆ. ಇಂದಿನ ಸಮೂಹಕ್ಕೆ ಮಂದಿರ ನಿರ್ಮಾಣದ ಮಹತ್ತರ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿದೆ. ಜ.15ರಿಂದ 45 ದಿನ ನಡೆಯುವ ಅಭಿಯಾನದಲ್ಲಿ ಎಲ್ಲರೂ ಭಾಗವಹಿಸಬೇಕು. 500 ಕೋಟಿ ರೂ. ವೆಚ್ಚದಲ್ಲಿ ಮಂದಿರ, ಸುತ್ತಮುತ್ತಲು ಇತರ ಕಾರ್ಯಗಳನ್ನು ಕೈಗೊಳ್ಳಲು 1 ಸಾವಿರ ಕೋಟಿ ರೂ. ಅಗತ್ಯವಿದೆ. ಇದು ಜನರಿಂದಲೇ ಆಗಬೇಕಾಗಿರುವ ಕೆಲಸವಾಗಿರುವುದರಿಂದ ಜನಾಂದೋಲನದ ರೀತಿಯಲ್ಲಿ ಕಾರ್ಯಗಳು ನಡೆಯಲಿವೆ ಎಂದು ತಿಳಿಸಿದರು.

    ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಅನೇಕರು ಮಂದಿರ ನಿರ್ಮಾಣಕ್ಕೆ ವಿರೋಧಿಸಿದ್ದರು. ನೆಹರು ಕಾಲದಲ್ಲೂ ಅದಕ್ಕೆ ಅಡ್ಡಿ ಇತ್ತು. ಆದರೆ, ವಿಶ್ವಹಿಂದು ಪರಿಷದ್ ಹೋರಾಟ ಕೈಗೊಂಡು ಮಂದಿರದ ಕನಸು ನನಸಾಗಿಸಲು ಪ್ರೇರಣೆ ನೀಡಿತು. ನಂತರ ಎಲ್.ಕೆ ಅಡ್ವಾಣಿ ಅವರ ನೇತೃತ್ವದಲ್ಲಿ ದೇಶಾದ್ಯಂತ ರಥಯಾತ್ರೆ ನಡೆಯಿತು. ಇಂದು ಮಂದಿರದ ಕನಸು ನನಸಾಗುತ್ತಿದೆ ಎಲ್ಲರೂ ಕೈಜೋಡಿಸಬೇಕೆಂದು ಕೋರಿದರು.

    ವಿಶ್ವ ಹಿಂದು ಪರಿಷದ್ ಸಂಚಾಲಕ ಮನೋಹರ ಮಠದ ಮಾತನಾಡಿದರು. ಜಿಲ್ಲಾ ಸಂಘಚಾಲಕ ಡಾ.ಸಿ.ಎಸ್.ಪಾಟೀಲ, ಸಹಸಂಘಚಾಲಕ ಚಂದ್ರಶೇಖರ ದೊಡ್ಡಮನಿ, ಮಾಜಿ ಶಾಸಕ ಪಿ.ಎಚ್.ಪೂಜಾರ, ವಿಜಯ ಸುಲಾಖೆ, ಶಿವಕುಮಾರ ಮೇಲ್ನಾಡ, ಶ್ರೀನಾಥ ಸಜ್ಜನ, ಸತ್ಯನಾರಾಯಣ ಹೇಮಾದ್ರಿ, ಈರಪ್ಪ ಐಕೂರ, ಜಯಂತ ಕುರಂದವಾಡ ಇತರರು ಉಪಸ್ಥಿತರಿದ್ದರು. ಮೋಹನ ದೇಶಪಾಂಡೆ ಸ್ವಾಗತಿಸಿ, ವಂದಿಸಿದರು.

    ಗಣ್ಯರಿಂದ ನಿಧಿ ಸಮರ್ಪಣೆ
    ಅಯೋಧ್ಯ ರಾಮಮಂದಿರ ನಿರ್ಮಾಣಕ್ಕಾಗಿ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪಿ.ಎಚ್.ಪೂಜಾರ 1,11,111 ರೂ. ಚೆಕ್‌ನ್ನು ಪೇಜಾವರ ಶ್ರೀಗಳ ಮುಖಾಂತರ ಸಮರ್ಪಿಸಿದರು. ಪರಿವಾರದ ಹಿರಿಯ ಮುಖಂಡ ಈರಪ್ಪ ಐಕೂರ 25 ಸಾವಿರ ರೂ. ಹಾಗೂ ಜಗದೀಶ ಓಲೆಕಾರ 51 ಸಾವಿರ ರೂ., ಚಂದ್ರಶೇಖರ ಉಕ್ಕಲಿ 10 ಸಾವಿರ ರೂ. ನೀಡುವುದಾಗಿ ಸಭೆಗೆ ತಿಳಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts