More

    ಕೋಟೆನಾಡಲ್ಲಿ ಧಾರಾಕಾರ ಮಳೆ

    ಬಾಗಲಕೋಟೆ: ತಾಪಮಾನದ ಗಡಿ 40 ಡಿಗ್ರಿ ಸೆಲ್ಸಿಯಸ್ ದಾಟಿ ಜನರು ಬೆವರಿನ ಸ್ನಾನ ಮಾಡುವಂತಾಗಿದ್ದ ಬಾಗಲಕೋಟೆ ಜಿಲ್ಲೆಯಲ್ಲಿ ಇದೀಗ ಮಳೆಯ ಆರ್ಭಟ ನಡೆದಿದೆ. ಜತೆಗೆ ಗುಡುಗು, ಮಿಂಚುಗಳ ಅಬ್ಬರವೂ ಜೋರಾಗಿದೆ.

    ಹವಾಮಾನ ತಜ್ಞರು ಹೇಳಿದ್ದಕ್ಕಿಂತ ಒಂದು ವಾರ ಮೊದಲೇ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಸೋಮವಾರ ಮಧ್ಯಾಹ್ನದಿಂದಲೇ ಜಿಲ್ಲೆಯ ಬಹುತೇಕ ಕಡೆಗೆ ವರುಣನ ಆರ್ಭಟ ನಡೆದಿದೆ. ಬಾಗಲಕೋಟೆ, ಬಾದಾಮಿ, ಜಮಖಂಡಿ, ಮುಧೋಳ, ಲೋಕಾಪುರ, ರಬಕವಿ-ಬನಹಟ್ಟಿ ಮುಂತಾದ ಕಡೆಗೆ ಮಳೆ ಅರ್ಧಗಂಟೆ, ಕೆಲವು ಕಡೆಗಳಲ್ಲಿ ಒಂದು ಗಂಟೆ ಕಾಲ ಸುರಿದಿದೆ. ಹುನಗುಂದ ಪಟ್ಟಣದಲ್ಲಿ ಸಂಜೆವರೆಗೂ ಮೋಡ ಕವಿದ ವಾತಾವರಣ ಇದ್ದರೆ ಮಹಾಲಿಂಗಪುರದಲ್ಲಿ ಜಿಟಿಜಿಟಿ ಮಳೆ ಆಗಿರುವ ವರದಿಯಾಗಿದೆ.

    ಬಾದಾಮಿ ಪಟ್ಟಣ ಸೇರಿ ತಾಲೂಕಿನ ವಿವಿಧೆ ಕಡೆಗೆ ಕಳೆದ ಮೂರು ದಿನಗಳಿಂದ ಮಳೆ, ಗಾಳಿ, ಗುಡುಗು, ಮಿಂಚುಗಳ ಅಬ್ಬರ ಜೋರಾಗಿದೆ. ಸೋಮವಾರವೂ ಅರ್ಧ ಗಂಟೆ ಧಾರಾಕಾರ ಮಳೆ ಆಗಿದೆ. ಇದರಿಂದ ಅಗಸ್ತ್ಯ ಹೊಂಡಕ್ಕೆ ನೀರು ಹರಿದು ಬರುತ್ತಿದೆ. ಹೊಂಡಕ್ಕೆ ಹೊಂದಿಕೊಂಡಿರುವ ಬೆಟ್ಟದಲ್ಲಿನ ಐತಿಹಾಸಿಕ ಅಕ್ಕತಂಗಿ ಕಿರುಜಲಪಾತವೂ ಮೈದುಂಬಿ ದುಮ್ಮಿಕ್ಕಲು ಆರಂಭಿಸಿದ್ದು, ಜನರನ್ನು ತನ್ನತ್ತ ಕೈಬೀಸಿ ಕರೆಯಲಾರಂಭಿಸಿದೆ.

    ಮಳೆ ಅಬ್ಬರದಿಂದಾಗಿ ರಸ್ತೆಯೂ ಕಾಣದಂತಾಗಿದ್ದರಿಂದ ವಾಹನ ಸವಾರರು ಲೈಟ್ ಹಚ್ಚಿಕೊಂಡು ವಾಹನ ಚಲಾಯಿಸುತ್ತಿದ್ದರು. ಬೆಳಗ್ಗೆಯಿಂದಲೂ ಅರೇಝಳ, ಮಧ್ಯಾಹ್ನದ ಹೊತ್ತಿಗೆ ಮೋಡ ಕವಿದ ವಾತಾವರಣ ಇತ್ತು. ನಂತರ ಗುಡುಗು, ಮಿಂಚುಗಳ ಅಬ್ಬರದೊಂದಿಗೆ ಮಳೆ ಶುರುವಾಯಿತು.

    ರೈತರ ಮೊಗದಲ್ಲಿ ಸಂತಸ
    ಮುಂಗಾರು ವಿಳಂಬವಾಗಿ ಹೆಸರು ಬಿತ್ತನೆ ತಥಿ ಮುಗಿದು ಹೋಗುತ್ತೋ ಎನ್ನುವ ಆತಂಕದಲ್ಲಿದ್ದ ಜಿಲ್ಲೆಯ ಅನ್ನದಾತರಿಗೆ ಇದೀಗ ಬೀಳುತ್ತಿರುವ ಮಳೆ ಸಂತಸ ಉಂಟು ಮಾಡುತ್ತಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 2.65 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಪೈಕಿ 31,300 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಆಗಲಿದೆ. ಹೆಸರು ಬಿತ್ತನೆಗೆ ಜೂನ್ ಸಾತ್ ಕೊನೆಯ ತಥಿ ಇದ್ದು, ಅಷ್ಟರಲ್ಲಿ ಹದ ಮಳೆಗಾಗಿ ರೈತರು ಕಾಯ್ದು ಕುಂತಿದ್ದರು. ಇದೀಗ ಎರಡು ದಿನಗಳಿಂದ ವರುಣನ ದರ್ಶನದಿಂದ ಕೃಷಿ ಚಟುವಟಿಕೆಗಳು ಗರಿಗೆದರುವ ಲಕ್ಷಣಗಳು ಸ್ಪಷ್ಟವಾಗಿವೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts