More

    ಪತ್ರಿಕಾ ವೃತ್ತಿಗೆ ಉತ್ತಮ ದೇಶ ಕಟ್ಟುವ ಸಾಮರ್ಥ್ಯವಿದೆ


    ಬಾಗಲಕೋಟೆ: ಪತ್ರಿಕಾರಂಗದ ವೃತ್ತಿಗೆ ಸಮಾಜದಲ್ಲಿ ಗೌರವವಿದೆ. ಇರುವುದನ್ನು ಇದ್ದಂತೆ ಬರೆದು, ಸಮಾಜಕ್ಕೆ ತೋರಿಸುವ ಕೆಲಸ ಮಾಡುತ್ತದೆ. ಉತ್ತಮ ಸಮಾಜ, ದೇಶ ನಿರ್ಮಾಣದಲ್ಲಿ ಪತ್ರಿಕಾರಂಗದ ಪಾತ್ರ ಹಿರಿದು ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

    ನವನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ 2020-21ನೇ ಸಾಲಿನ ಕಾರ್ಯ ಚಟುವಟಿಕೆ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.

    ದೇಶದ ಯಾವುದೇ ಭಾಗದಲ್ಲಿ ಏನೇ ನಡೆದರೂ ಅದನ್ನು ಸಮಾಜಕ್ಕೆ ತೋರಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತವೆ. ಮಹಾಭಾರತದ ಸಂಜಯನ ಕೆಲಸದಂತೆ ಪತ್ರಕರ್ತರು ಕೆಲಸ ಮಾಡುತ್ತಾರೆ. ಸಂಜಯನಿಗೆ ದೊಡ್ಡ ಜ್ಞಾನವಿತ್ತು. ಭಗವದ್ಗೀತೆ ಸಂಜಯ ಹೇಳಿದ್ದು. ಪತ್ರಕರ್ತರ ಕೆಲಸವೂ ಒಂದು ಶಿಕ್ಷಣ ಪ್ರಸಾರವಿದ್ದಂತೆ. ಯಥಾವತ್ತಾಗಿ ಬರೆಯುವುದೇ ದೊಡ್ಡ ಕೆಲಸ. ಇದು ಅದ್ಭುತವಾದ ಕಲೆ. ಓದುಗರಿಗೆ ಮನಮುಟ್ಟುವಂತೆ ಅತ್ಯುತ್ತಮ ಭಾಷೆ, ಬರವಣಿಗೆ ಶೈಲಿ ಪತ್ರಕರ್ತರಿಗೆ ಮಾತ್ರ ರೂಢಿಯಾಗಿರುತ್ತದೆ. ಇದು ಸಾಮಾನ್ಯವಾದ ಕೆಲಸವಲ್ಲ ಎಂದರು.

    ಅನೇಕ ಸಂದರ್ಭದಲ್ಲಿ ಸಮಾಜದಲ್ಲಿ ನಡೆಯುವ ಒಳ್ಳೆಯ ಕೆಲಸಗಳು ಬೆಳಕಿಗೆ ಬರುವುದಿಲ್ಲ. ದೊಡ್ಡ ವ್ಯಕ್ತಿಗಳು ಎಡವಿಬಿದ್ದರೂ ಸುದ್ದಿಯಾಗುತ್ತವೆ. ಆಕರ್ಷಿತ ಸುದ್ದಿಗಳೇ ಹೆಚ್ಚು ಬರುತ್ತವೆ. ಹಾಗೆ ಆಗಬಾರದು. ಗುಣಮಟ್ಟ, ಮೌಲ್ಯಾಧಾರಿತ ಸುದ್ದಿಗಳು ಪ್ರಖರವಾಗಬೇಕು. ಪತ್ರಿಕಾ ಕೆಲಸವೂ ಒಂದು ನಿಸರ್ಗದ, ದೇವರ ಕೆಲಸವಿದ್ದಂತೆ. ಮಾಧ್ಯಮ ರಂಗದ ಉತ್ತಮ ಸುದ್ದಿ, ಕೆಲಸ-ಕಾರ್ಯಗಳಿಂದ ಸಮುದಾಯದಲ್ಲಿ ಉತ್ತಮ ಕೆಲಸಗಳೂ ನಡೆಯುತ್ತವೆ ಎಂದು ಹೇಳಿದರು.

    ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ಮಾತನಾಡಿದರು, ಹಿರಿಯ ಪತ್ರಕರ್ತರಾದ ಚಂದ್ರಶೇಖರ ಜಿಗಜಿನ್ನಿ, ಶಶಿಕುಮಾರ ಕೆರೂರ, ಆನಂದ ಜಿಗಜಿನ್ನಿ, ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಮೆಹಬೂಬ ಸರಕಾವಾಸ, ಪ್ರಕಾಶ ಜಿಗಜಿನ್ನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ದುತ್ತರಗಾಂವಿ, ಖಜಾಂಚಿ ಗುರುಚಿದಾನಂದ ಹಿರೇಮಠ ಸೇರಿ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾನಿಪ ಜಿಲ್ಲಾಧ್ಯಕ್ಷ ಸುಭಾಸ ಹೊದ್ಲೂರ ಸ್ವಾಗತಿಸಿದರು. ಈಶ್ವರ ಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ತ್ರಿವೇಂದ್ರ ಭಜಂತ್ರಿ ಪ್ರಾರ್ಥಿಸಿದರು. ಎಸ್.ಕೆ. ಬಿರಾದಾರ ಕಾರ್ಯಕ್ರಮ ನಿರೂಪಿಸಿದರು. ರವಿರಾಜ ಗಲಗಲಿ ವಂದಿಸಿದರು.

    ಪತ್ರಕರ್ತರು ಹಿಂದೆ ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡಿದ್ದರು. ಮಹಾತ್ಮ ಗಾಂಧೀಜಿ, ಜಯಪ್ರಕಾಶ ನಾರಾಯಣ ಅವರು ಹಲವು ವರ್ಷಗಳ ಕಾಲ ಪತ್ರಿಕೆ ನಡೆಸಿದ್ದರು. ದೇಶದಲ್ಲಿ ದೊಡ್ಡ ಆಂದೋಲನ ಸೃಷ್ಟಿ ಮಾಡಿದ್ದರು. ಯಾವುದೇ ಸೌಲಭ್ಯ-ಅನುಕೂಲತೆ ಇಲ್ಲದಿದ್ದರೂ ದೇಶ ಕಟ್ಟುವ ಕೆಲಸದಲ್ಲಿ ಜನರನ್ನು ಜಾಗೃತರನ್ನಾಗಿ ಮಾಡುವಲ್ಲಿ ಮಹತ್ತರ ಕೊಡುಗೆ ನೀಡಿದ್ದರು. ಇದೊಂದು ವಿಶೇಷವಾದ ಕರ್ತವ್ಯ. ಸರಸ್ವತಿಯ ಕೆಲಸ. ಜವಾಬ್ದಾರಿಯಿಂದ ನಿರ್ವಹಿಸಬೇಕು.
    – ಸಿದ್ಧೇಶ್ವರ ಸ್ವಾಮೀಜಿ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts