More

    ಸಂತ್ರಸ್ತರಿಂದ ಅನಿರ್ದಿಷ್ಟಾವಧಿ ಧರಣಿ

    ಬಾಗಲಕೋಟೆ: ಪ್ರವಾಹ ಪರಿಹಾರ ವಿತರಣೆಯಲ್ಲಿ ತಾರತಮ್ಯವಾಗಿದೆ ಎಂದು ಆರೋಪಿಸಿ ಜಿಲ್ಲೆಯ ಮುಧೋಳ ತಾಲೂಕಿನ ವಿವಿಧ ಗ್ರಾಮಗಳ ಸಂತ್ರಸ್ತರು ಜಿಲ್ಲಾಡಳಿತ ಭವನ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

    ಬುಧವಾರ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತಕ್ಕೆ ಆಗಮಿಸಿದ ಸಂತ್ರಸ್ತರು, ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಧರಣಿಗೆ ಕುಳಿತರು.

    ಮುಧೋಳ ತಾಲೂಕಿನ ಮಳಲಿ ಗ್ರಾಮದ ಗಂಗಯ್ಯ ನಾವಲಗಿಮಠ ಮಾತನಾಡಿ, ಪ್ರವಾಹದಿಂದ ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಸರ್ಕಾರ ನೀಡುತ್ತಿರುವ ಪರಿಹಾರ ಅನರ್ಹರಿಗೆ ತಲುಪಿವೆ. ಇದರಿಂದ ಸಂತ್ರಸ್ತರು ಕಷ್ಟದಿಂದ ಜೀವನ ಸಾಗಿಸುವಂತಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ನಮ್ಮ ಸಮಸ್ಯೆ ಆಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಆರಂಭದಲ್ಲಿ ಸರ್ಕಾರ ಪ್ರತಿ ಕುಟುಂಬಕ್ಕೆ ಘೋಷಣೆ ಮಾಡಿದ್ದ 10 ಸಾವಿರ ರೂ. ತಾತ್ಕಾಲಿಕ ಪರಿಹಾರ ಅನೇಕ ಅರ್ಹ ಸಂತ್ರಸ್ತರಿಗೆ ತಲುಪಿಲ್ಲ. ಪೂರ್ಣ ಪ್ರಮಾಣದಲ್ಲಿ ನಾಶವಾದ ಮನೆಗಳಿಗೆ ಮರಳಿ ಮನೆ ನಿರ್ಮಿಸಲು 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಇದರಲ್ಲಿಯೂ ಕೂಡ ಮೋಸವಾಗಿದೆ. ಮರು ಸಮೀಕ್ಷೆ ಮಾಡಬೇಕೆಂದು ಮುಧೋಳ ತಾಲೂಕು ಆಡಳಿತಕ್ಕೆ ಮನವಿ ಮಾಡಲಾಗಿತ್ತು. ಅದರಂತೆ ಅಧಿಕಾರಿಗಳು ಮರು ಸಮೀಕ್ಷೆ ಮಾಡಿದ್ದಾರೆ. ಸದ್ಯ ಆ ವರದಿಯನ್ನು ಅಪ್‌ಡೇಟ್ ಮಾಡುವ ಲಾಗ್‌ಇನ್ ಬಂದ್ ಮಾಡಲಾಗಿದೆ ಎಂದು ಮುಧೋಳ ತಹಸೀಲ್ದಾರ್ ಹೇಳುತ್ತಿದ್ದಾರೆ. ಸರ್ಕಾರ ಕೂಡಲೇ ವರದಿ ಅಪ್‌ಡೇಟ್ ಮಾಡಲು ಲಾಗ್‌ಇನ್ ಆರಂಭಿಸಬೇಕು ಎಂದು ಒತ್ತಾಯಿಸಿದರು.

    ಮುಖಂಡರಾದ ಯಲ್ಲಪ್ಪ ಹೆಗಡೆ, ಸಂಜು ಗಸ್ತಿ, ವಿಠಲ ಹೂಗಾರ, ವಿಠಲ ಇಟಕನ್ನವರ, ಶ್ರೀಕಾಂತ ಚಿನಿವಾಲ, ನಾಗಪ್ಪ ಹೂಗಾರ, ನಿಂಗಪ್ಪ ತೇಲಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.

    ರೈತರ ಜಮೀನಿಗೆ ಕೆರೆ ಮಣ್ಣು ಹಾಕಿ
    ಮುಧೋಳ ಭಾಗದ ಸಂತ್ರಸ್ತರ ಹೋರಾಟಕ್ಕೆ ಬೆಂಬಲ ಸೂಚಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಬಾದಾಮಿ ತಾಲೂಕಿನಲ್ಲಿ ಮಲಪ್ರಭಾ ನದಿಯಿಂದ ಉಂಟಾದ ಪ್ರವಾಹದಿಂದ ರೈತರ ಜಮೀನುಗಳಲ್ಲಿನ ಮಣ್ಣು ಕೊಚ್ಚಿಕೊಂಡು ಹೋಗಿದೆ. ಇದರಿಂದ ಕೃಷಿ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಜಮೀನುಗಳಲ್ಲಿ ಸರ್ಕಾರ ಕೆಂದೂರ ಕೆರೆಯ ಮಣ್ಣನ್ನು ತುಂಬಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಂಘಟನೆ ಮನವಿ ಪತ್ರದಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts