More

    ನಾರಿಯರ ಸಂಕ್ರಾಂತಿ ಸಂಭ್ರಮ

    ಬಾಗಲಕೋಟೆ: ಮುಧೋಳದ ಸಪ್ತಸ್ವರ ಸಂಗೀತ, ನೃತ್ಯ, ಸಾಂಸ್ಕೃತಿಕ ಸಂಸ್ಥೆಯಿಂದ ಸತತ ಮೂರನೇ ವರ್ಷ ಬೀಳಗಿ ತಾಲೂಕಿನ ಕೃಷ್ಣಾ, ಘಟಪ್ರಭಾ ನದಿ ಸೇರುವ ಚಿಕ್ಕಸಂಗಮ ಶ್ರೀ ಕ್ಷೇತ್ರದಲ್ಲಿ ಸಂಕ್ರಾಂತಿ ಹಬ್ಬವನ್ನು ಭಾನುವಾರ ಅತ್ಯಂತ ಸಡಗರದಿಂದ ಆಚರಿಸಲಾಯಿತು.

    ಕಳೆದ ಎರಡು ವರ್ಷ ಬಾಗಲಕೋಟೆ- ವಿಜಯಪುರ ಅವಳಿ ಜಿಲ್ಲೆಯ ಮಹಿಳೆಯರು ಭಾಗವಹಿಸಿದ್ದರು. ಈ ಬಾರಿಯ ಸುಗ್ಗಿ- ಹುಗ್ಗಿ ಕಾರ್ಯಕ್ರಮದಲ್ಲಿ ಅವಳಿ ಜಿಲ್ಲೆ ಜತೆಗೆ ಗದಗ, ಧಾರವಾಡ, ಬೆಳಗಾವಿ ಜಿಲ್ಲೆಯಿಂದಲೂ ಮಹಿಳೆಯರು ಭಾಗವಹಿಸಿದ್ದು ವಿಶೇಷ.
    ಬೆಳಗ್ಗೆ ಎತ್ತಿನಬಂಡಿಯಲ್ಲಿ ಆಗಮಿಸಿದ 7 ವರ್ಷ ವಯಸ್ಸಿನ ಬಾಲೆಯರಿಂದ 70 ವರ್ಷ ವಯಸ್ಸಿನ ವೃದ್ಧರವರೆಗೂ ಮೂರು ತಲೆಮಾರಿನ ಜನರು ಚಿಕ್ಕಸಂಗಮದಲ್ಲಿ ಸಮಾವೇಶಗೊಂಡು ಸಂಕ್ರಾಂತಿ ಹಬ್ಬವನ್ನು ಸಂಜೆವರೆಗೂ ಆಚರಿಸಿದರು.

    ಇಳಕಲ್ಲ ಸೀರೆ, ಕುಪ್ಪಸ, ತಲೆಗೆ ತುರುಬು, ಸೊಂಟಕ್ಕೆ ಡಾಬು, ಮೂಗಿಗೆ ಭಾರ ಎನ್ನುವಷ್ಟು ಮೂಗುತಿ ಹಾಕಿಕೊಂಡು ಪಕ್ಕಾ ಹಳ್ಳಿ ಸೊಗಡಿನ ಹೆಣ್ಣುಮಕ್ಕಳಂತೆ ಆಗಮಿಸಿದ್ದ ಪ್ರತಿಯೊಬ್ಬರೂ ದೇಶೀಯ ಜಾನಪದ ಹಬ್ಬಕ್ಕೆ ಕಳೆತಂದರು.

    ಉಡುಗೆಯ ಕತೆಗೆ ಊಟದಲ್ಲೂ ಗ್ರಾಮೀಣ ಸೊಗಡು ಎದ್ದು ಕಾಣುತ್ತಿತ್ತು. ಕೆನೆಮೊಸರು, ಎಣ್ಣೆಗಾಯಿ ಬದನೆ, ಕಾಳು, ಶೇಂಗಾ, ಕೆಂಪು ಚಟ್ನಿ, ಶೇಂಗಾ ಹೋಳಿಗೆ, ಮಾದಲಿ, ಅನ್ನ ಸಾಂಬರು, ಉಪ್ಪಿನಕಾಯಿ, ಸಂಡಿಗೆ ಸೇರಿ ಉತ್ತರ ಕರ್ನಾಟಕದ ಪ್ರಸಿದ್ಧ ಖಾದ್ಯಗಳನ್ನು ತಯಾರಿಸಿದ್ದರು.

    ಬೆಳಗ್ಗೆ ಸಂಗಮನಾಥನಿಗೆ ಪೂಜೆ, ಕೃಷ್ಣಾ- ಘಟಪ್ರಭಾ ಸಂಗಮದಲ್ಲಿ ಗಂಗಾಪೂಜೆ, ಬಾಗಿನ ಅರ್ಪಣೆ ನಡೆಯಿತು. ಸಂಕ್ರಾಂತಿ ಹಬ್ಬದ ಕಬ್ಬು, ಬೆಲ್ಲದಚ್ಚು, ನೇಗಿಲು ಇಟ್ಟು ಪೂಜೆ ನೆರವೇರಿಸಿದರು. ಅನ್ನದಾತರಿಗೆ ಆರತಿ ಬೆಳಗಿ ಹರಿಸಿದರು. ಊಟದ ನಂತರ ನಾರಿಯರು ಸಂಜೆ ವೇಳೆ ಸಂಪೂರ್ಣ ಮನರಂಜನೆ ಕಾರ್ಯಕ್ರಮದಲ್ಲಿ ತೊಡಗಿದರು.

    ಗಾಳಿಪಟ, ಸಕ್ಕಾಸರಗಿ, ಕೋಲಾಟ ಸೇರಿ ವಿವಿಧ ಆಟಗಳನ್ನು ಆಡಿ ಖುಷಿ ಪಟ್ಟರು. ವಿಶೇಷವಾಗಿ 50, 60 ವರ್ಷದ ಮಹಿಳೆಯರು ಸಕ್ಕಾಸರಗಿ ಆಡುವ ಮೂಲಕ ತಮ್ಮ ಬಾಲ್ಯಕ್ಕೆ ಜಾರಿದರು.

    ಸುಗ್ಗಿ-ಹುಗ್ಗಿ ಕಾರ್ಯಕ್ರಮದಲ್ಲಿ ಸಪ್ತಸ್ವರ ಸಂಸ್ಥೆಯ ಜ್ಯೋತಿ ಪಾಟೀಲ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಧರ್ಮಪತ್ನಿ ಶೈಲಜಾ ಪಾಟೀಲ, ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಅವರ ಧರ್ಮಪತ್ನಿ ರಾಜೇಶ್ವರಿ ಚರಂತಿಮಠ, ಐಎಎಸ್ ಅಧಿಕಾರಿ ಶಿವಯೋಗಿ ಕಳಸದ ಅವರ ಧರ್ಮಪತ್ನಿ ಊರ್ಮಿಳಾ ಕಳಸದ ಸೇರಿ ನೂರಾರು ಮಹಿಳೆಯರು ಭಾಗವಹಿಸಿದ್ದರು.

    ಕಳೆದ ಮೂರು ವರ್ಷಗಳಿಂದ ಚಿಕ್ಕಸಂಗಮದಲ್ಲಿ ಏರ್ಪಡಿಸುತ್ತಿರುವ ಸುಗ್ಗಿ-ಹುಗ್ಗಿ ಸಂಭ್ರಮ ಆಕರ್ಷಕವಾಗುತ್ತಿದೆ. ವರ್ಷ ವರ್ಷ ವಿವಿಧೆಡೆಯಿಂದ ಮಹಿಳೆಯರು ಭಾಗವಹಿಸುತ್ತಿದ್ದಾರೆ. ನಮ್ಮ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಲು ಇಂಥ ಆಚರಣೆಗಳು ಅಗತ್ಯ.
    – ರಾಜೇಶ್ವರಿ ಚರಂತಿಮಠ, ಊರ್ಮಿಳಾ ಕಳಸದ, ಉಮಾ ಮಾಳವಾಡ, ಜ್ಯೋತಿ ಪಾಟೀಲ, ಗೀತಾ ಗಿರಿಜಾನವರ

    ನಮ್ಮ ಹಬ್ಬಗಳ ಬಗ್ಗೆ ಹೆಚ್ಚಿನ ಮಾಹಿತಿ ಇಂದಿನ ಯುವ ಸಮೂಹಕ್ಕೆ ಇಲ್ಲ. ಕಳೆದ ಮೂರು ವರ್ಷಗಳಿಂದ ಇಲ್ಲಿ ಸಂಕ್ರಾಂತಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ. ಇದರಲ್ಲಿ ಪಾಲ್ಗೊಂಡು ನಮಗೂ ಹಬ್ಬ-ಹರಿದಿನಗಳ ಮಹತ್ವ ತಿಳಿಯಲು ಸಹಾಯಕವಾಗಿದೆ. ಇಂಥ ಕಾರ್ಯಕ್ರಮ ಹೆಚ್ಚೆಚ್ಚು ಆಚರಿಸುವಂತಾಗಬೇಕು.
    – ಸ್ನೇಹಾ ಕೋಟಿ, ಅಮೂಲ್ಯ ಪಾಟೀಲ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts