More

    ಮಲೇರಿಯಾ, ಚಿಕೂನ್‌ಗುನ್ಯಾ ತಡೆಗೆ ಕ್ರಮ

    ಬಾಗಲಕೋಟೆ: ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದು, ಮಲೇರಿಯಾ ಮತ್ತು ಚಿಕೂನ್‌ಗುನ್ಯಾ ಹಾಗೂ ಮೆದುಳು ಜ್ವರ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೂನ್ ತಿಂಗಳಲ್ಲಿ ಮಳೆ ಅಧಿಕ ಪ್ರಮಾಣದಲ್ಲಿ ಸುರಿದು ಸೊಳ್ಳೆಗಳ ಉತ್ಪಾದನೆ ಹೆಚ್ಚಾಗಿ ಕೀಟಜನ್ಯ ರೋಗಗಳು ಹರಡುವ ಸಾಧ್ಯತೆಗಳಿರುತ್ತವೆ. ಸೊಳ್ಳೆಗಳನ್ನು ನಾಶಮಾಡಲು ಕೀಟನಾಶಕ ಸಿಂಪಡಿಸಿ ದಿನನಿತ್ಯ ಸೊಳ್ಳೆ ಪರದೆಯನ್ನು ಉಪಯೋಗಿಸುವದರಿಂದ ಮಾರಕ ರೋಗಗಳಿಂದ ರಕ್ಷಣೆ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.

    ಐಹೊಳೆ ಸ್ಮಾರಕಗಳ ಸುತ್ತಮುತ್ತ ಮಳೆಗಾಲದಲ್ಲಿ ನೀರು ನಿಲ್ಲುತ್ತಿರುವದರಿಂದ ಸೊಳ್ಳೆಗಳ ಉತ್ಪಾದನೆ ಹೆಚ್ಚಾಗುತ್ತಿವೆ. ಎಎಸ್‌ಐ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳೊಂದಿಗೆ ಚರ್ಚಿಸಿ ಚರಂಡಿ ನಿರ್ಮಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ನವನಗರದ ಕೋರ್ಟ ಹಿಂದೆ, ಸೆಕ್ಟರ್ ನಂ.27ರ ಗಣೇಶ ಮಂದಿರ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸುತ್ತ ಚರಂಡಿಯಲ್ಲಿ ಸಾಕಷ್ಟು ನೀರು ನಿಲ್ಲುತ್ತಿದೆ. ಈ ಬಗ್ಗೆ ಬಿಟಿಡಿಎ ಅಧಿಕಾರಿಗಳು ಗಮನಿಸಬೇಕು. ಇದೇ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

    ಮನೆಯ ಒಳಗಡೆ ಗೋಡೆ, ಬಾಗಿಲುಗಳ ಮೇಲೆ ಕೀಟನಾಶಕಗಳನ್ನು ಸಿಂಪಡಿಸುವದರಿಂದ ಸೊಳ್ಳೆಗಳು ಸಾಯುತ್ತವೆ. ಇದರಿಂದ ರೋಗ ತಡೆಗಟ್ಟಲು ಸಾಧ್ಯ. ಕೀಟ ನಾಶಕ ಸಿಂಪಡಣಾ ಕಾರ್ಯಕರ್ತರು ನಿಮ್ಮ ಮನೆಗೆ ಬಂದಾಗ ತಪ್ಪದೇ ಎಲ್ಲಾ ಕೋಣೆಗಳಿಗೆ ಕೀಟನಾಶಕ ಸಿಂಪಡಣೆ ಮಾಡಿಸಬೇಕು. ಸೊಳ್ಳೆ ಪರದೆ ದಿನನಿತ್ಯ ಉಪಯೋಗಿಸಿ, ಸೊಳ್ಳೆ ಕಡಿತದಿಂದ ಹರಡುವ ರೋಗಗಳಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮಕ್ಕಳು, ಗರ್ಭಿಣಿಯರು, ವಯೋವೃದ್ಧರು ಹಾಗೂ ರೋಗಿಗಳು ಕಡ್ಡಾಯವಾಗಿ ಸೊಳ್ಳೆ ಪರದೆ ಉಯೋಗಿಸಬೇಕು ಎಂದರು.
    ಕೀಟಜನ್ಯ ರೋಗ ನಿಯಂತ್ರಣ ಕಾರ್ಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್, ನಗರಾಭಿವೃದ್ಧಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೈಗಾರಿಕಾ ಇಲಾಖೆಗಳ ಪಾತ್ರವು ಮುಖ್ಯಮಾಗಿದೆ. ಈ ಕುರಿತು ತಮ್ಮ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ನಿರ್ದೇಶನ ನೀಡಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವಿಜಯ ಕಂಠಿ, ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಡಿ.ಪಟ್ಟಣಶೆಟ್ಟಿ, ಆರ್‌ಸಿಎಚ್ ಅಧಿಕಾರಿ ಡಾ.ಬಿ.ಜಿ.ಹುಬ್ಬಳ್ಳಿ ಸೇರಿದಂತೆ ಆಯಾ ತಾಲೂಕಿನ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

    ಲಾರ್ವಾಹಾರಿ ಮೀನು ಬಿಡಲಾಗುವುದು…
    ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಜಯಶ್ರೀ ಎಮ್ಮಿ ಮಾತನಾಡಿ, ಮಲೇರಿಯಾ, ಡೆಂೆ, ಚಿಕೂನ್‌ಗುನ್ಯಾ ಪ್ರಕರಣಗಳು ಬಾಗಲಕೋಟೆ, ಬಾದಾಮಿ ಹಾಗೂ ಹುನಗುಂದದಲ್ಲಿ ಮಾತ್ರ ಹೆಚ್ಚಾಗಿ ಕಂಡುಬಂದಿರುತ್ತವೆ. ಇವುಗಳ ನಿಯಂತ್ರಣಕ್ಕಾಗಿ ಕೀಟ ನಾಶಕ ಸಿಂಪರಣೆ, ಸೊಳ್ಳೆ ಪರದೆ ವಿತರಣೆ, ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ಶಿಕ್ಷಣ ಮತ್ತು ಲಾರ್ವಾಗಳ ನಿಯಂತ್ರಣ ಬಗ್ಗೆ ಮಾಹಿತಿ ನೀಡಲಾಗುವುದು. ನೀರಿನ ತಾಣಗಳಲ್ಲಿ ಲಾರ್ವಾಹಾರಿ ಮೀನುಗಳನ್ನು ಬಿಡುವ ಕಾರ್ಯ ಮಾಡಲಾಗುತ್ತಿದೆ. ಅಲ್ಲದೆ ಬಳಕೆ ಮಾಡುವ ನೀರಿಗೆ ಟೆಮಿಪಾಸ್ ಆಯಿಲ್ ಹಾಕಿ ಸೊಳ್ಳೆ ಉತ್ಪತ್ತಿಯಾಗುವುದನ್ನು ತಡೆಗಟ್ಟುವುದು, ಮನೆಯಲ್ಲಿ ಶೇಖರಿಸುವ ನೀರನ್ನು ವಾರಕ್ಕೊಮ್ಮೆ ಸ್ವಚ್ಛಮಾಡಬೇಕು. ನೀರಿನ ಟ್ಯಾಂಕ್‌ನ ಮೇಲೆ ಮುಚ್ಚಳಿಕೆ ಹಾಕಬೇಕು ಎಂದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts