More

    ತೋಟಗಾರಿಕೆ ಉತ್ಪನ್ನ ರಫ್ತು ಹೆಚ್ಚಳಕ್ಕೆ ಕ್ರಮ

    ಬಾಗಲಕೋಟೆ: ಹಣ್ಣು, ತರಕಾರಿ ಹಾಗೂ ಹೂಗಳ ರಫ್ತು ಪ್ರಮಾಣ ಶೇ.2.5 ರಿಂದ ಶೇ.5.5ಕ್ಕೆ ತಲುಪಿದ್ದು, ಅದನ್ನು ಶೇ.20ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಡಾ.ಕೆ.ಸಿ.ನಾರಾಯಣಗೌಡ ಹೇಳಿದರು.

    ನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ತೋಟಗಾರಿಕೆ ಮೇಳದಲ್ಲಿ ಭಾನುವಾರ ಅತ್ಯುತ್ತಮ ತೋಟಗಾರಿಕೆ ರೈತ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆನ್‌ಲೈನ್ ವರ್ಚ್ಯುವಲ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ತೋಟಗಾರಿಕೆ ಬೆಳೆಗಳಿಗೆ ಇನ್ನಷ್ಟು ಉತ್ತೇಜನ ನೀಡಲಾಗುವುದು. ತೋವಿವಿ ಸಂಶೋಧನೆಗಳು ರೈತರಿಗೆ ತಲುಪಿ ತನ್ಮೂಲಕ ಅನ್ನದಾತರಿಗೆ ಹೊಸ ಶಕ್ತಿ ತುಂಬುವ ಕೆಲಸವಾಗಬೇಕು. ತೋಟಗಾರಿಕೆ ಕೃಷಿಯಿಂದ ರೈತರ ಆರ್ಥಿಕ ಮಟ್ಟ ಸುಧಾರಣೆಯಾಗುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ರಾಜಸ್ವ ಕೊರತೆಯಾಗಿದೆ. ಇದರಿಂದ ಅನುದಾನ ಬಿಡುಗಡೆ ವಿಳಂಬವಾಗುತ್ತಿದೆ. ತೋವಿವಿ ನೀಡಿರುವ ಮನವಿ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.

    ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ತೋಟಗಾರಿಕೆ ಬೆಳೆಗಳ ಇಳುವರಿ ಹೆಚ್ಚಿಸುವ ನಿಟ್ಟಿನಲ್ಲಿ ವಿವಿ ವಿಜ್ಞಾನಿಗಳು ಗಮನ ಹರಿಸಬೇಕು. ಹಣ್ಣು ಮತ್ತು ತರಕಾರಿಗಳಲ್ಲಿ ಸಾಕಷ್ಟು ಪೋಷಕಾಂಶವಿದೆ. ಆದರೆ, ಹಣ್ಣುಗಳನ್ನು ನಿರೀಕ್ಷಿತ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಬರುವ ಆವಿಷ್ಕಾರ ನಡೆಸಬೇಕು. ಕೇವಲ ಉತ್ಪಾದನೆಗೆ ಮಾತ್ರ ಗಮನ ಹರಿಸದೆ ಮಾರುಕಟ್ಟೆಯ ಸ್ಥಿತಿಗತಿಗಳ ಬಗ್ಗೆಯೂ ರೈತರಿಗೆ ಸಲಹೆ ನೀಡಬೇಕು. ಬೆಳೆದ ರೈತನಿಗೆ ಲಾಭ ದೊರೆಯುವಂತೆ ಮಾಡುವ ಕಾರ್ಯ ವಿಶ್ವ ವಿದ್ಯಾಲಯದ್ದು ಎಂದು ತಿಳಿಸಿದರು.

    ನವದೆಹಲಿಯ ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ವೆಂಕಟ ಸುಬ್ರಮಣ್ಯ ಮಾತನಾಡಿ, ತೋಟಗಾರಿಕೆ ಕೃಷಿಯಲ್ಲಿ ಸಾಂಬಾರ ಪದಾರ್ಥಗಳ ಬೆಳೆಗಳನ್ನು ಬೆಳೆಯಲು ರೈತರು ಹೆಚ್ಚು ಆಸಕ್ತಿ ವಹಿಸಬೇಕು. ಪ್ರಕೃತಿಯಲ್ಲಿನ ವಾತಾವರಣ ಬದಲಾವಣೆ ಬಹಳಷ್ಟು ಬೆಳೆಗಳಿಗೆ ಸಂಕಷ್ಟ ಉಂಟು ಮಾಡುತ್ತದೆ. ಈ ನಿಟ್ಟಿನಲ್ಲಿ ಸಂಶೋಧನೆ ನಡೆದು ಬೆಳೆಗಳ ರಕ್ಷಣೆಗೆ ಹೊಸ ಮನ್ವಂತರ ಸೃಷ್ಟಿಸಬೇಕಿದೆ. ಸರ್ಕಾರ ತೋಟಗಾರಿಕೆ ಉತ್ಪನ್ನಗಳ ಶೇಖರಣೆಗೆ ಶೀತಲ ಘಟಕ ಸ್ಥಾಪನೆ, ಶೀತಲ ವಾಹನ ಸೌಕರ್ಯ ಕಲ್ಪಿಸುವ ಬಗ್ಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು.

    ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ, ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಬಿ.ಚಟ್ಟಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಅಶೋಕ ಸೊನ್ನದ, ತೋವಿವಿಯ ಕುಲಪತಿ ಡಾ.ಕೆ.ಎಂ.ಇಂದಿರೇಶ ಇತರರು ಉಪಸ್ಥಿತರಿದ್ದರು.

    23 ಲ ಶ್ರೇಷ್ಠರಿಗೆ ಪ್ರಶಸ್ತಿ ಪ್ರದಾನ
    ಕಾರ್ಯಕ್ರಮದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಪ್ರತಿ ಜಿಲ್ಲೆಗೆ ಒಬ್ಬರಂತೆ ಒಟ್ಟು 23 ಜನರಿಗೆ ಅತ್ಯುತ್ತಮ ತೋಟಗಾರಿಕೆ ರೈತ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಾಗಲಕೋಟೆ ಜಿಲ್ಲೆಯ ಶರಣವ್ವ ಹಾದಿಮನಿ, ಬೆಳಗಾವಿಯ ಲಕ್ಷ್ಮೀಕಾಂತ ಸೊಲ್ಲಾಪುರ, ಬೆಂಗಳೂರು ಗ್ರಾಮಾಂತರ ಪ್ರದೇಶದ ನಿತುನ್ ಎನ್., ಬೆಂಗಳೂರು ನಗರದ ಗೋಪಾಲಕೃಷ್ಣ ಎಚ್.ಕೆ., ಬೀದರನ ವಿಜಯ ಸೂರ್ಯವಂಶಿ, ಚಾಮರಾಜನಗರದ ನಾಗಾರ್ಜುನ ಕುಮಾರ್ ಎಸ್.ಎಂ., ಚಿಕ್ಕಬಳ್ಳಾಪುರದ ಶಿವಪ್ರಸಾದ ಎಸ್.ಎನ್., ಧಾರವಾಡ ಜಿಲ್ಲೆಯ ಬಸವರಾಜ ವಿಭೂತಿ, ಗದಗ ಜಿಲ್ಲೆಯ ಹನುಮಪ್ಪ ಸಾಲಿ, ಹಾವೇರಿ ಜಿಲ್ಲೆಯ ಗೋಪಾಲಗೌಡ ಬಸನಗೌಡರ, ಹಾಸನ ಜಿಲ್ಲೆಯ ಕೆ.ಪಿ.ಗೋಪಕುಮಾರ, ಕಲಬುರಗಿ ಜಿಲ್ಲೆಯ ನಿಜಲಿಂಗಪ್ಪ ಕಲ್ಯಾಣ, ಕೋಲಾರ ಜಿಲ್ಲೆಯ ಎನ್.ಧರ್ಮಲಿಂಗ ನಾರಾಯಣಸ್ವಾಮಿ, ಮಂಡ್ಯ ಜಿಲ್ಲೆಯ ಪಿ.ಎಸ್.ವಿಜಯಕುಮಾರ, ಮೈಸೂರು ಜಿಲ್ಲೆಯ ಶ್ರೀಮತಿ ದಾಸಿ, ರಾಮನಗರ ಜಿಲ್ಲೆಯ ಹೊನ್ನೆಗೌಡ ಮುನಿಯಪ್ಪ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಹಾಬಲೇಶ್ವರ ಹೆಗಡೆ, ತಮಕೂರು ಜಿಲ್ಲೆಯ ರಾಜಶೇಖರಯ್ಯ ಬಸವೇಗೌಡ, ವಿಜಯಪುರ ಜಿಲ್ಲೆಯ ಪ್ರವೀಣ ಬಾಳಿಗೇರಿ, ಯಾದಗಿರಿ ಜಿಲ್ಲೆಯ ಅನಂತಪ್ಪ ರಾಥೋಡ, ಬಳ್ಳಾರಿ ಜಿಲ್ಲೆಯ ಸತ್ಯನಾರಾಯಣ ಶೆಟ್ಟಿ, ಕೊಪ್ಪಳ ಜಿಲ್ಲೆಯ ಮಾರುತಿ ನಾಯಕ, ರಾಯಚೂರು ಜಿಲ್ಲೆಯ ಶಿವಕುಮಾರ ಪಾಟೀಲ ಅವರಿಗೆ ಪ್ರಶಸ್ತಿ ನೀಡಲಾಯಿತು.



    ತೋಟಗಾರಿಕೆ ಉತ್ಪನ್ನ ರಫ್ತು ಹೆಚ್ಚಳಕ್ಕೆ ಕ್ರಮ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts