More

    ಕೋಟೆನಾಡಿನಲ್ಲಿ ಬಂದ್ ನೀರಸ !

    ಬಾಗಲಕೋಟೆ: ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕೋಟೆನಾಡಿನಲ್ಲಿ ಕೇವಲ ಕನ್ನಡ ಪರ ಸಂಘಟನೆಗಳ ಪ್ರತಿಭಟನೆಗಳಿಗೆ ಮಾತ್ರ ಬಂದ್ ಸೀಮಿತವಾಯಿತು. ಉಳಿದಂತೆ ದೈನಂದಿನ ಚಟುವಟಿಕೆಗೆ ಯಾವುದೇ ಅಡೆತಡೆ ಉಂಟಾಗಲಿಲ್ಲ.

    ಬಾಗಲಕೋಟೆ ನಗರ, ಮುಧೋಳ, ಜಮಖಂಡಿ, ತೇರದಾಳ, ರಬಕವಿ-ಬನಹಟ್ಟಿ, ಬೀಳಗಿ, ಲೋಕಾಪುರ, ಹುನಗುಂದ, ಇಳಕಲ್ಲ, ಗುಳೇದಗುಡ್ಡ, ಬಾದಾಮಿ, ಕೆರೂರ, ಕಮತಗಿ ಸೇರಿದಂತೆ ಎಲ್ಲೆಡೆ ಜನ ಜೀವನ ಯಥಾಸ್ಥಿತಿಯಲ್ಲಿತ್ತು. ಬೆಳಗ್ಗೆಯಿಂದಲೇ ಸಾರಿಗೆ ಬಸ್, ಆಟೋ, ಟಂಟಂಗಳು ಸಂಚಾರ ಆರಂಭಿಸಿದವು. ಸಂಘ, ಸಂಸ್ಥೆಗಳು ಮತ್ತು ವ್ಯಾಪಾರಸ್ಥರು ಬೆಂಬಲ ಸೂಚಿಸಲಿಲ್ಲ. ಅಲ್ಲದೆ, ಕಚೇರಿ, ಅಂಗಡಿ ಮುಂಗಟ್ಟುಗಳು ಕೂಡ ಬಂದ್ ಮಾಡಲಿಲ್ಲ. ಹೀಗಾಗಿ ಮಾರುಕಟ್ಟೆ, ಬಸ್ ನಿಲ್ದಾಣ, ರೈಲು ನಿಲ್ದಾಣ ಪ್ರಮುಖ ರಸ್ತೆ, ವೃತ್ತ, ಬೀದಿಗಳಲ್ಲಿ ನಿತ್ಯದ ಚಟುವಟಿಕೆಗಳು ಕಂಡು ಬಂದವು. ಸಾರ್ವಜನಿಕರಿಂದಲೂ ಬಂದ್‌ಗೆ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಆಸ್ಪತ್ರೆ, ಔಷಧ ಮಳಿಗೆ ಇತರ ಅಗತ್ಯ ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಲಿಲ್ಲ.

    ಜಿಲ್ಲೆಯ ವಿವಿಧೆಡೆ ಕನ್ನಡಪರ ಸಂಘಟನೆಗಳು ಹೋರಾಟ ನಡೆಸಿದವು. ರಾಜ್ಯ ಬಿಜೆಪಿ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಕನ್ನಡಿಗರು, ಮರಾಠಿ ಭಾಷಿಕರ ನಡುವೆ ಕಂದಕ ಸೃಷ್ಟಿಸುತ್ತಿದೆ. ಅಲ್ಲದೆ, ಬಿಜೆಪಿ ಕೆಲ ಶಾಸಕರು ಕನ್ನಡ ಹೋರಾಟಗಾರರಿಗೆ ಅಪಮಾನ ಮಾಡಿದ್ದು, ಕೂಡಲೇ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ತಹಸೀಲ್ದಾರ್ ಹಾಗೂ ಜಿಲ್ಲಾಡಳಿತ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

    ಅರೆಬೆತ್ತಲೆ ಮೆರವಣಿಗೆ
    ಬಾಗಲಕೋಟೆ ನಗರದ ಬಸವೇಶ್ವರ ವೃತ್ತದಲ್ಲಿ ಎಚ್.ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಪ್ರತಿಭಟನೆ ನಡೆಸಿದರು. ಬಸವೇಶ್ವರ ವೃತ್ತದಿಂದ ಎಂ.ಜಿ.ರಸ್ತೆ, ವಲ್ಲಭಭಾಯಿ ವೃತ್ತ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಕಪ್ಪು ಪಟ್ಟಿ ಧರಿಸಿ ಅರೆಬೆತ್ತಲೆ ಮೆರವಣಿಗೆ ನಡೆಸಿದರು. ಕೈಯಲ್ಲಿ ಖಾಲಿ ಡಬ್ಬ ಹಿಡಿದು ವಿನೂತವಾಗಿ ತಮ್ಮ ಆಕ್ರೋಶ ಹೊರ ಹಾಕಿದರು.

    ಜಿಲ್ಲಾ ಘಟಕ ಅಧ್ಯಕ್ಷ ಬಿ.ಎಂ. ಪಾಟೀಲ ಮಾತನಾಡಿ, ಸಿಎಂ ಬಿ.ಎಸ್.ಯಡಿಯೂರಪ್ಪ ಸರ್ಕಾರ ಹಾಗೂ ಬಿಜೆಪಿ ಪಕ್ಷ ಕನ್ನಡಿಗರ ವಿರೋಧಿ ಧೋರಣೆ ಅನುಸರಿಸುತ್ತಿವೆ. ಕನ್ನಡ ನಾಡಿನಲ್ಲಿ ಭಾಷೆಗಳ ಹೆಸರಿನಲ್ಲಿ ಅಶಾಂತಿ ಉಂಟು ಮಾಡುತ್ತಿವೆೆ. ಯಡಿಯೂರಪ್ಪ ಕನ್ನಡಿಗರ ಕೈಯಲ್ಲಿ ಖಾಲಿ ಚೆಂಬು ಕೊಟ್ಟಿದ್ದಾರೆ. ಮರಾಠಿಗರಿಗೆ ಅಕ್ಷಯ ಪಾತ್ರೆ ನೀಡಿದ್ದಾರೆ. ನಿಗಮ ರಚನೆ ಮಾಡಿ ಕನ್ನಗಡಿಗರು, ರಾಜ್ಯದಲ್ಲಿರುವ ಮರಾಠಿಗರ ಸಮುದಾಯದ ನಡುವೆ ಒಡಕು ಮೂಡಿಸುತ್ತಿದ್ದಾರೆ ಎಂದು ಹರಿಹಾಯ್ದರು.

    ಮುಖಂಡರಾದ ಚೇತನ ದೊಡ್ಡಮನಿ, ಪವನ ಕಾಂಬಳೆ, ಶಂಕರ ಮುತ್ತಲಗೇರಿ, ಪರಶುರಾಮ ಬಳ್ಳಾಪುರ, ಸಿದ್ದರಾಮೇಶ್ವರ ಹಾಸನ, ಸಂತೋಷ ಬಿ., ಮಂಜುನಾಥ ಸವದಿ ಪ್ರತಿಭಟನೆಯಲ್ಲಿ ಇದ್ದರು.

    ಶಾಸಕ ಯತ್ನಾಳರನ್ನು ಅಮಾನತುಗೊಳಿಸಿ
    ಕನ್ನಡ ಹೋರಾಟಗಾರರಿಗೆ ಅಪಮಾನ ಮಾಡಿದ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಶಾಸಕ ಸ್ಥಾನದಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಬಾಗಲಕೋಟೆ ಜಿಲ್ಲಾಡಳಿತ ಭವನ ಎದುರು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ) ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

    ಬೆಳಗಾವಿಯಲ್ಲಿ ಎಂ.ಇ.ಎಸ್. ಮುಖಂಡರು ಕನ್ನಡಕ್ಕೆ ಅಪಮಾನ ಮಾಡಿದಾಗ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸಲು ಮಹಾನಗರ ಪಾಲಿಕೆಯಲ್ಲಿ ಠರಾವು ಮಾಡಿದಾಗ ಬಸನಗೌಡ ಪಾಟೀಲ ತುಟಿ ಬಿಚ್ಚಲಿಲ್ಲ. ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ವಿರೋಧಪಡಿಸಿದಾಗ ಜಾಣಮೌನ ವಹಿಸಿದ್ದರು. ಈಗ ಕನ್ನಡ ಪರ ಹೋರಾಟಗಾರಿಗೆ ಅಪಮಾನ ಮಾಡುತ್ತಿದ್ದಾರೆ. ಕೂಡಲೇ ಅವರನ್ನು ಭಾರತೀಯ ಜನತಾ ಪಕ್ಷದಿಂದ ಹಾಗೂ ಶಾಸಕ ಸ್ಥಾನದಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

    ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಧರ್ಮಂತಿ, ಸಂಗಮೇಶ ಅಂಬಿಗೇರ, ಪ್ರವೀಣ ಪಾಟೀಲ, ರವಿ ಶಿಂಧೆ, ಬಸವರಾಜ ಅಂಬಿಗೇರ ಇತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts