More

    ಕೋಟೆನಾಡಿನಲ್ಲಿ ಲಯ ಕರ್ತನ ಆರಾಧನೆ !

    ಬಾಗಲಕೋಟೆ: ಜಿಲ್ಲಾ ಕೇಂದ್ರ ಬಾಗಲಕೋಟೆ ನಗರದಲ್ಲಿ ಗುರುವಾರ ಎಲ್ಲೆಲ್ಲೂ ಮಹಾಶಿವರಾತ್ರಿಯ ಸಂಭ್ರಮ ಮನೆ ಮಾಡಿತ್ತು. ಬೆಳಗ್ಗೆಯಿಂದಲೇ ಜನರು ದೇವಸ್ಥಾನಗಳ ಕಡೆಗೆ ಹೆಜ್ಜೆ ಹಾಕಿದರು. ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಶಿವ ದೇವಸ್ಥಾನಕ್ಕೆ ಭೇಟಿ ನೀಡಿ ಶಿವ ದರ್ಶನ ಮಾಡಿದರು. ಜಿಲ್ಲಾದ್ಯಂತ ಶಿವನ ದೇಗುಲದಲ್ಲಿ ಶಿವನಾಮ ಜಪ ಮಾಡಲಾಯಿತು.

    ನಗರದ ಕೌಲಪೇಟ ಓಣಿಯಲ್ಲಿರುವ ವಿಷ್ಣು ಆನಂದೇಶ್ವರ ದೇವಸ್ಥಾನ, ಕಿಲ್ಲಾದಲ್ಲಿರುವ ಕೇದಾರನಾಥ ಮಂದಿರದಲ್ಲಿ, ಕಲಾದಗಿ ರಸ್ತೆಯಲ್ಲಿರುವ ಸತ್ಯ ಶಿವಂ ಸುಂದರಂ ಗುಡಿಯಲ್ಲಿ, ಕುಮಾರೇಶ್ವರ ಆಸ್ಪತ್ರೆಯ ಆವರಣದ ಶಿವ ಮಂದಿರ, ನವನಗರದ ಸೆಕ್ಟರ್ ನಂ. 25 ರಲ್ಲಿರುವ ಸೌರಾಷ್ಟ್ರ ಸೋಮೇಶ್ವರ ದೇವಸ್ಥಾನ, ಎಂ.ಜಿ. ರಸ್ತೆಯಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶೇಷ ಪೂಜೆ ಜರುಗಿದವು.

    ಸಹಸ್ರಾರು ಜನ ದರ್ಶನ ಪಡೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಅನೇಕ ಭಕ್ತರು ಉಪವಾಸ ವ್ರತಾಚರಣೆ ಮಾಡಿದರು. ಕೋವಿಡ್‌ನಿಂದ ಸಂಪೂರ್ಣ ಮುಕ್ತಿ ನೀಡಲ್ಲ. ನಾಡಿಗೆ ಉತ್ತಮ ಮಳೆ, ಬೆಳೆ ಚೆನ್ನಾಗಿ ಬರಲಿ ಎಂದು ದೇವರನ್ನು ಪ್ರಾರ್ಥಿಸಿದರು. ಚಿಕ್ಕಮಕ್ಕಳು, ವೃದ್ಧರು ಮನೆಯಲ್ಲಿಯೇ ಶಿವ ನಾಮ ಜಪಿಸಿದರು.

    ಉರಿ ಬಿಸಿನಲ್ಲಿಯೂ ದರ್ಶನ
    ಮಹಾಶಿವರಾತ್ರಿ ಹಬ್ಬದ ಆಚರಣೆಗೆ ಬಿಸಿಲಿನ ಪ್ರಖರತೆ ಸ್ವಲ್ಪ ಅಡ್ಡಿಯಾದಂತೆ ಕಂಡರೂ ಸಾರ್ವಜನಿಕರು ಬಿಸಿಲಿನ ತಾಪಕ್ಕೂ ಜಗ್ಗದೆ ದೇವಸ್ಥಾನಗಳಿಗೆ ಭೇಟಿ ನೀಡಿದರು. 30 ರಿಂದ 31 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಲು ಇದ್ದರೂ ಜನರು ದೇವಸ್ಥಾನಗಳಲ್ಲಿ ಸರದಿಯಲ್ಲಿ ನಿಂತು ದೇವರ ಮೂರ್ತಿಗೆ ಪೂಜೆ ಸಲ್ಲಿಸಿದರು. ವಿವಿಧ ದೇವಸ್ಥಾನಗಳಲ್ಲಿ ನಸುಕಿನ ಶಿವ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

    ಶಿವರಾತ್ರಿ ಸಂಭ್ರಮ
    ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದ ಸಮೀಪದ ರಾಮತೀರ್ಥದಲ್ಲಿ ಶಿವರಾತ್ರಿ ಸಂಭ್ರಮ ಕಳೆಗಟ್ಟಿತ್ತು. 108 ಲಿಂಗಗಳಿಗೆ ಬಿಲ್ವಾರ್ಚನೆ, ಶಿವನಾಮ ಸ್ಮರಣೆ ಮಾಡಲಾಯಿತು. ನೀಲಗುಂದ, ಹಳಗೇರಿ, ಕೆರೂರು ಸೇರಿ 15ಕ್ಕೂ ಹೆಚ್ಚು ಗ್ರಾಮಗಳಿಂದ ಭಕ್ತರು ಬಂದು ಶಿವಲಿಂಗ ದರ್ಶನ ಪಡೆದರು. ದೊಡ್ಡ ಲಿಂಗು ಸೇರಿ 108 ಲಿಂಗಗಳಿಗೆ ಪೂಜೆ ಪುನಸ್ಕಾರ ನೆರವೇರಿಸಿದರು.

    ಶಿವಲಿಂಗಕ್ಕೆ ವಿಶೇಷ ಪೂಜೆ
    ಬಾಗಲಕೋಟೆ ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಆವರಣದಲ್ಲಿರುವ ಶಿವಾಲಯದಲ್ಲಿ ಬಿವಿವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ.ಸಜ್ಜನ (ಬೇವೂರ) ನೇತೃತ್ವದಲ್ಲಿ ಶಿವಲಿಂಗಕ್ಕೆ ವಿಶೇಷ ಪೂಜೆ ಮತ್ತು ರುದ್ರಾಭಿಷೇಕ ಜರುಗಿತು. ತೋಟಗಾರಿಕೆ ವಿಶ್ವವಿದ್ಯಾಲಯದ ಉಪ ಕುಲಪತಿ ಕೆ.ಎಂ.ಇಂದರೇಶ, ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಎಸ್.ಐ.ಅಥಣಿ, ಡಾ.ಅಶೋಕ ಮಲ್ಲಾಪುರ ಉಪಸ್ಥಿತರಿದ್ದರು.



    ಕೋಟೆನಾಡಿನಲ್ಲಿ ಲಯ ಕರ್ತನ ಆರಾಧನೆ !



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts