More

    ಕೋಟೆನಾಡಲ್ಲಿ ರಿಂಗಣಿಸಿದ ಶಿವ ನಾಮಸ್ಮರಣೆ

    ಬಾಗಲಕೋಟೆ: ಲಯಕರ್ತನಾದ ಶಿವನ ಆರಾಧನೆಯ ಮಹಾಶಿವರಾತ್ರಿ ಹಬ್ಬವನ್ನು ಜಿಲ್ಲಾದ್ಯಂತ ಸಾರ್ವಜನಿಕರು ಭಕ್ತಿ, ನಿಷ್ಠೆಯಿಂದ ಆಚರಿಸಿದರು. ಶುಕ್ರವಾರ ಕೋಟೆನಾಡಲ್ಲಿ ಶಿವ ಭಕ್ತರ ಭಕ್ತಿ ಇಮ್ಮಡಿಗೊಂಡಿತ್ತು.

    ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾದ ಶಿವಯೋಗ ಮಂದಿರ, ಕೂಡಲಸಂಗಮ, ಚಿಕ್ಕಸಂಗಮ, ಬನಶಂಕರಿ, ಮಹಾಕೂಟ, ಮುಚಖಂಡಿ ವೀರಭದ್ರೇಶ್ವರ ಸೇರಿದಂತೆ ವಿವಿಧ ಶಿವ ಕ್ಷೇತ್ರ ಮತ್ತು ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ರುದ್ರಾಭಿಷೇಕ, ಶಿವಭಜನೆ, ರುದ್ರ ಪುರಾಣ ಮತ್ತು ವಿವಿಧ ಧಾರ್ಮಿಕ ಕೈಂಕರ್ಯಗಳು ಸಂಭ್ರಮ ಸಡಗರದಿಂದ ಜರುಗಿದವು.

    ಗಂಧ, ಕುಂಕುಮ, ಭಸ್ಮ, ವಿಭೂತಿ ಸಮರ್ಪಿಸಿ ಆರಾಧಿಸಲಾಯಿತು. ವಿವಿಧೆಡೆ ಸಂಗೀತ ಕಾರ್ಯಕ್ರಮ, ನೂರಾರು ಜನ ಒಂದೆಡೆ ಸೇರಿ ಶಿವ ನಾಮಸ್ಮರಣೆ ಮಾಡಿದರು. ಶಿವನಿಗೆ ಇಷ್ಟವಾಗಿರುವ ಹಣ್ಣು-ಹಂಪಲು, ಬಿಲ್ವಪತ್ರೆ ನೈವೇದ್ಯ ಮಾಡಲಾಯಿತು. ಬೆಳಗಿನ ಜಾವದಿಂದಲೇ ಮನೆ, ಮಠ, ಮಂದಿರ ಮತ್ತು ಶಿವನ ದೇವಾಲಯಗಳಲ್ಲಿ ಶಿವನಿಗೆ ಪೂಜಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

    ಶಿವನಿಗೆ ಇಷ್ಟವಾಗಿರುವ ಬಿಲ್ವಾರ್ಚನೆ, ಕ್ಷೀರಾಭಿಷೇಕ, ಗಂಗಾಜಲ ಅರ್ಪಿಸಲಾಯಿತು. ಬಗೆ ಬಗೆಯ ಹೂ ಗಳಿಂದ ಅಲಂಕರಿಸಿ ಶೃಂಗರಿಸಲಾಯಿತು. ‘ಶಿವ ಶಂಭೋ ಶಂಕರ.. ಹರ ಹರ ಮಹಾದೇವ..’ ಶಿವ ಶಿವ.. ಹರ ಹರ .. ಮಹಾ ಶಂಕರ’ ಎನ್ನುವ ಘೋಷಣೆಗಳು ಪ್ರತಿಧ್ವನಿಸಿದವು.

    ಇನ್ನು ಜಿಲ್ಲಾ ಕೇಂದ್ರವಾಗಿರುವ ಬಾಗಲಕೋಟೆ ನಗರದಲ್ಲೂ ಎಲ್ಲೆಲ್ಲೂ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿತ್ತು. ಬೆಳಗ್ಗೆಯಿಂದಲೇ ಜನರು ದೇವಸ್ಥಾನಗಳ ಕಡೆಗೆ ಹೆಜ್ಜೆ ಹಾಕಿದರು. ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಶಿವ ದೇವಸ್ಥಾನಕ್ಕೆ ಭೇಟಿ ನೀಡಿ ಶಿವ ದರ್ಶನ ಮಾಡಿದರು.
    ನಗರದ ಕೌಲಪೇಟ ಓಣಿಯಲ್ಲಿರುವ ವಿಷ್ಣು ಆನಂದೇಶ್ವರ ದೇವಸ್ಥಾನ, ಕಿಲ್ಲಾದಲ್ಲಿರುವ ಕೇದಾರನಾಥ ಮಂದಿರದಲ್ಲಿ, ಕಲಾದಗಿ ರಸ್ತೆಯಲ್ಲಿರುವ ಸತ್ಯ ಶಿವಂ ಸುಂದರಂ ಗುಡಿಯಲ್ಲಿ, ಕುಮಾರೇಶ್ವರ ಆಸ್ಪತ್ರೆಯ ಆವರಣದ ಶಿವ ಮಂದಿರ, ನವನಗರದ ಸೆಕ್ಟರ್ ನಂ 25 ರಲ್ಲಿರುವ ಸೌರಾಷ್ಟ್ರ ಸೋಮೇಶ್ವರ ದೇವಸ್ಥಾನ, ಎಂ ಜಿ ರಸ್ತೆಯಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶೇಷ ಪೂಜೆ ಜರುಗಿದವು.

    ಸಹಸ್ರಾರು ಜನ ದರ್ಶನ ಪಡೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಅನೇಕ ಭಕ್ತರು ಉಪವಾಸ ವೃತಾಚರಣೆ ಮಾಡಿದರು. ಮಳೆ, ಬೆಳೆ ಚೆನ್ನಾಗಿ ಬರಲಿ, ಬರದ ಛಾಯೆ ದೂರವಾಗಲಿ ಎಂದು ದೇವರನ್ನು ಪ್ರಾರ್ಥಿಸಿದರು. ವೃದ್ಧರು ಮನೆಯಲ್ಲಿಯೇ ಶಿವ ನಾಮ ಜಪಿಸಿದರು.

    ಬಿಸಿಲಲ್ಲೂ ದರ್ಶನ
    ಮಹಾಶಿವರಾತ್ರಿ ಹಬ್ಬದ ಆಚರಣೆಗೆ ಬಿಸಿಲಿನ ಪ್ರಕರತೆ ಸ್ವಲ್ಪ ಅಡ್ಡಿಯಾದಂತೆ ಕಂಡರೂ ಸಾರ್ವಜನಿಕರು ಬಿಸಿಲಿನ ತಾಪಕ್ಕೂ ಜಗ್ಗದೆ ದೇವಸ್ಥಾನಗಳಿಗೆ ಭೇಟಿ ನೀಡಿದರು. ಅಂದಾಜು 31 ರಿಂದ 32 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಲು ಇದ್ದರೂ ಜನರು ದೇವಸ್ಥಾನಗಳಲ್ಲಿ ಸರದಿಯಲ್ಲಿ ನಿಂತುಕೊಂಡು ದೇವರ ಮೂರ್ತಿಗೆ ಪೂಜೆ ಸಲ್ಲಿಸಿದರು. ವಿವಿಧ ದೇವಸ್ಥಾನಗಳಲ್ಲಿ ನಸುಕಿನ ಶಿವ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts