More

    ಕೋಟೆನಾಡಿನಲ್ಲಿ ಬಸ್ ಸಂಚಾರ ಸ್ತಬ್ಧ !

    ಬಾಗಲಕೋಟೆ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ ಕೆಎಸ್‌ಆರ್‌ಟಿಸಿ ನೌಕರರು ನಡೆಸುತ್ತಿರುವ ಮುಷ್ಕರ ಶನಿವಾರ ಎರಡನೇ ದಿನವು ಮುಂದುವರೆದ ಪರಿಣಾಮ ಕೋಟೆನಾಡಿನ ಜನ ಜೀವನದ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಪ್ರಯಾಣಿಕರು ಸಂಪೂರ್ಣ ಹೈರಾಣ್ ಆಗಿದ್ದಾರೆ.

    ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆಯಿಂದ ಸರ್ಕಾರಿ ಬಸ್‌ಗಳ ಸಾರಿಗೆ ಸಂಚಾರ ವ್ಯವಸ್ಥೆ ಹಳ್ಳಿ ತಪ್ಪಿದ್ದು ಶನಿವಾರ ರಾತ್ರಿ ವರೆಗೂ ಮುಂದುವರೆದಿತ್ತು. ಇದರಿಂದ ಜನ ಸಾಮಾನ್ಯರ ಪರದಾಟ ಮುಗಿಲು ಮುಟ್ಟಿದೆ. ಬಾಗಲಕೋಟೆ ನಗರದ ಕೇಂದ್ರ ಬಸ್ ನಿಲ್ದಾಣ ಹಾಗೂ ಇಳಕಲ್ಲ, ಹುನಗುಂದ, ಬಾದಾಮಿ, ಜಮಖಂಡಿ, ಮುಧೋಳ, ಮಹಾಲಿಂಗಪುರ, ರಬಕವಿ- ಬನಹಟ್ಟಿ ಸೇರಿದಂತೆ ಹೊರ ರಾಜ್ಯ, ಜಿಲ್ಲೆಗಳಿಗೂ ಬಸ್‌ಗಳು ಸಂಚರಿಸದ ಪರಿಣಾಮ ಪ್ರಯಾಣಿಕರು ದಿಕ್ಕು ತೋಚದಂತಾಗಿದ್ದಾರೆ. ಇನ್ನು ಮುಷ್ಕರದಿಂದ ಜಿಲ್ಲೆಯಲ್ಲಿ ಅಹಿತಕರ ಘಟನೆ ನಡೆದಿಲ್ಲ. ಶಾಂತಿಯುತವಾಗಿ ನೌಕರರ ಹೋರಾಟ ನಡೆಸಿದರು.

    ಸಾರಿಗೆ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ತಮ್ಮ ಊರು ತಲುಪಲು ಸಾಧ್ಯವಾಗದ ಪರಿಣಾಮ ಅನೇಕ ಜನ ಅಂಗವಿಕಲರು, ಮಹಿಳೆಯರು, ವೃದ್ಧರು ಬಸ್ ನಿಲ್ದಾಣಗಳಲ್ಲಿಯೇ ರಾತ್ರಿಯಿಡೀ ಕಾಲ ಕಳೆದರು. ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಬಾದಾಮಿಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸಭೆಗೂ ಬಸ್‌ಗಳು ಇಲ್ಲದೆ ಕಾರ್ಯಕರ್ತರ ಕೊರತೆ ಉಂಟಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಪೇಚಿಗೆ ಸಿಲುಕುವಂತೆ ಮಾಡಿತು. ಆಸ್ಪತ್ರೆ, ಸಂಬಂಧಿಕರ ಭೇಟಿ, ಮದುವೆ, ಉಪನಯನ ನಾನಾ ಉದ್ದೇಶಗಳಿಗೆ ಜನರು ತಾವು ಅಂದುಕೊಂಡ ಸ್ಥಳ ತಲುಪಲು ಹರಸಾಹಸ ಪಡಬೇಕಾಯಿತು. ಖಾಸಗಿ ವಾಹನಗಳನ್ನು ಅವಲಂಬಿಸಿ ಪ್ರಯಾಣ ಆರಂಭಿಸಿದರು.

    ದೇವರ ದರ್ಶನಕ್ಕೂ ಸಮಸ್ಯೆ
    ಪ್ರತಿ ಶನಿವಾರ ಬಾಗಲಕೋಟೆ ತಾಲೂಕಿನ ಅಚನೂರ ಆಂಜನೇಯ, ತುಳಸಿಗೇರಿ ಆಂಜನೇಯ ದೇವಸ್ಥಾನಕ್ಕೆ ಭಕ್ತರ ದಂಡೆ ಹರಿದು ಬರುತ್ತದೆ. ಆದರೇ ಬಸ್ ಸಂಚಾರ ಇಲ್ಲದ ಪರಿಣಾಮ ದೇವಸ್ಥಾನಗಳಿಗೆ ತೆರಳಲು ಭಕ್ತರು ಹಿಂದೇಟು ಹಾಕಿದರು. ಇದರಿಂದ ಈ ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಮುಖವಾಗಿತ್ತು.
    ರೈಲಿನಲ್ಲಿ ಬಂದರು ವಾಪಸ್ಸ್ ಹೋದರು.

    ವಿಜಯಪುರ, ಗದಗ, ಸೋಲಾಪುರದಿಂದ ಅನೇಕ ಜನರು ರೈಲು ಮೂಲಕ ಬಾಗಲಕೋಟೆ ರೈಲು ನಿಲ್ದಾಣಕ್ಕೆ ಆಗಮಿಸಿದರು. ಗಂಟೆ ಗಟ್ಟಲೆ ಕಾದರು ಬಸ್‌ಗಳು ಇಲ್ಲದ ಪರಿಣಾಮ ಮತ್ತೆ ಬೇರೊಂದು ರೈಲು ಮೂಲಕ ವಾಪಸ್ಸ ತಮ್ಮ ಊರಿಗೆ ಹೋದ ಘಟನೆ ನಡೆಯಿತು. ಜಮಖಂಡಿ, ಮುಧೋಳ, ಬೀಳಗಿ ಸೇರಿದಂತೆ ವಿವಿಧ ಭಾಗಗಳಿಗೆ ತಲುಬೇಕಾದವರು ಖಾಸಗಿ ವಾಹನಗಳನ್ನು ಅವಲಂಬಿಸಿ ಪ್ರಯಾಣ ಬೆಳೆಸಿದರು. ಆದರೇ ಗ್ರಾಮೀಣ ಪ್ರದೇಶಕ್ಕೆ ತೆರಳಲು ನೂರಾರು ಜನರು ಪರದಾಡಿದರು.

    ರಾತ್ರಿ ನಿಲ್ದಾಣದಲ್ಲಿ ಉಳಿದ ಅಂಗವಿಕಲ
    ಬಾಗಲಕೋಟೆ ತಾಲೂಕಿನ ಶಿರೂರ ಗ್ರಾಮದ ರಾಘವೇಂದ್ರ ಚಲವಾದಿ ಎನ್ನುವ ಅಂಗವಿಕಲ ಆರೋಗ್ಯ ತಪಾಸಣೆಗೆ ಶುಕ್ರವಾರ ಬೆಳಗ್ಗೆ ಬಾಗಲಕೋಟೆ ನಗರಕ್ಕೆ ಆಗಮಿಸಿದ್ದರು. ವೈದ್ಯರ ಭೇಟಿ ಬಳಿಕ ತಮ್ಮೂರಿಗೆ ತೆರಳಲು ಸಂಜೆ ವೇಳೆ ಬಾಗಲಕೋಟೆ ನಗರದ ಬಸ್ ನಿಲ್ದಾಣಕ್ಕೆ ಆಗಮಿಸಿದರು. ಬಸ್‌ಗಳು ಇಲ್ಲದ ಪರಿಣಾಮ ಸ್ವ ಗ್ರಾಮ ಶಿರೂರ ತಲುಪಲು ಸಾಧ್ಯವಾಗದೇ ರಾತ್ರಿ ಚಳಿಯಲ್ಲಿಯೂ ನಿಲ್ದಾಣದಲ್ಲಿ ಕಾಲ ಕಳೆದ ಘಟನೆ ನಡೆಯಿತು.

    ಇನ್ನು ಈ ಕುರಿತು ಸುದ್ದಿಗಾರರೊಂದಿಗೆ ರಾಘವೇಂದ್ರ ಚಲವಾದಿ ಮಾತನಾಡಿ, ಸಾರಿಗೆ ನೌಕರರ ಬೇಡಿಕೆ ಸರ್ಕಾರ ಈಡೇರಿಸಬೇಕು, ಮುಷ್ಕರ ಕೈಬಿಟ್ಟು ನೌಕರರು ಸೇವೆ ಹಾಜರಾಗಬೇಕು. ಇಲ್ಲವಾದಲ್ಲಿ ಜನ ಸಾಮಾನ್ಯರ ಪರದಾಡಬೇಕಾಗುತ್ತದೆ. ನನ್ನಂತೆ ಅನೇಕ ಜನರು ಖಾಸಗಿ ವಾಹನಗಳಿಗೆ ಹೋಗಲು ಹಣವಿರುವದಿಲ್ಲ. ಆದ್ದರಿಂದ ಸರ್ಕಾರ ಬೇಗನೆ ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂದು ಮನವಿ ಮಾಡಿದರು.

    ಸರ್ಕಾರದ ವಿರುದ್ಧ ಪ್ರತಿಭಟನೆ
    ಇನ್ನು ಜಿಲ್ಲೆಯ ವಿವಿಧ ಬಸ್‌ನಿಲ್ದಾಣಗಳಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬೇಡಿಕೆ ಈಡೇರದಿದ್ದರೇ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಲ್ಲದೆ ಬಸ್‌ನಿಲ್ದಾಣಗಳಲ್ಲಿ ಬಸ್‌ಗಳು ಸಾಲು ಸಾಲಾಗಿ ನಿಂತಿರುವ ದೃಶ್ಯ ಕಂಡು ಬಂದಿತು. ಚಾಲಕರು, ನಿರ್ವಾಹಕರು ನಿಲ್ದಾಣದಲ್ಲಿಯೇ ನಿದ್ದೆ ಜಾರಿದರು. ಬಸ್ ಸಂಚಾರ ಹಾಗೂ ಜನದಟ್ಟನೆ ಕಂಡು ಬರುತ್ತಿದ್ದ ನಿಲ್ದಾಣಗಳು ಬೀಕೋ ಎನ್ನುತ್ತಿದ್ದವು. ಬಸ್ ಬಂದ್ ಪರಿಣಾಮ ವ್ಯಾಪಾರ, ವಹಿವಾಟಿನ ಮೇಲೆ ಭಾರಿ ಹೊಡೆತ ಬಿದ್ದಿದೆ. ಬಸ್‌ಗಳು ಇಲ್ಲದ ಪರಿಣಾಮ ಅನೇಕ ಜನರು ಕಾರು, ಟ್ರಾಕ್ಸಿ, ಅಟೋ, ಟಂಟಂ, ಕ್ರೂಸರ್‌ಗಳಿಗೆ ಮೊರೆ ಹೋದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts