More

    ಕೋಟೆನಾಡಿನಲ್ಲಿ ಭಾರಿ ಮಳೆ

    ಬಾಗಲಕೋಟೆ: ಜೀವನಾಡಿಗಳಾದ ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳು ಕಳೆದ ತಿಂಗಳು ಸೃಷ್ಟಿ ಮಾಡಿದ್ದ ಪ್ರವಾಹದಿಂದ ಚೇತರಿಸಿಕೊಳ್ಳುವ ಮೊದಲೇ ಮಳೆ ಅವಾಂತರ ಸೃಷ್ಟಿ ಮಾಡಿದ್ದು, ಜಿಲ್ಲೆಯ ಜನತೆ ನೆಮ್ಮದಿಯನ್ನೇ ಕಸಿದುಕೊಂಡಿದೆ.

    ಶುಕ್ರವಾರ ಸಂಜೆಯಿಂದಲೇ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಹೊಲದಲ್ಲಿನ ಒಡ್ಡುಗಳು ಕೊಚ್ಚಿಕೊಂಡು ಹೋಗಿವೆ. ಅಲ್ಲಲ್ಲಿ ಮೇಲ್ಮುದ್ದೆ ಮನೆಗಳ ಗೋಡೆಗಳು ಬಿದ್ದಿವೆ.

    ಕೆಲವು ಕಡೆ ಮನೆಗಳಿಗೆ ನೀರು ನುಗ್ಗಿದೆ. ರಸ್ತೆ ಮೇಲೆ ಪ್ರವಾಹದಂತೆ ನೀರು ರಭಸವಾಗಿ ಹರಿಯಿತು. ಹುನಗುಂದ ತಾಲೂಕಿನ ಬೇಕಮಲದಿನ್ನಿ ಗ್ರಾಮದ ಬಳಿ ರಸ್ತೆ ಜಲಾವೃತವಾಗಿ ಕರಡಿ ಗ್ರಾಮ ಸೇರಿ ಹತ್ತು ಹಳ್ಳಿಗಳಿಗೆ ಸಂಪರ್ಕ ಕಡಿತವಾಗಿದೆ. ಹುನಗುಂದದ ಅಮರಾವತಿ ಅಂಡರಪಾಸ್ ಸೇತುವೆ ಕೆಳಗೆ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಜಾನುವಾರು ಸಾಗಣೆ ವಾಹನ ನೀರಿನಲ್ಲೇ ಸಿಲುಕಿದೆ.

    ಲೋಕಾಪುರ ಸಮೀಪದ ಕಾಡರಕೊಪ್ಪ ಬಳಿಯ ಹಳ್ಳ ಉಕ್ಕಿ ಹರಿಯುತ್ತಿದ್ದು, ಕೆರೂರ ಪಟ್ಟಣಕ್ಕೆ ಸಂಪರ್ಕ ಕಡಿತವಾಗಿದೆ. ಬಾದಾಮಿಯ ಐತಿಹಾಸಿಕ ಅಗಸ್ತ್ಯ ತೀರ್ಥ ಸಂಪೂರ್ಣ ಭರ್ತಿಯಾಗಿದ್ದು, ಕೋಡಿ ಹರಿದು ಹಳೇ ಬಾದಾಮಿ ಬಡಾವಣೆ ರಸ್ತೆ ಮೇಲೆ ನೀರು ರಭಸದಿಂದ ಹರಿಯುತ್ತಿದೆ. ರಬಕವಿ ಗುಡ್ಡದ ಪ್ರದೇಶದಿಂದ ನಗರದೊಳಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿತು. ಯಲ್ಲಟ್ಟಿ ಗ್ರಾಮದ ಜಮಖಂಡಿ ರಸ್ತೆ ಮೇಲೆ ಮರ ಬಿದ್ದ ಕಾರಣ ಕೆಲ ಸಮಯ ರಸ್ತೆ ಸಂಚಾರ ಬಂದ್ ಆಗಿತ್ತು.

    ಯುವಕ ಸಾವು
    ಮುಧೋಳ ಸಮೀಪದ ಒಂಟಗೋಡಿ ಗ್ರಾಮದ ಹತ್ತಿರದ ಹಳ್ಳದಲ್ಲಿ ಡಿಸಿಸಿ ಬ್ಯಾಂಕ್‌ನ ನೌಕರ ಸಂತೋಷ ಸುಭಾಷ ಅಡವಿ (27) ಕೊಚ್ಚಿಕೊಂಡು ಹೋಗಿದ್ದಾನೆ. ಯುವಕನ ರಕ್ಷಣೆಗೆ ಯುವಕರಿಬ್ಬರು ಪ್ರಯತ್ನಿಸಿದರೂ ನೀರಿನ ರಭಸದಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts