More

    ಮಲಪ್ರಭಾ ಒತ್ತುವರಿ ತೆರವುಗೊಳಿಸಿ

    ಬಾಗಲಕೋಟೆ: ಕಳಸಾ ಬಂಡೂರಿ ನಾಲಾ ಜೋಡಣೆ ಮಾಡುವ ಮುನ್ನವೇ ಮಲಪ್ರಭಾ ನದಿ ಒತ್ತುವರಿ ತೆರವುಗೊಳಿಸಬೇಕು. ನಿರ್ಲಕ್ಷೃ ಧೋರಣೆ ಅನುಸರಿಸಿದಲ್ಲಿ 2019 ರಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿ ಮತ್ತೆ ಎದುರಾಗಲಿದೆ. ಇದರಿಂದ ಭಾರಿ ಪ್ರಮಾಣದಲ್ಲಿ ಕಷ್ಟ-ನಷ್ಟ ಉಂಟಾಗಲಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಈ ಭಾಗದ ಜನ ಪ್ರತಿನಧಿಗಳು, ಅಧಿಕಾರಿಗಳು ಒಳಗೊಂಡ ಉನ್ನತ ಮಟ್ಟದ ಸಭೆ ನಡೆಸಿ ಗಟ್ಟಿ ನಿರ್ಧಾರ ಪ್ರಕಟಿಸಬೇಕು ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆಗ್ರಹಿಸಿದರು.

    ಮುಂಬಯಿ ಕರ್ನಾಟಕ ಭಾಗದ ಬೆಳಗಾವಿ, ಗದಗ, ಬಾಗಲಕೋಟೆ, ಧಾರವಾಡ ಜಿಲ್ಲೆಗಳ ಜೀವ ನದಿಯಾಗಿದೆ. ಪ್ರಭಾವಿಗಳ ಅತೀ ಕ್ರಮಣ ಮಾಡಿದ್ದರಿಂದ ಸಾಮಾನ್ಯ ಜನರು ಒತ್ತುವರಿ ಮಾಡಿದ್ದಾರೆ. ಅಕ್ರಮ ಮರಳುಗಾರಿಕೆ ಲಾಭಿ ಜೋರಾಗಿದೆ. ಇದರಿಂದ ನದಿ ಅಗಲದಲ್ಲಿ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ. ಪ್ರಕೃತಿ ಮಾತೇ ಆಗಗ್ಗೇ ಮುನಿಸಿಕೊಂಡಿದ್ದಾಳೆ. ಈಗ ಎಚ್ಚೆತ್ತುಕೊಳ್ಳದಿದ್ದರೇ ಅಪಾರ ಕಟ್ಟಿಟ್ಟ ಬುತ್ತಿ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

    ಅತಿಕ್ರಮಣವನ್ನು ತೆರವುಗೊಳಿಸುವ ಬಗ್ಗೆ ಡಿಸಿಎಂ ಗೋವಿಂದ ಕಾರಜೋಳ ಪತ್ರ ಬರೆಯುವ ಮೂಲಕ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸ್ವಾಗತಾರ್ಹ. ಇದು ಇಷ್ಟಕ್ಕೆ ನಿಲ್ಲಬಾರದು. ನೀರಾವರಿ ಇಲಾಖೆ ಮಾತ್ರ ಮಲಪ್ರಭಾ ನದಿ ಒಳಪಡುವದಿಲ್ಲ. ಕಂದಾಯ, ಸರ್ವೇ ಇಲಾಖೆ, ಲೋಕೋಪಯೋಗಿ ಜಂಟಿ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವುಗೊಳಿಸಬೇಕು. ಇದಕ್ಕೆ ಅಧಿಕಾರಿಗಳು, ಸಿಬ್ಬಂದಿಗಳಿಗೆ ಮುಕ್ತವಾದ ಅವಕಾಶ ನೀಡಬೇಕು. ಅಂದಾಗ ಮಾತ್ರ ಮಲಪ್ರಭಾ ನದಿ ತನ್ನ ಗತ ವೈಭವ ಮರಕಳಿಸುತ್ತದೆ. ಇಲ್ಲವಾದಲ್ಲಿ ಜೀರ್ಣೋದ್ಧಾರದ ಮಾತುಗಳು ಕೇವಲ ಭರವಸೆಯಾಗಿಯೇ ಉಳಿಯುತ್ತದೆ ಎಂದರು.

    ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಬಳಿ ನಿರ್ಮಿಸಲಾದ ನವಿಲುತೀರ್ಥ ಆಣೆಕಟ್ಟಿನಿಂದ ಕೂಡಲಸಂಗಮದವರೆಗೆ 180 ಕಿ.ಮೀ. ಹಾಗೂ ನವಿಲುತೀರ್ಥದಿಂದ ಮೇಲ್ಗಡೆಗೆ ಖಾನಾಪೂರ ತಾಲೂಕಿನ ಕಣಕುಂಬಿ ಗ್ರಾಮದವರೆಗೆ 185 ಕಿ.ಮೀ. ಉದ್ದವಿದೆ. 1980 ದಶಕದ ಬಳಿಕ ನದಿಯ ಎರಡು ಬದಿಯಲ್ಲಿ ಅತಿಕ್ರಮಣ ಆರಂಭವಾಯಿತು. ಪ್ರಭಾವಿ ಜಮೀನ್ದಾರರು ಸಾವಿರಾರು ಎಕರೇ ಗಳಷ್ಟು ಅತಿಕ್ರಮಣ ಮಾಡುವ ಮೂಲಕ ಕೃಷಿ ಭೂಮಿಯಾಗಿ ಪರಿವರ್ತಿಸಿದರು. ಇದಕ್ಕೆ ರಾಜಕೀಯ ಆಶ್ರಯ ಲಭಿಸಿತು. ಇನ್ನು ನದಿಯಲ್ಲಿ ಆಪು ಎನ್ನುವ ವಿಷಕಾರಿ ಬೆಳೆ ವ್ಯಾಪಾಕ ಪ್ರಮಾಣದಲ್ಲಿ ಬೆಳೆದು ನಿಂತಿತ್ತು. ಇದನ್ನು ತೆರವುಗೊಳಿಸಲು ರಾಮದುರ್ಗ ನಾಗರಿಕ ವೇದಿಕೆಯ ಅಧ್ಯಕ್ಷೃ ಮಾರುತಿ ಚಂದರಗಿ ನೇತೃತ್ವದಲ್ಲಿ ಹೋರಾಟ ಆರಂಭಿಸಲಾಯಿತು. ನಂತರ 15 ವರ್ಷಗಳ ಹಿಂದೆ ರಾಮದುರ್ಗ ಡಾ.ಪೂರ್ಣಿಮಾ ಗೌರೋಜಿ ಮಲಪ್ರಭೆ ಒತ್ತುವರಿ, ಶುದ್ಧೀಕರಣ ಬಗ್ಗೆ ಕಾನೂನು ಹೋರಾಟ ನಡೆಸಿದರು. ನ್ಯಾಯಪೀಠ ನೀಡಿದ ಆದೇಶಗಳು ಇದುವರೆಗೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಹೋರಾಟಕ್ಕೂ ಸರ್ಕಾರದಿಂದ ಸ್ಪಂದನೆ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಮಲಪ್ರಭೆಯು ಪ್ರವಾಹ ಉಂಟು ಮಾಡದೇ ಸಾರಾಗವಾಗಿ ಹರಿಯಬೇಕು, ಅದಕ್ಕಾಗಿ ಮಹಾದಾಯಿ ನ್ಯಾಯ ಮಂಡಳಿಯ ಅಂತಿಮ ತೀರ್ಪು ಹೊರಬರುವದೊಳಗಾಗಿ ಮಲಪ್ರಭೆಯ ಅತಿಕ್ರಮಣವನ್ನು ತೆರವುಗೊಳಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ಮಲಪ್ರಭಾ ನದಿಯ ರಕ್ಷೃಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಮಾರುತಿ ಚಂದರಗಿ, ಶಂಕರ ಬಾಗೇವಾಡಿ, ಶ್ರೀನಿವಾಸ ಕುರುಡಗಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ನವೀಲುತೀರ್ಥ ಜಲಾಶಯ ನಿರ್ಮಾಣವಾಗಿ ಮೂರು ದಶಕ ಕಳೆದರು ಇದು ವರೆಗೂ ಭರ್ತಿಯಾಗಿದ್ದು ಕೇವಲ 5 ಸಾರಿ ಮಾತ್ರ. ಹುಬ್ಬಳ್ಳಿ-ಧಾರವಾಡದ ಜನರ ಕುಡಿಯುವ ನೀರಿಗಾಗಿ ವರ್ಷಕ್ಕೆ ಎರಡು ಟಿಎಂಸಿ ನೀರು ಇದೇ ಜಲಾಶಯದಿಂದ ನೀಡಲಾಗುತ್ತಿದೆ. ಇಂದು ಮಲಪ್ರಭಾ ನದಿಗಾಗಿ ಅಲ್ಲಿನ ಜನ ಧ್ವನಿ ಎತ್ತುತ್ತಿಲ್ಲ. ಬಾಗಲಕೋಟೆಯಲ್ಲಿ ಆಂದೋಲನ ರೂಪ ಪಡೆದುಕೊಂಡಿದೆ. ಸರ್ಕಾರ ನದಿ ಉಳಿಸಲು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು.
    ಮಾರುತಿ ಚಂದರಗಿ ,ರಾಮದುರ್ಗ ನಾಗರಿಕ ವೇದಿಕೆಯ ಅಧ್ಯಕ್ಷ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts