More

    ಮೀಸಲಾತಿಯಲ್ಲಿ ಕ್ರಿಮಿಲೇರ್ ಪದ್ಧತಿ ಜಾರಿಯಾಗಲಿ

    ಬಾಗಲಕೋಟೆ: ಮೀಸಲಾತಿ ಅಡಿಯಲ್ಲಿ ಲಾಭ ಪಡೆದವರೆ ಮತ್ತೆ ಮತ್ತೆ ಪಡೆಯುತ್ತಿದ್ದಾರೆ. ಅವರನ್ನು ಬಿಟ್ಟರೆ ಅವರ ಮಕ್ಕಳು, ಮೊಮ್ಮಕ್ಕಳು ಅದರ ಲಾಭ ಪಡೆಯುತ್ತಿದ್ದಾರೆ. ನಿಜಕ್ಕೂ ಇದು ದುರ್ದೈವದ ಸಂಗತಿ. ಹೀಗಾಗಿ ದೇಶದಲ್ಲಿ ಕ್ರಿಮಿಲೇರ್ ಪದ್ಧತಿ ಜಾರಿಯಾಗಬೇಕು. ಈ ನಿಟ್ಟಿನಲ್ಲಿ ಚಿಂತನೆ ನಡೆಯುವುದು ಒಳ್ಳೆಯದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದರು.

    ಗುರುವಾರ ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಮೀಸಲಾತಿ ವಿಚಾರವಾಗಿ ನಡೆದಿರುವ ಹೋರಾಟ ಹಾಗೂ ಇಂತಿಷ್ಟೇ ಅವಧಿಯಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಡೆಡ್‌ಲೈನ್ ನೀಡುತ್ತಿರುವ ಬಗ್ಗೆ ಸಚಿವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

    ಯಾರೂ ಸಹ ಒತ್ತಡದ ಮೂಲಕ ಮೀಸಲಾತಿ ಪಡೆಯಲು ಆಗಲ್ಲ. ಅರ್ಹತೆಗೆ ತಕ್ಕಂತೆ ಸಿಗಬೇಕು. ಮೀಸಲಾತಿ ಕೊಡಬೇಕು ಎಂದು ಎಲ್ಲ ಸಮುದಾಯಗಳ ಸ್ವಾಮೀಜಿಗಳು ಧರಣಿ, ಉಪವಾಸ ಕುಳಿತುಕೊಳ್ಳುತ್ತೇವೆ ಅಂತ ಶುರು ಮಾಡಿಕೊಳ್ಳುತ್ತಾರೆ ಎನ್ನುವ ಮೂಲಕ 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮಾಜದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾರ್ಚ್ 4ಕ್ಕೆ ನೀಡಿರುವ ಡೆಡ್‌ಲೈನ್‌ಗೆ ಈ ಉತ್ತರ ನೀಡಿದರು.

    ಸ್ವಾತಂತ್ರೃ ಬಂದಾಗಿನಿಂದ ಇವತ್ತಿನವರೆಗೂ ಮೀಸಲಾತಿ ಅಡಿಯಲ್ಲಿ ಅವರೇ ಎಂಪಿ, ಎಂಎಲ್ಎ, ಮಂತ್ರಿಯೂ ಆಗ್ತಿದ್ದಾರೆ. ಅವರನ್ನು ಬಿಟ್ಟರೆ ಅವರ ಮಕ್ಕಳು, ಮೊಮ್ಮಕ್ಕಳು ಎಂಪಿ, ಎಂಎಲ್ಎ, ಮಂತ್ರಿಗಳು ಆಗ್ತಿದ್ದಾರೆ. ಅಧಿಕಾರಿಗಳು ಮೀಸಲಾತಿ ಅನ್ವಯ ಎಲ್ಲ ಲಾಭ ಪಡೆದು, ಅವರ ಮಕ್ಕಳಿಗೂ ಮೀಸಲಾತಿಯನ್ನು ಪಡೆಯುತ್ತಿದ್ದಾರೆ ಎಂದು ಬೇಸರ ಹೊರಹಾಕಿದರು.

    ಹಿಂದುಳಿದವರಿಗೆ ನ್ಯಾಯಬದ್ಧ ಮೀಸಲಾತಿ ಸಿಗಬೇಕು
    ರಾಜ್ಯದಲ್ಲಿ ಕುರುಬರಿಗೆ ಎಸ್ಟಿ ಮೀಸಲಾತಿ ಹೋರಾಟ ವಿಚಾರವಾಗಿ, ಈಗ ಮೀಸಲಾತಿ ಹೋರಾಟ ಮುಗಿಯಿತಲ್ಲ. ಎಲ್ಲ ಸಮಾಜಗಳು ಮೀಸಲಾತಿಗಾಗಿ ಆಗಿರುವ ಜಾಗೃತಿಯನ್ನು ನಾನು ಸ್ವಾಗತ ಮಾಡುತ್ತೇನೆ. ಯಾವ ಸಮಾಜಕ್ಕೆ ಮೀಸಲಾತಿ ಸಿಗಬೇಕಿತ್ತೋ ಅದು ಆಗಿದ್ದರೆ ಚನ್ನಾಗಿರುತ್ತಿತ್ತು. ಆದರೆ, ಈ ವರೆಗೂ ಜನಸಾಮಾನ್ಯರು ಜಾಗೃತಿ ಆಗಿರಲಿಲ್ಲ. ಹಿಂದುಳಿದವರಿಗೆ ನ್ಯಾಯಬದ್ಧ ಮೀಸಲಾತಿ ಸಿಗಬೇಕು ಎನ್ನುವುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಅಪೇಕ್ಷೆ ಕೂಡ ಆಗಿತ್ತು ಎಂದರು.

    ಕುರುಬರನ್ನು ಎಸ್ಟಿಗೆ ಸೇರಿಸುವ ವಿಚಾರವಾಗಿ ಈಗಾಗಲೇ ಸಂಪುಟದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಮುಖಾಂತರ ವರದಿ ತರಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಹಾಗೆಯೇ ಹಿಂದುಳಿದ ಆಯೋಗದ ವರದಿ ಪಡೆದು ಉಳಿದ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

    ಸಿದ್ದರಾಮಯ್ಯ ಡಬಲ್ ಸ್ಟಾೃಂಡರ್ಡ್ ಯಾಕಾದ್ರು?
    ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತ್ಯೇಕ ಹಿಂದ್ ಸಮಾವೇಶಕ್ಕೆ ಸಜ್ಜಾಗುತ್ತಿದ್ದಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವ ಈಶ್ವರಪ್ಪ, ಸಿದ್ದರಾಮಯ್ಯ ಅವರು ಯಾಕೆ ಡಬಲ್ ಸ್ಟಾೃಂಡರ್ಡ್ ಆದರೂ ಎನ್ನುವುದು ಗೊತ್ತಿಲ್ಲ. ನಾನೆಂದು ಮೀಸಲಾತಿ ಪರವಾಗಿ ನಾನಾಗಿಯೇ ತೀರ್ಮಾನ ತೆಗೆದುಕೊಂಡಿಲ್ಲ.

    ಕುರುಬರನ್ನು ಎಸ್ಟಿ ಸೇರಿಸುವ ವಿಚಾರವಾಗಿ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರನಂದಪುರಿ ಸ್ವಾಮೀಜಿ ನಮ್ಮ ಮನೆಗೆ ಬಂದಿದ್ದರು. ನಮ್ಮ ಮನೆಯಲ್ಲೆ ಸಭೆ ಕರೆದಿದ್ದರು. ಎಲ್ಲ ಪಕ್ಷದವರು ಬಂದಿದ್ದರು. ಅದಕ್ಕೂ ಮೊದಲು ಸಿದ್ದರಾಮಯ್ಯ ಅವರ ಬಳಿಗೆ ಜಗದ್ಗುರುಗಳು ಹೋಗಿದ್ದರಂತೆ. ನಾನು ಹೋರಾಟದಲ್ಲಿ ಭಾಗಿಯಾಗಲ್ಲ. ಬೆಂಬಲ ಇದೆ ಎಂದಿದ್ದರಂತೆ. ಆದರೆ, ಅವರು ಬರಲಿಲ್ಲ. ಬದಲಿಗೆ ಮೀಸಲಾತಿ ಹೋರಾಟ, ಸಮಾವೇಶ ನಿರೀಕ್ಷೆ ಮೀರಿ ನಡೆಯಿತು. ಆಗ ಸಿದ್ದರಾಮಯ್ಯ ಅವರು ನನ್ನ ಕರದೆ ಇಲ್ಲ ಎಂದರು. ಅಲ್ಲದೆ, ಈ ಸಮಾವೇಶಕ್ಕೆ ಆರ್‌ಎಸ್‌ಎಸ್‌ನವರು ದುಡ್ಡು ಕೊಟ್ಟಿದ್ದಾರೆ ಎಂದು ವಿರೋಧ ಮಾಡಲು ಶುರು ಮಾಡಿದರು. ಅವರ ಈ ಟೀಕೆ ನಮಗೆಲ್ಲ ತುಂಬ ನೋವು ಮಾಡಿದೆ ಎಂದು ಹೇಳಿದರು.

    ಸಿದ್ದರಾಮಯ್ಯ ಅವರು ಪ್ರತ್ಯೇಕ ಹೋರಾಟ ಮಾಡಲಿ, ನಾನು ಬೇಡ ಎಂದು ಹೇಳಲ್ಲ. ಯಾರೋ ಒಬ್ಬರು ಹೋರಾಟ ಮಾಡಿದ ತಕ್ಷಣ ಮೀಸಲಾತಿ ಸಿಗಲ್ಲ. ಆದರೆ, ನಮ್ಮ ಸಮಾವೇಶಕ್ಕೆ ಆರ್‌ಎಸ್‌ಎಸ್‌ನಿಂದ ದುಡ್ಡು ಬಂದಿದೆ ಎಂದರಲ್ಲ. ಅದು ತುಂಬಾ ನೋವು ತಂದಿದೆ ಎಂದು ಸಿದ್ದು ವಿರುದ್ಧ ಬೇಸರ ಹೊರಹಾಕಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts