More

    ಎಸ್ಟಿ ಮೀಸಲಾತಿಗಾಗಿ ಕುರುಬರ ಶಕ್ತಿ ಪ್ರದರ್ಶನ

    ಬಾಗಲಕೋಟೆ: ರಾಜ್ಯದಲ್ಲಿ ವಿವಿಧ ಸಮುದಾಯಗಳಿಂದ ಅಭಿವೃದ್ಧಿ ನಿಗಮ ಹಾಗೂ ಮೀಸಲಾತಿ ಕೂಗು ದಟ್ಟವಾಗುತ್ತಿರುವ ಬೆನ್ನಲ್ಲೇ ಕುರುಬರಿಗೆ ಎಸ್ಟಿ ಮೀಸಲಾತಿ ಕಲ್ಪಿಸಬೇಕು ಎಂದು ಭಾನುವಾರ ಬಾಗಲಕೋಟೆಯಲ್ಲಿ ಬೆಳಗಾವಿ ವಿಭಾಗದ ಹಾಲುಮತ ಸಮಾಜದ ಶಕ್ತಿ ಪ್ರದರ್ಶನ ನಡೆಯಿತು.

    ಬಾಗಲಕೋಟೆ, ವಿಜಯಪುರ, ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳ ಕುರುಬ ಸಮಾಜಗಳನ್ನು ಒಳಗೊಂಡು ಈ ಬೃಹತ್ ಸಮಾವೇಶಕ್ಕೆ ಸಹಸ್ರ ಸಹಸ್ರ ಜನರು ಸಾಕ್ಷಿಯಾಗಿದ್ದರು.

    ಕಾಗಿನೆಲೆ ಪೀಠದ ಪೂಜ್ಯ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಕುರುಬ ಸಮಾಜದ ವಿವಿಧ ಮಠಾಧೀಶರು, ಸಚಿವ ಕೆ.ಎಸ್. ಈಶ್ವರಪ್ಪ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಮಾವೇಶದಲ್ಲಿ ಕುರುಬರನ್ನು ಎಸ್ಟಿಗೆ ಸೇರಿಸಬೇಕು ಎನ್ನುವ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಿದರು.

    ಕುರುಬ ಸಮಾಜವನ್ನು ಎಸ್ಟಿ ಸೇರಿಸಿ ಎನ್ನುವುದು ತಮ್ಮ ಬೇಡಿಕೆಯಲ್ಲ, ಅದು ಸಂವಿಧಾನಬದ್ಧ ನಮ್ಮ ಆಗ್ರಹ ಎಂದು ಸಹ ಸ್ವಾಮೀಜಿ ಆದಿಯಾಗಿ ಎಲ್ಲರೂ ಘೋಷಿಸಿದರು.

    ಇನ್ನು ಇದೇ ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ಹಾಕುವ ಹಿನ್ನೆಲೆಯಲ್ಲಿ ಇದೀಗ ಮೊದಲ ಹಂತದಲ್ಲಿ ಬಾಗಲಕೋಟೆ ಸಮಾವೇಶ ನಡೆಸಲಾಗಿದೆ. ಜನವರಿ 15 ಸಂಕ್ರಾಂತಿಯಂದು ಕಾಗಿನೆಲೆಯಿಂದ ಬೆಂಗಳೂರು ವರೆಗೆ ಪಾದಯಾತ್ರೆ ನಡೆಸಲಾಗುತ್ತಿದೆ. ಫೆಬ್ರುವರಿ 7 ರಂದು ರಾಜ್ಯ ರಾಜಧಾನಿಯಲ್ಲಿ ಅಂದಾಜು ಹತ್ತು ಲಕ್ಷ ಜನರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸುವ ಮೂಲಕ ತಮ್ಮ ಕೂಗನ್ನು ದೆಹಲಿಗೆ ಮುಟ್ಟಿಸುವ ಕೆಲಸ ಮಾಡಲಿದ್ದೇವೆ ಎನ್ನುವ ಸಂದೇಶವನ್ನು ಸಮಾವೇಶದಲ್ಲಿ ಹೊರಹಾಕಿದರು.

    ಮುಖ್ಯವಾಗಿ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಬೇಕು, ಕುರುಬ ಸಮಾಜದ ಅಭಿವೃದ್ಧಿ ನಿಗಮವನ್ನು ರಚಿಸಿ 500 ಕೋಟಿ ರೂ. ಅನುದಾನ ಕೊಡಬೇಕು. ಸಮಾಜದ ಮೂವರು ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವ ಒತ್ತಾಯವನ್ನು ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಾಡಿದ್ದೇವೆ ಎಂದು ಸಮಾವೇಶದಲ್ಲಿ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಸ್ವಾಮೀಜಿ ತಿಳಿಸಿದರು.
    ನಮ್ಮ ಈ ಹೋರಾಟ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧವಲ್ಲ. ಮೊದಲು ನಾವು ಪ್ರೀತಿಯಿಂದ ಕೇಳಬೇಕು. ಆ ಕೆಲಸವನ್ನು ಮಾಡುತ್ತಿದ್ದೇವೆ. ಈ ವಿಚಾರವಾಗಿ ನಾವು ಈಗಾಗಲೇ ಕೇಂದ್ರ ಸಚಿವೆ ರೇಣುಕಾ ಸಿಂಗ್, ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಅವರಿಗೆ ತಿಳಿಸಿದ್ದೇವೆ. ಅವರಿಂದ ಒಳ್ಳೆಯ ಸ್ಪಂದನೆ ಸಿಕ್ಕಿದೆ ಎಂದರು.

    ಸಿದ್ದರಾಮಯ್ಯ ಗೈರು
    ರಾಜಕೀಯವಾಗಿ ತಮಗೆ ಪುನರ್ಜನ್ಮ ನೀಡಿದ ಬಾಗಲಕೋಟೆ ಜಿಲ್ಲೆಯಲ್ಲಿ ಕುರುಬ ಸಮಾಜದಿಂದ ಇಂತದ್ದೊಂದು ಬೃಹತ್ ಸಮಾವೇಶ ನಡೆದಿದ್ದರೂ ಸಮಾಜದ ಅಗ್ರನಾಯಕ ಸಿದ್ದರಾಮಯ್ಯ ಮಾತ್ರ ಗೈರು ಉಳಿದಿದ್ದು, ಎದ್ದು ಕಾಣುತ್ತಿತ್ತು. ಹೀಗಾಗಿ ಸ್ವಾಮೀಜಿಗಳು ಸಿದ್ದರಾಮಯ್ಯ ಅವರದ್ದು ಇದಕ್ಕೆ ಬೆಂಬಲ ಇದೆ. ಆದರೆ, ಅವರು ಬಹಿರಂಗವಾಗಿ ಸಮಾವೇಶದಲ್ಲಿ ಭಾಗವಹಿಸಿಲ್ಲ ಎಂದು ಹೇಳಿದರು.

    ಇನ್ನು ಸಮಾವೇಶಕ್ಕೂ ಮುನ್ನ ಇದೇ ವಿಚಾರವಾಗಿ ಸಚಿವ ಕೆ.ಎಸ್.ಈಶ್ವರಪ್ಪ ಸಿದ್ದರಾಮಯ್ಯ ವಿರುದ್ಧ ಗರಂ ಆಗಿಯೇ ಉತ್ತರ ಕೊಟ್ಟರು. ಯಾಕೆ ಭಾಗವಹಿಸಿಲ್ಲ ಅಂತ ನೀವು ಸಿದ್ದರಾಮಯ್ಯ ಅವರನ್ನೇ ಕೇಳಿ. ನಾನು ನೂರು ಸಾರಿ ಕೇಳಿದ್ದೇನೆ. ಬರುತ್ತೇನೆ ಎಂದು ಬರಲ್ಲ… ಬೆಂಬಲ ಇದೆ ಅಂತಾರೆ ಆದರೆ, ಬರುತ್ತಿಲ್ಲ. ಇದಕ್ಕೆ ನಾವೇನು ಮಾಡೋಕಾಗುತ್ತದೆ? ಅವರನ್ನು ಕರೆದುಕೊಂಡು ಬರುವುದಕ್ಕೆ ಆಗುತ್ತಾ? ಎಳೆದುಕೊಂಡು ಬರಲು ಆಗಲ್ಲವಲ್ಲ? ಎಲ್ಲರೂ ಬಂದಿದ್ದಾರೆ, ಅವರು ನ್ಯಾಯಯುತವಾಗಿ ಬರಬೇಕಿತ್ತು ಎಂದು ತಿಳಿಸಿದರು.

    ಸ್ವಾಮೀಜಿ ವಿರುದ್ಧ ಈಶ್ವರಪ್ಪ ಗರಂ?
    ಸಮಾವೇಶದಲ್ಲಿ ಕನಕಗುರು ಪೀಠದ ತಿಂಥಣಿ ಶಾಖಾಮಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಆಡಿದ ಮಾತುಗಳಿಂದ ವೇದಿಕೆಯಲ್ಲಿದ್ದ ಸ್ವತಃ ಕೆ.ಎಸ್. ಈಶ್ವರಪ್ಪ ಅವರನ್ನು ಗರಂ ಆಗುವಂತೆ ಮಾಡಿತ್ತು. ಇಬ್ಬರ ನಡುವೆ ವೇದಿಕೆಯಲ್ಲಿ ಮಾತುಕತೆ ನಡೆಯಿತು. ಸ್ವಾಮೀಜಿ ಹೇಳಿಕೆಗೆ ಈಶ್ವರಪ್ಪ ಅವರು ವಿರೋಧ ವ್ಯಕ್ತಪಡಿಸದಂತೆ ಗೋಚರಿಸಿತು.

    ಭಾಷಣದ ವೇಳೆ ಸಿದ್ದರಾಮಾನಂದಪುರಿ ಸ್ವಾಮೀಜಿ, ಬಿಜೆಪಿ ಸರ್ಕಾರ, ಸಿಎಂ ಬಿಎಸ್‌ವೈ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಕುರುಬರಿಂದ ಸರ್ಕಾರ ಆಗಿದ್ದು ಗಮನ ಇರಲಿ. ಇದನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಗಮನಿಸಬೇಕು ಎಂದು ಎಚ್ಚರಿಕೆ ಮಾತು ಆಡಿದ್ದು, ಈಶ್ವರಪ್ಪ ಅವರನ್ನು ಗರಂ ಆಗುವಂತೆ ಮಾಡಿತ್ತು.

    ಈಶ್ವರಪ್ಪ ಭಾಷಣೆ ವೇಳೆ ಗಲಾಟೆ
    ಸಮಾವೇಶದಲ್ಲಿ ಈಶ್ವರಪ್ಪ ಮಾತನಾಡುವ ವೇಳೆ ಕುರುಬ ಎಸ್ಟಿ ಮೀಸಲಾತಿ ಹೋರಾಟದ ಮುಖಂಡ ರುದ್ರಣ್ಣ ಗುಳಗೋಳಿ ಅವರಿಗೆ ಭಾಷಣ ಮಾಡಲು ಅವಕಾಶ ಕೊಡದೆ ಇರುವುದು ಅವರ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿತ್ತು. ಗದ್ದಲ ಗಲಾಟೆ ಶುರುವಾಗಿಯಿತು. ಈ ವೇಳೆ ಸುಮ್ಮನಿರಿ ಎಂದು ಈಶ್ವರಪ್ಪ ಎಂದರೂ ಕೇಳಲಿಲ್ಲ. ಬಳಿಕ ಸ್ವಾಮೀಜಿ, ಹಿರಿಯರು ಮಾತಿನಂತೆ ಸುಮ್ಮನಾದರು. ಈಶ್ವರಪ್ಪ ಭಾಷಣದ ಬಳಿಕ ಅವರಿಗೆ ಮಾತನಾಡಲು ಅವಕಾಶ ನೀಡಲಾಯಿತು.

    ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ಕಟ್ಟ ಕಡೆಯ ಕುರುಬನಿಗೂ ಸಹ ಎಸ್ಟಿ ಮೀಸಲಾತಿ ದೊರೆಯಬೇಕು. ಇದಕ್ಕಾಗಿ ಕೆ.ಎಸ್. ಈಶ್ವರಪ್ಪ ಅವರು ನೇತೃತ್ವ ವಹಿಸಿಕೊಂಡಿದ್ದಾರೆ. ನನಗೆ ಪಾದಯಾತ್ರೆ ಬೇಡ ಅಂದರು. ಆದರೆ, ಸಮಾಜದ ಒಳತಿಗಾಗಿ ನಡೆದಿರುವ ಹೋರಾಟ ಇದಾಗಿದ್ದರಿಂದ ನಾವು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇವೆ.
    ನಿರಂಜನಾನಂದಪುರಿ ಸ್ವಾಮೀಜಿ,ಕನಕ ಗುರುಪೀಠ, ಕಾಗಿನೆಲೆ

    ಕುರುಬರನ್ನ ಎಸ್ಟಿಗೆ ಸೇರಿಸಬೇಕು ಎನ್ನುವ ಹೋರಾಟಕ್ಕೆ ಇದೀಗ ಸ್ವಾಮೀಜಿ ನೇತೃತ್ವ ಸಿಕ್ಕಿದೆ. ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಒಂದಾಗಿದ್ದೇವೆ. ಎಲ್ಲ ಕುರುಬರು ಜಾಗೃತರಾಗಿದ್ದಾರೆ. ಹೀಗಾಗಿ ಎಸ್ಟಿ ಮೀಸಲಾತಿ ಕೊಡಿಸಿಯೇ ಕೊಡಿಸುತ್ತೇವೆ, ಅದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.
    ಕೆ.ಎಸ್. ಈಶ್ವರಪ್ಪ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

    ಕುರುಬರನ್ನು ಎಸ್ಟಿಗೆ ಸೇರಿಸಬೇಕು ಎನ್ನುವುದು ನಮ್ಮದು ಬೇಡಿಕೆಯಲ್ಲ. ಸಂವಿಧಾನದ ಆಶಯದ ಅಡಿ ಮೀಸಲಾತಿಗಾಗಿ ಆಗ್ರಹ. ಈ ಸಮಾಜದ ಬಾಂಧವರ ಈ ಉತ್ಸಾಹವು ಬೆಂಗಳೂರಿನ ಉತ್ಸವವಾಗಬೇಕು. ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆದಿದ್ದ ಜಾತಿ ಸಮೀಕ್ಷೆಯ ವರದಿಯನ್ನು ಈ ಸರ್ಕಾರ ಜಾರಿಗೆ ತರಬೇಕು.
    ಎಚ್. ವಿಶ್ವನಾಥ ವಿಧಾನ ಪರಿಷತ್ ಸದಸ್ಯ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts