More

    ಅಖಂಡ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿ

    ಬಾಗಲಕೋಟೆ: ಅಖಂಡ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಆಗ್ರಹಿಸಿ ಜಿಲ್ಲೆಯ ಯಾದವ (ಗೊಲ್ಲ) ಸಂಘ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.

    ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಸಮಾಜದ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾಧಿಕಾರಿ ಕೆ.ರಾಜೇಂದ್ರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿ, ಗೊಲ್ಲ ಸಮುದಾಯದಲ್ಲಿ ತೀವ್ರ ಗೊಂದಲ ಸೃಷ್ಟಿಸಿದ್ದಾರೆ. ಕೂಡಲೇ ಈ ಗೊಂದಲ ಬಗೆಹರಿಸಬೇಕು. ಅಖಂಡ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

    ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ. ಬಿಂಗೇರ ಮಾತನಾಡಿ, ರಾಜ್ಯದಲ್ಲಿ ಗೊಲ್ಲ ಜನಾಂಗ ಗಣನೀಯ ಪ್ರಮಾಣದಲ್ಲಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಯಾಗಿಲ್ಲ. ಹೀಗಾಗಿ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದರು. ಆದರೇ ದಿಢೀರ್ ಬದಲಾವಣೆಯಾಗಿದೆ. ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಲು ಮುಖ್ಯಮಂತ್ರಿಗಳೇ ಆದೇಶಿಸಿದ್ದಾರೆ. ಇದು ಯಾದವ (ಗೊಲ್ಲ) ಸಮುದಾಯಕ್ಕೆ ನೋವು ತಂದಿದೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಖು ಎಂದು ಆಗ್ರಹಿಸಿದರು.

    ಗೊಲ್ಲ ಸಮಾಜದಲ್ಲಿ ಅನೇಕ ಉಪ ಪಂಗಡಗಳಿವೆ. ಕಾಡುಗೊಲ್ಲ ಎನ್ನುವುದು ಸಮಾಜದ ಒಂದು ಉಪ ಪಂಗಡ. ಗೊಲ್ಲ ಸಮುದಾಯದ ಕೃಷ್ಣ ಗೊಲ್ಲ, ಹನಬರ, ಕೃಷ್ಣಗೌಳಿ, ಹಟ್ಟಿ ಗೊಲ್ಲ, ಆಸ್ತಾನ ಗೊಲ್ಲ, ವೈದ್ಯ ಗೊಲ್ಲ ಹೀಗೆ ಇನ್ನೂ ಅನೇಕ ರೀತಿಯಿಂದ ಕರೆಯಲಾಗುತ್ತದೆ. ಕೇವಲ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿ, ಆದೇಶ ಹೊರಡಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಉತ್ತರಕರ್ನಾಟಕದಲ್ಲಿ ಬಹುತೇಕ ನಮ್ಮ ಜನಾಂಗ, ಬಡತನ, ಅನಕ್ಷರತೆ, ಹೊಟ್ಟೆ ಪಾಡಿಗಾಗಿ ವಲಸೆ ಹೋಗುತ್ತಾರೆ. ಅಲೆಮಾರಿಗಳಾಗಿ ಶೋಚನೀಯ ಸ್ಥಿತಿಯಲ್ಲಿದ್ದಾರೆ. ಇವರನ್ನು ಕಡೆಗಣಿಸಿ, ಗೊಲ್ಲ ಜನಾಂಗದ ಉಪ ಪಂಗಡವಾದ ಕಾಡುಗೊಲ್ಲರಿಗೆ ಮಾತ್ರ ನಿಗಮ ಸ್ಥಾಪನೆ ಮಾಡಿದ್ದು ಸರಿಯಲ್ಲ. ಇಡೀ ಸಮಾಜಕ್ಕೆ ಒಂದು ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಮತ ರಾಜಕಾರಣಕ್ಕಾಗಿ ಸಮಾಜವನ್ನು ಒಡೆಯಬಾರದು ಎಂದು ಆಗ್ರಹಿಸಿದರು.

    ಪ್ರಧಾನ ಕಾರ್ಯದರ್ಶಿ ಬಸವರಾಜ ತಳವಾರ, ಮುಖಂಡರಾದ ಹನಮಂತ ನಾಯ್ಕರ, ಚಂದ್ರಶೇಖರ, ರಾಜು, ರವಿ, ರಾಗಪ್ಪ, ಎಸ್.ಐ. ತೆಗ್ಗಿ, ಕೆ.ವೈ. ತುಪ್ಪದ, ಕರಿಯಪ್ಪ ಹನಮರ, ಶೇಖಪ್ಪ ಸೂಜಿ ಇತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts