More

    ಪ್ರವಾಹ ತಗ್ಗಿದರೂ ಗೋಳಾಟ ತಪ್ಪಿಲ್ಲ…!

    ಬಾಗಲಕೋಟೆ: ಜಿಲ್ಲೆಯಲ್ಲಿ ಘಟಪ್ರಭಾ, ಮಲಪ್ರಭಾ ನದಿಗಳು ಶಾಂತವಾಗುವ ಹಂತಕ್ಕೆ ಬಂದಿದ್ದು ಕೃಷ್ಣಾ ನದಿಯಲ್ಲಿ ಇನ್ನೂ ಅಬ್ಬರ ಮುಂದುವರಿದಿದೆ. ಹೀಗಾಗಿ ಕೃಷ್ಣಾ ತೀರದ ಜಮಖಂಡಿ, ರಬಕವಿ-ಬನಹಟ್ಟಿ ಹಾಗೂ ಹುನಗುಂದ ತಾಲೂಕಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನ-ಜಾನುವಾರುಗಳ ಗೋಳಾಟ ಮುಂದುವರಿದಿದೆ.

    ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಇರುವುದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. 2019 ಹಾಗೂ 2020 ರ ಪ್ರವಾಹದ ಭೀಕರತೆ ಅರಿತಿರುವ ನದಿ ತೀರಗಳ ಜನರು ಸದ್ಯದ ಪ್ರವಾಹ ವೇಳೆ ಮುಂಜಾಗ್ರತೆ ಕ್ರಮವಾಗಿಯೇ ತಮ್ಮ ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದರಿಂದ ಯಾವುದೇ ಜೀವಹಾನಿ ಈ ವರೆಗೂ ಸಂಭವಿಸಿಲ್ಲ.

    ಕೃಷ್ಣಾ ನದಿಗೆ ಶುಕ್ರವಾರ ಸಹ 3.50 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಲ್ಲಿ ಇನ್ನೂ ಹೆಚ್ಚಿನ ಆತಂಕ ಸೃಷ್ಟಿಯಾಗಲಿದೆ. ಶುಕ್ರವಾರದ ವರೆಗೆ ಪ್ರಾಥಮಿಕ ಮಾಹಿತಿಯಂತೆ ಮೂರು ನದಿ ಪ್ರವಾಹದಿಂದ 50 ಗ್ರಾಮಗಳು ಬಾಧಿತವಾಗಿವೆ. 96 ಮನೆಗಳು ಹಾನಿಯಾಗಿವೆ. ಜಿಲ್ಲೆಯಲ್ಲಿ ಒಟ್ಟು 65 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.

    ಇನ್ನು ಪ್ರವಾಹದಿಂದಾಗಿ ಜಿಲ್ಲೆಯಲ್ಲಿ 19,299 ಹೆಕ್ಟೇರ್ ಕೃಷಿ ಹಾಗೂ 796.60 ಹೆಕ್ಟೇರ್ ತೋಟಗಾರಿಕೆ ಬೆಳೆ ಜಲಾವೃತಗೊಂಡಿದೆ. ಶುಕ್ರವಾರ ಮೂರು ನದಿ ಪಾತ್ರಗಳಲ್ಲಿ ಪ್ರವಾಹ ಅಬ್ಬರ ಕಡಿಮೆ ಆಗಿದೆ. ಘಟಪ್ರಭಾ ಅಬ್ಬರದಿಂದ ಸಂಚಾರ ಬಂದ್ ಆಗಿದ್ದ ಮುಧೋಳ ತಾಲೂಕಿನ ಚಿಚಖಂಡಿ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ಯಾದವಾಡ ಸೇತುವೆಯಲ್ಲಿ ನೀರು ಕಡಿಮೆ ಆಗಿದ್ದು, ರಸ್ತೆ ಸಂಪೂರ್ಣ ಹಾಳಾಗಿದೆ.

    ಬಾಗಲಕೋಟೆ ಜಿಲ್ಲೆಯಲ್ಲಿ ಸತತ ಮೂರು ವರ್ಷ ಪ್ರವಾಹ ಉಂಟಾಗಿದೆ. 2019 ರಲ್ಲಿ ಉಂಟಾಗಿದ್ದ ಪ್ರಮಾಣ ಇಲ್ಲ. ಶಾಶ್ವತ ಪರಿಹಾರಕ್ಕಾಗಿ ಮೇಲ್ಮಟ್ಟದಲ್ಲಿ ಚರ್ಚೆ ಆಗಬೇಕಿದೆ. ಮಹಾರಾಷ್ಟ್ರದಿಂದ ನೀರು ಹರಿದು ಬಿಡುವ ಬಗ್ಗೆ ಸಮನ್ವಯ ಸಾಧಿಸಲಾಗುತ್ತದೆ. ಇದರಿಂದ ನೀರು ಬಿಡುಗಡೆ ಬಗ್ಗೆ ಚರ್ಚಿಸಲಾಗುತ್ತಿದೆ.
    ಶಿವಯೋಗಿ ಕಳಸದ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts