More

    ಹಾನಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ

    ಬಾಗಲಕೋಟೆ: ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಮತ್ತು ಮಳೆಯಿಂದಾಗಿ ಹಾನಿಗೊಳಗಾದ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆ, ರಸ್ತೆ ಹಾಗೂ ಮನೆಗಳ ಸಮೀಕ್ಷೆ ಕಾರ್ಯ ಚುರುಕುಗೊಳಿಸಿ ತುರ್ತಾಗಿ ವರದಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ದರ್ಶಿ ಶಿವಯೋಗಿ ಕಳಸದ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಜರುಗಿದ ಮತದಾರರಪಟ್ಟಿ ಪರಿಷ್ಕರಣೆ, ಕೋವಿಡ್ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೆಚ್ಚಿನ ಮಳೆ ಪ್ರಮಾಣದಿಂದ ರೈತರು ಬೆಳೆದ ಬೆಳೆ ಹಾಳಾಗಿದ್ದು, ಅದರ ಸಮೀಕ್ಷೆಯನ್ನು ಚುರುಕುಗೊಳಿಸಿ ವರದಿ ಸಲ್ಲಿಸಬೇಕು. ಅಂದಾಗ ರೈತರಿಗೆ ಪರಿಹಾರ ಬೇಗನೆ ದೊರೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಅಧಿಕಾರಿಗಳು ಮುತುವರ್ಜಿ ವಹಿಸಿ ಸಮೀಕ್ಷೆ ವರದಿಯನ್ನು ನೀಡಲು ತಿಳಿಸಿದರು.

    ಆಗಸ್ಟ್ ಮಾಹೆಯಲ್ಲಿ ಕೃಷಿ, ತೋಟಗಾರಿಕೆ, ಸೇರಿ ಒಟ್ಟು 34869 ಹೆಕ್ಟೇರ್ ಬೆಳೆ ಹಾನಿಯಾದರೆ, ಸೆಪ್ಟೆಂಬರ್ ಮಾಹೆಯಲ್ಲಿ 20779 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಆಗಸ್ಟ್‌ದಿಂದ ಸೆಪ್ಟೆಂಬರ್ 13ರವರೆಗೆ 469 ಮನೆಗಳು ಹಾನಿಗೊಳಗಾಗಿವೆ. ಸೆಪ್ಟೆಂಬರ್ 14ರ ನಂತರ 1869 ಮನೆಗಳು ಹಾನಿಗೊಳಗಾಗಿವೆ. ಬಾಕಿ ಹಾನಿ ವಿವರವನ್ನು ತುರ್ತಾಗಿ ನೀಡುವಂತೆ ಉಸ್ತುವಾರಿ ಕಾರ್ಯದರ್ಶಿಗಳು ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಧಿಕಾರಿ ಕೆ.ರಾಜೇಂದ್ರ ಮಾತನಾಡಿ, ಕೃಷಿ, ತೋಟಗಾರಿಕೆ ಇಲಾಖೆ ಸಿಬ್ಬಂದಿ ಹಾನಿ ಸಮೀಕ್ಷೆ ಕಾರ್ಯವನ್ನು ವಾರದೊಳಗೆ ಪೂರ್ಣಗೊಳಿಸಬೇಕು. ಎರಡು ದಿನಗಳಲ್ಲಿ ಸುರಿದ ಮಳೆಗೂ ಮಣ್ಣಿನ ಮನೆಗಳು ಬಿದ್ದಿದ್ದು, ಜಂಟಿ ಸಮೀಕ್ಷೆ ಕಾರ್ಯ ಕೈಗೊಂಡು ಪರಿಹಾರ ತಂತ್ರಾಂಶದಲ್ಲಿ ನೋಂದಣಿ ಮಾಡಬೇಕು. ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಬೀಜ ಮತ್ತು ಗೊಬ್ಬರದ ಸಮಸ್ಯೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕಾರ್ಯ ನಡೆದಿದೆ ಎಂದು ಜಿಲ್ಲಾಧಿಕಾರಿ ಹೇಳಿದಾಗ ಮಾರುಕಟ್ಟೆಯಲ್ಲಿ ಅಂಗಡಿಗಳ ಮುಂದೆ ಮಾಸ್ಕ್ ಧರಿಸದೆ ಸಾರ್ವಜನಿಕರು ನಿಲ್ಲುತ್ತಿದ್ದು, ಅದನ್ನು ತಡೆಯುವ ಕಾರ್ಯವಾಗಬೇಕು. ಪೆಟ್ರೋಲ್ ಬಂಕ್‌ಗಳಲ್ಲಿ ಮಾಸ್ಕ್ ಧರಿಸಿದ್ದರೆ ಮಾತ್ರ ಇಂಧನ ನೀಡುವಂತೆ ಸೂಚಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ನಿರ್ದೇಶನ ನೀಡಿದರು.

    ನಂತರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ, ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ಅನುದಾನದಡಿ ಕೈಗೊಂಡ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಸಭೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಯಶವಂತ ಗುರುಕಾರ, ಜಿಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ತಹಸೀಲ್ದಾರರು ಉಪಸ್ಥಿತರಿದ್ದರು.

    ಮತದಾರರ ಪಟ್ಟಿ ಪರಿಷ್ಕರಣೆ
    ಜಿಲ್ಲೆಯಲ್ಲಿ ಚುನಾವಣೆ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಕೈಗೊಳ್ಳಲಾಗಿದ್ದು, ಸದ್ಯ ವಿಭಾಗಗಗಳ ಮರುಹಂಚಿಕೆ ಮತ್ತು ಮತದಾನ ಕೇಂದ್ರದ ವಿಭಾಗ, ಭಾಗ ಗಡಿಗಳ ಪ್ರಸ್ತಾವಿತ ಪುನರ್ ರಚನೆ ಅಂತಿಮಗೊಳಿಸುವುದು ಮತ್ತು ಮತದಾನ ಕೇಂದ್ರಗಳ ಪಟ್ಟಿ ಅನುಮೋದನೆ ಪಡೆಯುವ ಕಾರ್ಯ ನಡೆದಿದೆ. ಪ್ರತಿಯೊಂದು ಹಂತದಲ್ಲಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ 2021 ಜನವರಿ 1ಕ್ಕೆ ಅಂತಿಮ ಮತದಾರ ಪಟ್ಟಿ ಪ್ರಕಟಿಸುವ ಕಾರ್ಯವಾಗಬೇಕು ಎಂದು ಜಿಲ್ಲಾ ಮತದಾರರ ಪಟ್ಟಿ ವೀಕ್ಷಕರೂ ಆಗಿರುವ ಶಿವಯೋಗಿ ಕಳಸದ ಅಧಿಕಾರಿಗಳಿಗೆ ಸೂಚಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts