More

    ಪ್ರವಾಹ, ಮಳೆಯಿಂದ 12093 ಮನೆಗಳು ಹಾನಿ

    ಬಾಗಲಕೋಟೆ: ಕಳೆದ ವರ್ಷ ಹಾಗೂ ಪ್ರಸಕ್ತ ವರ್ಷದ ಪ್ರವಾಹ ಮತ್ತು ಮಳೆಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 12093 ಮನೆಗಳು ಹಾನಿಯಾಗಿವೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

    ಹಾನಿಗೊಳಗಾದ ಮನೆಗಳಲ್ಲಿ ‘ಎ’ ಕೆಟಗರಿಯಲ್ಲಿ 577, ‘ಬಿ’ ಕೆಟಗರಿಯಲ್ಲಿ 2719 ಹಾಗೂ ‘ಸಿ’ ಕೆಟಗರಿಯಲ್ಲಿ 8797 ಮನೆಗಳನ್ನು ಗುರುತಿಸಲಾಗಿದೆ. ಈ ಸಂಖ್ಯೆ ಇನ್ನೂ ಹೆಚ್ಚಿಗೆ ಆಗುವ ಸಾಧ್ಯತೆ ಇದೆ. ಹಾನಿಗೊಳಗಾದ ಕುಟುಂಬಗಳಿಗೆ ಈಗಾಗಲೇ 154 ಕೋಟಿ ರೂ. ಪರಿಹಾರ ಧನ ವಿತರಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಬೆಳೆ ಸೇರಿ ಒಟ್ಟು 1,12,525 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಈಗಾಗಲೇ 7.21 ಕೋಟಿ ರೂ. ಗಳನ್ನು 89829 ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ 128 ಕಿ.ಮೀ. ರಾಜ್ಯ ಹೆದ್ದಾರಿ, 309 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆ, 54 ಬ್ರಿಡ್ಜ್ ಹಾಗೂ ಬಾಂದಾರಗಳು ಹಾನಿಯಾಗಿದ್ದು, ಸರ್ಕಾರದಿಂದ 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಈ ಪೈಕಿ 26 ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.

    ಪಂಚಾಯತ್ ರಾಜ್ ಇಲಾಖೆಯಿಂದ 1448 ಕಿ.ಮೀ ರಸ್ತೆ, 29 ಕುಡಿಯುವ ನೀರಿನ ಯೋಜನೆಗಳು ಹಾಗೂ 34 ಬ್ರಿಡ್ಜ್ ಮತ್ತು ಬಾಂದಾರಗಳು ಹಾನಿಯಾಗಿವೆ. ಜಿಲ್ಲೆಯ 5 ತಾಲೂಕುಗಳಲ್ಲಿ ಒಟ್ಟು 117 ಕೈಮಗ್ಗದ ಉಪಕರಣ ಹಾಗೂ ಸಾಮಗ್ರಿ ಹಾನಿಯಾಗಿದ್ದು, ಅದಕ್ಕಾಗಿ 7 ಲಕ್ಷ ರೂ.ಪರಿಹಾರವನ್ನು ಪಾವತಿಸಲು ಸೂಚಿಸಲಾಗಿದೆ ಎಂದರು.

    ರಾಜ್ಯದಲ್ಲಿ ಪ್ರವಾಹ ಮತ್ತು ಅತಿಯಾದ ಮಳೆಯಿಂದ 25 ಸಾವಿರ ಕೋಟಿ ರೂ. ಹಾನಿಯಾಗಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯಕ್ಕೆ ಕೇಂದ್ರ ಒಂದಿಷ್ಟು ಅನುದಾನ ನೀಡಿದೆ. ಹೆಚ್ಚಿನ ಅನುದಾನ ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ, ಜಿಪಂ ಸಿಇಒ ಟಿ.ಭೂಬಾಲನ್ ಸೇರಿ ಇತರರು ಉಪಸ್ಥಿತರಿದ್ದರು.

    ಶೇ.30 ರಷ್ಟು ಆದಾಯಕ್ಕೆ ಕೊಕ್ಕೆ
    ಕಳೆದ ಒಂದು ವರ್ಷದಲ್ಲಿ ಪ್ರವಾಹ, ಮಳೆ, ಕೋವಿಡ್‌ನಿಂದ ಸಾಕಷ್ಟು ಹಾನಿಯಾಗಿದೆ. 11 ತಿಂಗಳಿನಿಂದ ಸರ್ಕಾರಕ್ಕೆ ಬರಬೇಕಾದ ನಿಗದಿತ ಆದಾಯ ಬರುತ್ತಿಲ್ಲ. ಶೇ.30 ರಷ್ಟು ಆದಾಯಕ್ಕೆ ಕೊಕ್ಕೆ ಬಿದ್ದಿದೆ. ಇದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಆದರು ಸಹ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದು ಡಿಸಿಎ ಗೋವಿಂದ ಕಾರಜೋಳ ತಿಳಿಸಿದರು.

    ಬೇರೆ ಬೇರೆ ರಾಜ್ಯದಲ್ಲಿ ಸರ್ಕಾರಿ ನೌಕರರ ಸಂಬಳ ಕಡಿತಗೊಳಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಈ ರೀತಿ ಮಾಡಿಲ್ಲ. ಸಾರಿಗೆ ಸಂಸ್ಥೆಗೆ ಆದಾಯ ಸಂಪೂರ್ಣ ಇಳಿಮುಖವಾದರೂ ಸಾಲ ಮಾಡಿ ನೌಕರರಿಗೆ ವೇತನ ನೀಡಿದ್ದೇವೆ. ಮುಂಬರುವ ಜನವರಿಯಲ್ಲಿ ಕೋವಿಡ್‌ಗೆ ಲಸಿಕೆ ಬರಲಿದೆ. ಎಲ್ಲರಿಗೂ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಇನ್ನು ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ವರ್ಷ ಪಟಾಕಿ ನಿಷೇಧಿಸಲಾಗಿದೆ. ಜನರು ಇದಕ್ಕೆ ಸಹಕಾರ ನೀಡಬೇಕು. ಕೋವಿಡ್ ಸೋಂಕಿತರಿಗೆ ಪಟಾಕಿಯಿಂದ ಆರೋಗ್ಯ ಸಮಸ್ಯೆ ಉಂಟಾಗಲಿದೆ. ಜನರು ಎಚ್ಚರದಿಂದ ಇರಬೇಕು ಎಂದರು.

    ಉಪಚುನಾವಣೆ ಲಿತಾಂಶದ ಬಳಿಕವೂ ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸುತ್ತಾರೆ ಎಂದು ಸಿದ್ದರಾಮಯ್ಯ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಅವರು ಬಿಜೆಪಿ ವಕ್ತಾರರಲ್ಲ. ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಬಿ.ಎಸ್. ಯಡಿಯೂರಪ್ಪ ನಿರ್ಧಾರ ತೆಗೆದುಕೊಳ್ಳುತ್ತಾರೆ. ರಾಯಚೂರು ಜಿಲ್ಲೆಯ ಮಸ್ಕಿ, ಬೀದರ್ ಜಿಲ್ಲೆಯ ಬಸವಕಲ್ಯಾಣ ಉಪ ಚುನಾವಣೆಗೆ ಪಕ್ಷ ಸಿದ್ಧತೆ ಮಾಡಿಕೊಂಡಿದೆ. ರಾಜ್ಯ ಉಪಾಧ್ಯಕ್ಷರಾಗಿರುವ ಬಿ.ವೈ. ವಿಜೇಂದ್ರ ಅವರಿಗೆ ಜವಾಬ್ದಾರಿ ನೀಡಲಾಗಿದೆ.
    ಗೋವಿಂದ ಕಾರಜೋಳ, ಡಿಸಿಎಂ



    ಪ್ರವಾಹ, ಮಳೆಯಿಂದ 12093 ಮನೆಗಳು ಹಾನಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts