More

    ಬೆಳೆಗಾರರಿಗೆ ಹುಳಿಯಾದ ದ್ರಾಕ್ಷಿ !

    ಅಶೋಕ ಶೆಟ್ಟರ

    ಬಾಗಲಕೋಟೆ: ಪ್ರವಾಹ ಮತ್ತು ಅತಿಯಾದ ಮಳೆ ಅನ್ನದಾತರ ಬದುಕನ್ನು ಹಿಂಡಿಹಿಪ್ಪೆ ಮಾಡಿದ್ದು, ಸಾಲದ ಸುಳಿಗೆ ನೂಕಿದೆ. ಅದರಲ್ಲೂ ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ದ್ರಾಕ್ಷಿ ಬೆಳೆಗಾರರ ಪಾಲಿಗೆ ಹುಳಿಯಾಗಿದೆ.

    ಬಾಗಲಕೋಟೆ ಜಿಲ್ಲೆಯಲ್ಲಿ ಅಂದಾಜು 4200 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ಇದ್ದು, ಇದೀಗ ಹೂವು ಬಿಡುವ ಕಾಲಕ್ಕೆ ವರುಣ ರೈತರಿಗೆ ಕಂಟಕವಾಗಿ ಪರಿಣಮಿಸಿದ್ದಾನೆ. ನಿರಂತರ ಮಳೆಯಿಂದಾಗಿ ಹೂವುಗಳೆಲ್ಲ ಉದುರಿ ಬಿದ್ದಿದ್ದು, ಈ ವರ್ಷವೂ ದ್ರಾಕ್ಷಿ ಕೈಗೆಟಕದ ಸ್ಥಿತಿ ನಿರ್ಮಾಣವಾಗಿದೆ.

    ಆಗಸ್ಟ್‌ನಿಂದ ಅಕ್ಟೋಬರ್ 15ರವರೆಗೆ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಈಗಾಗಲೇ ಶೇ.50 ರಷ್ಟು ಅಂದರೆ ಎರಡು ಸಾವಿರ ಹೆಕ್ಟೇರ್‌ನಷ್ಟು ದ್ರಾಕ್ಷಿ ಬೆಳೆ ಹಾಳಾಗಿದ್ದು, ಬೆಳೆಗಾರರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಸದ್ಯ ಮೇಲ್ನೋಟಕ್ಕೆ ದ್ರಾಕ್ಷಿ ಬೆಳೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದರೂ ಹೂವು, ಕಾಯಿ ಗೊನೆಗಳು ಉದುರಿ ಬಿದ್ದಿವೆ. ಈ ವರ್ಷ ಹೂವು ಉದುರಿರುವ ಗಿಡಗಳಲ್ಲಿ ದ್ರಾಕ್ಷಿ ಹಣ್ಣು ಬೆಳೆಯುವುದಿಲ್ಲ ಎನ್ನುತ್ತಾರೆ ದ್ರಾಕ್ಷಿ ಬೆಳೆಗಾರರು. ಸಾವಿರಾರು ರೂ. ಹಾನಿ ಆಗಿದ್ದರೆ ತಡೆದುಕೊಳ್ಳಬಹುದು. ದ್ರಾಕ್ಷಿ ಬೆಳೆಗೆ ಎಕರೆಗೆ ಒಂದರಿಂದ ಒಂದೂವರೆ ಲಕ್ಷ ರೂ. ಖರ್ಚು ಮಾಡಿದ್ದೇವೆ. ಇದೀಗ ಮಳೆ ನಮ್ಮ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಇದರಿಂದ ಬ್ಯಾಂಕ್‌ನಲ್ಲಿ ಸಾಲ ಹಾಗೂ ಬಡ್ಡಿಯ ಮೊತ್ತ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಈ ವರ್ಷವೂ ದ್ರಾಕ್ಷಿ ನಮ್ಮ ಪಾಲಿಗೆ ಸಿಹಿ ಆಗುವ ಬದಲಿಗೆ ಹುಳಿಯಾಗಿದೆ ಎಂದು ಬೆಳೆಗಾರರು ಕಣ್ಣೀರು ಹಾಕುತ್ತಿದ್ದಾರೆ.

    ಮೂರು ವರ್ಷದಿಂದ ಹಾನಿ
    ದ್ರಾಕ್ಷಿ ಬೆಳೆಗೆ ಮಳೆ ಕಂಟಕವಾಗಿರುವುದು ಇದು ಮೊದಲ ಸಲವಲ್ಲ. ಸತತ ಮೂರು ವರ್ಷಗಳಿಂದ ಹಾನಿ ಉಂಟು ಮಾಡುತ್ತಲೇ ಇದೆ. ಅಕಾಲಿಕ ಮಳೆ, ಆಲಿಕಲ್ಲು ಮಳೆ, ಪ್ರವಾಹ, ಭಾರಿ ಮಳೆ ಎದುರಾಗಿ ನಷ್ಟ ಅನುಭವಿಸುತ್ತಲೇ ಬಂದಿದ್ದೇವೆ. ನಷ್ಟ ಎದುರಿಸಲಾಗದೆ ಸಂಕಷ್ಟದಲ್ಲಿ ಸಿಲುಕಿದ್ದೇವೆ. ಬ್ಯಾಂಕ್‌ನವರು ಸಾಲ ತುಂಬುವಂತೆ ಫೋನ್ ಮಾಡುತ್ತಲೇ ಇದ್ದಾರೆ. ಸಾಲ ಹೇಗೆ ತುಂಬುವುದು ? ಎಲ್ಲ ದುಡ್ಡನ್ನು ದ್ರಾಕ್ಷಿಗೆ ಹಾಕಿದ್ದೇವೆ. ಬೆಳೆ ಕೈಕೊಟ್ಟಿದೆ. ಇದರಿಂದ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್, ಸಹಕಾರಿ ಬ್ಯಾಂಕ್ ಸೇರಿ ಕಳೆದ ಮೂರು ವರ್ಷಗಳಲ್ಲಿ ಸಾಲದ ಮೊತ್ತ ಮತ್ತು ಬಡ್ಡಿ ಸೇರಿ 50 ಲಕ್ಷ ರೂ. ಗಡಿ ದಾಟಿದೆ. ಮುಂದೇನು ಎಂಬುದು ದಿಕ್ಕು ತೋಚದಾಗಿದೆ. ಸರ್ಕಾರ ದ್ರಾಕ್ಷಿ ಬೆಳೆಗಾರರ ಸಮಸ್ಯೆಗೆ ಪರಿಹಾರ ನೀಡುತ್ತಿಲ್ಲ ಎಂದು ದಿಕ್ಕು ತೋಚದೆ ಕಂಗಾಲಾಗಿರುವ ಬಾಗಲಕೋಟೆ ಸಮೀಪದ ಹೊನ್ನಾಕಟ್ಟಿಯಲ್ಲಿ 11 ಎಕರೆ ದ್ರಾಕ್ಷಿ ಬೆಳೆ ಹಾನಿ ಆಗಿರುವ ರೈತ ಮಹದೇವ ಕೋಳಿ ಅಳಲು ತೋಡಿಕೊಂಡಿದ್ದಾರೆ.

    ಎಲ್ಲ ಬೆಳೆಗಾರರದ್ದು ಕಣ್ಣೀರು
    ಜಿಲ್ಲೆಯಲ್ಲಿ ಇರುವ ಪ್ರತಿಯೊಬ್ಬ ದ್ರಾಕ್ಷಿ ಬೆಳೆಗಾರರ ಪರಿಸ್ಥಿತಿಯೂ ಹೀಗೆಯೇ ಇದೆ. ಗಿಡಗಳ ನಿರ್ವಹಣೆ, ಕೂಲಿ, ಔಷಧ, ಚಾಟಣಿ ಅಂತ ಪ್ರತಿ ವರ್ಷ ಲಕ್ಷಾಂತರ ರೂ. ಖರ್ಚು ಮಾಡಿರುತ್ತಾರೆ. ಹೀಗೆ ಪ್ರಕೃತಿ ವಿಕೋಪಕ್ಕೆ ಸಿಕ್ಕು ಬೆಳೆ ಕೈಗೆ ಬರದೆ ಹಾನಿ ಅನುಭವಿಸುತ್ತಿದ್ದೇವೆ. ಇದರಿಂದ ಹೊರಬರುವುದು ಕಷ್ಟವಾಗಿದೆ. ಈಗ ಗಿಡದಲ್ಲಿ ಹೂವು ಉದುರಿದ್ದು, ಗಿಡಗಳನ್ನು ಉಳಿಸಿಕೊಳ್ಳಲು ಮತ್ತೆ ಲಕ್ಷಾಂತರ ರೂ. ಹಣ ಖರ್ಚು ಮಾಡಬೇಕಿದೆ. ಮಹಾರಾಷ್ಟ್ರದಿಂದ ಕೂಲಿಗಳನ್ನು ಕರೆಸಿದ್ದೇವೆ. ಅವರಿಗೆ ಪಗಾರ, ಊಟ, ವಸತಿ ವ್ಯವಸ್ಥೆ ಮಾಡಬೇಕು. ಇತ್ತ ಬೆಳೆಯಿಂದ ಮೂರು ವರ್ಷಗಳಿಂದ ಬರೀ ನಷ್ಟ ಅನುಭವಿಸಿದ್ದೆ ಆಗಿದೆ. ಹಾಗೆಂದು ಸುಮ್ಮನೆ ಬಿಡುವಂತಿಲ್ಲ. ಗಿಡ ಉಳಿಸಿಕೊಳ್ಳಲು ನಿರ್ವಹಣೆ ಮಾಡಬೇಕು. ಇದರಿಂದ ಸಾಲದ ಏರಿಕೆ ನೋಡಿದರೆ ಯಾಕಾದರೂ ಈ ವಾಣಿಜ್ಯ ಬೆಳೆ ಬೆಳೆದೇವು ಅಂತ ನೋವು ಆಗುತ್ತಿದೆ ಎನ್ನುತ್ತಾರೆ ದ್ರಾಕ್ಷಿ ಬೆಳೆಗಾರ ಆನಂದ.

    ಬಾಗಲಕೋಟೆ ಜಿಲ್ಲೆಯಲ್ಲಿ 4 ಸಾವಿರದಿಂದ 4200 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ಇದೆ. ಈ ಮೂರು ತಿಂಗಳಲ್ಲಿ ಉಂಟಾದ ಪ್ರವಾಹ ಮತ್ತು ಅಧಿಕ ಮಳೆಯಿಂದ ಅಂದಾಜು 2 ಸಾವಿರ ಹೆಕ್ಟೇರ್ ಪ್ರದೇಶದ ದ್ರಾಕ್ಷಿ ಬೆಳೆಗೆ ಹಾನಿಯಾಗಿದೆ. ಇದರಿಂದ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ಇನ್ನೂ ಸರ್ವೆ ಕಾರ್ಯ ಪ್ರಗತಿಯಲ್ಲಿದೆ.
    ರಾಹುಲ್ಕುಮಾರ ಬಾವಿದೊಡ್ಡಿ, ಉಪನಿರ್ದೆಶಕರು, ತೋಟಗಾರಿಕೆ ಇಲಾಖೆ, ಬಾಗಲಕೋಟೆ

    ಹಾಥರಸ್​ ಕೇಸ್​: ಅಲಹಾಬಾದ್ ಹೈಕೋರ್ಟ್​ ನಿಗಾದಲ್ಲಿ ನಡೆಯಲಿದೆ ಸಿಬಿಐ ತನಿಖೆ ಎಂದ ಸುಪ್ರೀಂ ಕೋರ್ಟ್



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts