More

    312 ಕೋಟಿ ರೂ. ಈರುಳ್ಳಿ ನಷ್ಟ…!

    ಬಾಗಲಕೋಟೆ: ‘ಅತಿಯಾದರೆ ಅಮೃತ ಕೂಡ ವಿಷ’ ಎನ್ನುವ ನಾಣ್ನುಡಿ ಈ ವರ್ಷದ ಮಳೆಗೆ ಸರಿಯಾಗಿ ಅನ್ವಯಿಸುತ್ತದೆ. ರೈತರ ಬದುಕು ಹಸನು ಮಾಡುವ ವರುಣದೇವನೇ ಈ ಸಲ ರೈತರಿಗೆ ವಿಲನ್.

    ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ತಿಂಗಳಲ್ಲಿ ರೈತರು ಬೆಳೆದಿದ್ದ 312 ಕೋಟಿ ರೂ. ಮೌಲ್ಯದ ಈರುಳ್ಳಿ ಬೆಳೆ ನಷ್ಟವಾಗಿದೆ. ಇದರಿಂದ ಈರುಳ್ಳಿ ಬೆಳೆಗಾರರ ಬದುಕು ದಿಕ್ಕೆಟ್ಟು ಹೋಗಿದೆ.

    ಆಗಸ್ಟ್ ತಿಂಗಳಲ್ಲಿ ಮಹಾರಾಷ್ಟ್ರ ಹಾಗೂ ಬೆಳಗಾವಿಯಲ್ಲಿ ಸುರಿದ ಭಾರಿ ಮಳೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳು ರೌದ್ರನರ್ತನ ಈರುಳ್ಳಿ ಬೆಳೆಗೆ ಶವಪಟ್ಟಿಗೆ ತಯಾರು ಮಾಡಿತ್ತು. ಅದರ ಬೆನ್ನಲ್ಲೆ ಸೆಪ್ಟಂಬರ್ ಹಾಗೂ ಅಕ್ಟೋಬರ್ ನಲ್ಲಿ ರಕ್ಕಸ ಮಳೆ ಸುರಿದ ಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆಯಿತು.

    ಕಳೆದ ವರ್ಷ ಈರುಳ್ಳಿ ಬೆಲೆ ಗಗನಕ್ಕೆ ಏರಿದ್ದರಿಂದ ಈ ವರ್ಷ ಜಿಲ್ಲೆಯಲ್ಲಿ ಉಳ್ಳಾಗಡ್ಡಿ ಬಿತ್ತನೆ ಪ್ರಮಾಣ ಜಾಸ್ತಿ ಆಗಿತ್ತು. ಮುಂಗಾರಿನಲ್ಲಿ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿತ್ತು. ಆದರೆ, ಈ ಮೂರು ತಿಂಗಳು ಜಿಲ್ಲೆಯನ್ನು ಕಾಡಿದ ಜಲ ಕಂಟಕದಿಂದ ಭರ್ತಿ 39,041 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾಳಾಗಿದೆ.

    ತೋಟಗಾರಿಕೆ ಇಲಾಖೆ ಅಂದಾಜಿಸಿದಂತೆ ಪ್ರತಿ ಹೆಕ್ಟೇರ್ ಈರುಳ್ಳಿಗೆ 80 ಸಾವಿರ ರೂ. ಖರ್ಚು ಬರುತ್ತದೆ. ಹೀಗಾಗಿ ಜಿಲ್ಲೆಯಲ್ಲಿ ಲಾಸ್ ಆಗಿರುವ ಈರುಳ್ಳಿಯಿಂದ ರೈತರಿಗೆ ಬರೊಬ್ಬರಿ 312 ಕೋಟಿ ರೂ. ನಷ್ಟ ಆಗಿದೆ. ಇದರಿಂದ ರೈತರ ಬೆಳೆದ ಈರುಳ್ಳಿ ಜೊತೆಗೆ ಅವರ ಬದುಕು ಸಹ ಕೊಚ್ಚಿ ಹೋಗಿದೆ.

    ಕಳೆದ ವರ್ಷವೂ ಹೀಗೆಯೇ ಆಗಿತ್ತು
    2019ರಲ್ಲಿ ಬಾಗಲಕೋಟೆ ಜಿಲ್ಲೆ ಶತಮಾನದ ಅತ್ಯಂತ ಭೀಕರ ಪ್ರವಾಹಕ್ಕೆ ತುತ್ತಾಗಿತ್ತು. ಎಲ್ಲೋ ಮಳೆಯಾದ ಪರಿಣಾಮ ಕೋಟೆ ನಾಡಿನಲ್ಲಿ ಇರುವ ಮೂರು ನದಿಗಳು ಅಬ್ಬರಿಸಿದ ಪರಿಣಾಮ ಈರುಳ್ಳಿ ಬೆಳೆ ಬಹುತೇಕ 75 ರಿಂದ 80 ರಷ್ಟು ಬೆಳೆ ಹಾಳಾಗಿತ್ತು. ಈ ವರ್ಷವಾದರೂ ಉತ್ತಮ ಫಸಲು ಬರಬಹುದು ಎಂದು ಈರುಳ್ಳಿ ಬಿತ್ತನೆ ಮಾಡಿದ್ದ ರೈತರಿಗೆ ಫಸಲಿನ ಬದಲಿಗೆ ಇದೀಗ ಜಮೀನಿಗೆ ಕಾಲಿಟ್ಟರೆ ಕೊಳೆತ ಈರುಳ್ಳಿ ಘಾಟು ಮೂಗಿಗೆ ಹಿಂಸೆ ಕೊಡುತ್ತಿದೆ.

    ಅಕ್ಟೋಬರ್ ಮಳೆ ಮಾಡಿತು ಸರ್ವನಾಶ
    ಆಗಸ್ಟ್ ತಿಂಗಳ ಪ್ರವಾಹ ಮತ್ತು ಸೆಪ್ಟಂಬರ್ ತಿಂಗಳ ರಣಮಳೆಯಿಂದ ಜಿಲ್ಲೆಯಲ್ಲಿ ಅಂದಾಜು 15 ಸಾವಿರ ಹೆಕ್ಟೇರ್ ಈರುಳ್ಳಿ ಬೆಳೆ ನಾಶ ಮಾಡಿತ್ತು. ಆದರೆ, ಅಕ್ಟೋಬರ್ ತಿಂಗಳು 10 ರಿಂದ 15 ರವರೆಗೆ ಅಕ್ಷರಶಃ ರಕ್ಕಸ ಮಳೆ ಸುರಿದು ಭರ್ತಿ 24 ಸಾವಿರ ಹೆಕ್ಟರ್ ಬೆಳೆಯನ್ನು ಹಾಳು ಮಾಡಿತು. ಇದರಿಂದ ಈ ಐದು ದಿನಗಳಲ್ಲಿ 192 ಕೋಟಿ ರೂ. ಮೌಲ್ಯದ ಈರುಳ್ಳಿ ಹಾಳಾಗಿ, ರೈತರ ಜಂಘಾಬಲವನ್ನೇ ಕುಸಿದು ಬೀಳುವಂತೆ ಮಾಡಿದ್ದು, ಬೆಳೆಯನ್ನು ಸಂಪೂರ್ಣ ಸರ್ವನಾಶ ಮಾಡಿ ಹೋಗಿದೆ. ಇದರಿಂದ ಈಗಾಗಲೇ ತೋಟಗಾರಿಕೆ ಇಲಾಖೆ ಜಿಲ್ಲೆಯಲ್ಲಿ ಶೇ. 100ರಷ್ಟು ಈರುಳ್ಳಿ ಬೆಳೆನಾಶವಾಗಿದೆ ಎಂದು ವರದಿ ನೀಡಿದೆ.

    ಬೆಲೆ ಏರಿಕೆ ಲಾಭ ಬೆವರು ಜೀವಿಗೆ ಇಲ್ಲ
    ರಾಜ್ಯದಲ್ಲಿ ಅತಿಹೆಚ್ಚು ಈರುಳ್ಳಿ ಬೆಳೆಯುವ ಉತ್ತರ ಕರ್ನಾಟಕ ಪ್ರವಾಹ ಮತ್ತು ಅತಿವೃಷ್ಟಿಯಿಂದ ನಲುಗಿ ಹೋಗಿದೆ. ಬಹುತೇಕ ಈರುಳ್ಳಿ ಹಾಳಾಗಿದೆ. ಇದರಿಂದ ಬೇಡಿಕೆಗೆ ತಕ್ಕಂತೆ ಉಳ್ಳಾಗಡ್ಡಿ ಆವುಕ ಇಲ್ಲದೇ ದಿನೇ ದಿನೇ ಬೆಲೆ ಗಗನಮುಖಿ ಆಗುತ್ತಿದೆ. ಅಕ್ಟೋಬರ್ ಮೊದಲ ವಾರದಲ್ಲಿ 24 ರಿಂದ 35 ರೂ.ಗೆ ಕೆಜಿ ಇದ್ದ ಉಳ್ಳಾಗಡ್ಡಿ ಬೆಲೆ ಶುಕ್ರವಾರ ತರಕಾರಿ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ್ದು ಕೆಜಿ 100 ರೂ. ಆಗಿದೆ.

    ಇನ್ನು ಅತೀವೃಷ್ಟಿಯಿಂದ ಡ್ಯಾಮೇಜ್ ಆಗಿರುವ ಬಳಕೆಗೆ ಮೂರ್ನಾಲ್ಕು ದಿನಗಳಷ್ಟೆ ಬರುವ ಈರುಳ್ಳಿ ಕೆಜಿಗೆ 50 ರೂ. ಇತ್ತು. ಇಷ್ಟೊಂದು ಬೆಲೆ ಏರಿಕೆ ಆಗಿದ್ದರೂ ಅದರ ಲಾಭ ಮಾತ್ರ ಬೆವರು ಜೀವಿ ಅನ್ನದಾತರಿಗೆ ಇಲ್ಲವಾಗಿದೆ. ಬೆಳೆದಿದ್ದ ಈರುಳ್ಳಿ ಎಲ್ಲವೂ ಹಾಳಾಗಿದ್ದರಿಂದ ಮಾಡಿದ ಖರ್ಚು ಸಹ ಮೈಮೇಲೆ ಬಂದಿದೆ. ಇನ್ನು ಲಾಭ ಎಲ್ಲಿಂದ ಬಂತು? ಹೊಲದಲ್ಲಿ ಕೊಳೆತು ಬಿದ್ದಿರುವ ಈರುಳ್ಳಿ ನೇಗಿಲು ಹೊಡೆದು ಮುಚ್ಚಲು ಎಕರೆಗೆ ಮೂರ್ನಾಲ್ಕು ಸಾವಿರ ರೂ. ಖರ್ಚು ಮಾಡಬೇಕಿದೆ. ಇದರಿಂದ ಈರುಳ್ಳಿ ಈ ವರ್ಷ ಕಣ್ಣೀರು ಸುರಿಸುವಂತೆ ಮಾಡಿದೆ ಎಂದು ಈರುಳ್ಳಿ ಬೆಳೆಗಾರ ಸುರೇಶ ಯಳ್ಳಿಗುತ್ತಿ ಹೇಳುತ್ತಾರೆ.

    ಉಳ್ಳಾಗಡ್ಡಿ ಸಂಪೂರ್ಣ ನಾಶವಾಗಿದೆ. ಒಂದು ಎಕರೆಗೆ ಒಂದು ಮೂಟೆ ಸಹ ಈರುಳ್ಳಿ ಬರಲ್ಲ. ಒಂದೇ ರೂ. ಸಹ ರೈತರಿಗೆ ಬರಲ್ಲ. ಹೆಕ್ಟೇರ್ ಗಟ್ಟಲೇ ಈರುಳ್ಳಿ ಬೆಳೆದಿದ್ದರೂ ಎಲ್ಲವೂ ಹಾಳಾಗಿದ್ದರಿಂದ ಮನೆಯಲ್ಲಿ ಬಳಕೆ ಮಾಡಲು ಮಾರುಕಟ್ಟೆಯಲ್ಲಿ ದುಭಾರಿ ಬೆಲೆ ಕೊಟ್ಟು ಖರೀದಿ ಮಾಡಬೇಕಿದೆ. ಒಟ್ಟಾರೆ, ರೈತರಿಗೆ ಏನಂದರೆ ಏನೂ ಉಳಿದಿಲ್ಲ. ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ.
    ರಂಗಣ್ಣ ಬೆಣ್ಣೂರ, ಪಾಂಡುರಂಗ ಸಣ್ಣಪ್ಪನವರ, ಬೆನಕಟ್ಟಿ ಗ್ರಾಮದ ಈರುಳ್ಳಿ ಬೆಳೆಗಾರರು

    ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹ ಮತ್ತು ಅತೀವೃಷ್ಟಿಯಿಂದ ಶೇ.100 ರಷ್ಟು ಈರುಳ್ಳಿ ಹಾನಿಯಾಗಿದೆ. ಜಿಲ್ಲೆಯಲ್ಲಿ 40 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಆಗಿತ್ತು. ಅತೀವೃಷ್ಟಿಯಿಂದಾಗಿ 39041 ಹೆಕ್ಟರ್ ಬೆಳೆನಾಶವಾಗಿದೆ.
    – ರಾಹುಲ್ಕುಮಾರ ಬಾವಿದೊಡ್ಡಿ ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ ಬಾಗಲಕೋಟೆ

    ಉಳ್ಳಾಗಡ್ಡಿ ಕಟ್ ಮಾಡಿದ್ರ ಕಣ್ಣಾಗ ನೀರು ಬರ್ತಿತ್ತು. ಈಗ ಬೆಲೆ ಕೇಳಿದ್ರೇನೆ ಕಣ್ಣಾಗ ನೀರು ಬರ್ತೈತಿ. ನೂರು ರೂಪಾಯಿಗೆ ಕೆಜಿ ಅಂದ್ರೆ ಬಡವರು ಏನು ಮಾಡಬೇಕು? ಹೋಗ್ಲಿ ಇದರ ಲಾಭ ರೈತರಿಗಾದ್ರೂ ಸಿಗುತ್ತಾ? ಅದು ಇಲ್ಲ. ಕೆಜಿ, ಎರಡು ಕೆಜಿ ಅಂತ ಖರೀದಿ ಮಾಡ್ತಿದ್ದ ಉಳ್ಳಾಗಡ್ಡಿನ ಈಗ ಪಾವ್ ಕೆಜಿ, ಅರ್ಧ ಕೆಜಿ ತಗೊಂಡು ಮಾಡ್ಬೇಕಾಗೈತಿ. ಉಳ್ಳಾಗಡ್ಡಿ ಇಲ್ಲಂದ್ರ ಅಡುಗೆ ರುಚಿನೇ ಆಗಲ್ಲ.
    -ಶಾಂತಾಬಾಯಿ, ತರಕಾರಿ ಮಾರುಕಟ್ಟೆಯಲ್ಲಿ ಈರುಳ್ಳಿ ಖರೀದಿಗೆ ಮೀನ ಮೇಷ ಎಣಿಸುತ್ತ ನಿಂತಿದ್ದ ಮಹಿಳೆ)





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts