More

    ಡಿಸಿ ಕಚೇರಿ ಎದುರು ಕಲಾವಿದರ ಪ್ರತಿಭಟನೆ

    ಬಾಗಲಕೋಟೆ: ಜಿಲ್ಲೆಯ ನಾಟಕ, ಜಾನಪದ ಮನರಂಜನಾ ಕಾರ್ಯಕ್ರಮಗಳಿಗೆ ಅವಕಾಶ ನೀಡಿ ಕಲಾವಿದರಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಹವ್ಯಾಸಿ, ವೃತ್ತಿ ರಂಗಭೂಮಿ ಹಾಗೂ ಸರ್ವ ಜಾನಪದ ಕಲಾವಿದರ ಸಂಘದ ನೇತೃತ್ವದಲ್ಲಿ ಕಲಾವಿದರು ಜಿಲ್ಲಾಡಳಿತ ಭವನ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

    ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಕಲಾವಿದರು, ಜಿಲ್ಲಾಧಿಕಾರಿ ಕೆ.ರಾಜೇಂದ್ರ ಅವರಿಗೆ ಮನವಿ ಸಲ್ಲಿಸಿದರು.
    ಕೋವಿಡ್ ನಿಯಂತ್ರಣಕ್ಕಾಗಿ ಲಾಕ್‌ಡೌನ್ ವಿಧಿಸಿದ ಬಳಿಕ ಜಿಲ್ಲೆಯ ಕಲಾವಿದರ ಬದುಕು ತತ್ತರಿಸಿ ಹೋಗಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ 10 ತಿಂಗಳಿನಿಂದ ಕೆಲಸ ವಿಲ್ಲದೆ ಖಾಲಿ ಕುಳಿತುಕೊಂಡಿದ್ದೇವೆ. ಕೆಲವು ಕಲಾವಿದರು ತಮ್ಮ ಮಕ್ಕಳ ಶಾಲಾ ಶುಲ್ಕ ಪಾವತಿಸಲು ಸಾಧ್ಯವಾಗಿಲ್ಲ. ವಯಸ್ಸಾದ ತಂದೆ, ತಾಯಿಗಳಿಗೆ ಚಿಕಿತ್ಸೆ ಕೊಡಿಸಲು ಆಗುತ್ತಿಲ್ಲ. ಕಲಾವಿದರ ಸಂಕಷ್ಟದ ಪರಿಸ್ಥಿತಿಯನ್ನು ಸರ್ಕಾರ ಹಾಗೂ ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕು ಎಂದು ಕಲಾವಿದರು ಮನವಿ ಮಾಡಿದರು.

    ಜಿಲ್ಲೆಯಲ್ಲಿ ಮದುವೆ, ರಾಜಕೀಯ ಪಕ್ಷಗಳ ಸಮಾವೇಶ ನಡೆಯುತ್ತಿವೆ. ಅಲ್ಲಿ ನೂರಾರು ಜನ ಭಾಗವಹಿಸುತ್ತಿದ್ದಾರೆ. ಅದಕ್ಕೆ ಯಾವುದೇ ನಿರ್ಬಂಧ ವಿಧಿಸುತ್ತಿಲ್ಲ. ನಾಟಕ, ಮನರಂಜನಾ ಕಾರ್ಯಕ್ರಮಗಳಿಗೆ ಮಾತ್ರ ಕೋವಿಡ್ ನಿಯಮ ವಿಧಿಸಿ ಅನುಮತಿ ನೀಡುತ್ತಿಲ್ಲ ಎಂದು ದೂರಿದರು.

    ಮುಖಂಡರಾದ ಲಕ್ಷ್ಮೀ ತಳಗೇರಿ, ನಾಗರತ್ನ ಜಮಖಂಡಿ, ಗೀತಾರಾಣಿ ಚಿಮ್ಮಲಗಿ, ರೇಣುಕಾ ಕಮತ, ಪ್ರೇಮಿಳಾ ಚಿಮ್ಮಲಗಿ, ಅನ್ನಪೂರ್ಣ ಜಮಖಂಡಿ, ರೇಣುಕಾ ಚಿಮ್ಮಲಗಿ ಇತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts