More

    ವೈದ್ಯರು ಮನುಕುಲದ ಮಿತ್ರರು

    ಬಾಗಲಕೋಟೆ: ಸಮಾಜದಲ್ಲಿ ವೈದ್ಯರನ್ನು ದೇವರಂತೆ ಕಾಣಲಾಗುತ್ತದೆ. ವೈದ್ಯರಾಗುವ ಯೋಗ ಎಲ್ಲರಿಗೂ ಬರುವುದಿಲ್ಲ. ಇದು ದೇವರು ನೀಡಿದ ಅವಕಾಶ ಅಂತ ಭಾವಿಸಿ ರೋಗಿಯ ಸೇವೆಯಲ್ಲಿ ತೃಪ್ತಿ ಕಾಣಬೇಕು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

    ಭಾರತೀಯ ವೈದ್ಯಕೀಯ ಮಂಡಳಿ 2020-21ನೇ ಶೈಕ್ಷಣಿಕ ವರ್ಷದಿಂದ 150 ರಿಂದ 250ಕ್ಕೆ ವಿದ್ಯಾರ್ಥಿಗಳ ಪ್ರವೇಶ ಅನುಮತಿ ನೀಡಿದ ಹಿನ್ನೆಲೆ ನಗರದ ಬಿವಿವಿ ಸಂಘದ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶತಾಬ್ದಿ ಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಅಭಿನಂದನೆ ಹಾಗೂ ಆಶೀರ್ವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ವೈದ್ಯರ ಮನಸ್ಸಿನಲ್ಲಿ ಆರೋಗ್ಯವಂತ ಜಗತ್ತು ನಿರ್ಮಾಣವಾಗಬೇಕು. ರೋಗಿಯನ್ನು ದೇವರ ಸ್ವರೂಪದಲ್ಲಿ ಕಂಡು ಚಿಕಿತ್ಸೆ ನೀಡಬೇಕು. ರೋಗಿ ನೀಡುವ ಹಣ ಮುಖ್ಯವಲ್ಲ. ಆ ಸಂಪತ್ತು ಕೊನೆವರೆಗೂ ಉಳಿಯುವುದಿಲ್ಲ. ಆತನ ಮುಖದಲ್ಲಿ ಕಾಣುವ ಮಂದಹಾಸ ಸೇವಾ ತೃಪ್ತಿ ನೀಡುತ್ತದೆ. ವೈದ್ಯರಿಗೆ ರೋಗ ಗುಣಮುಖ ಮಾಡುವ ಶಕ್ತಿ ದೇವರು ಕೊಟ್ಟಿದ್ದಾನೆ. ಇದು ನಿಜವಾದ ಸೌಭಾಗ್ಯ, ಸಂಪತ್ತು ಎಂದು ಬಣ್ಣಿಸಿದರು.

    ಮನೆ ಕಟ್ಟುವವರು ಸಾವಿರಾರು ಜನ ಸಿಗುತ್ತಾರೆ. ಕೆಟ್ಟು ಹೋದ ದೇಹವನ್ನು ದುರಸ್ತಿಗೊಳಿಸುವವರು ಸಿಗುವುದು ಅಪರೂಪ. ಮನುಷ್ಯ ಅನಾರೋಗ್ಯಕ್ಕೆ ಒಳಗಾದರೆ ದೇವರು, ಕುಟುಂಬಸ್ಥರು ನೆನಪಿಸಿಕೊಳ್ಳುವುದಿಲ್ಲ. ಮೊದಲು ವೈದ್ಯರನ್ನು ಸ್ಮರಿಸುತ್ತಾನೆ. ನಾವು(ವೈದ್ಯರು) ಭಿಕ್ಷಾಟನೆ ಮಾಡುತ್ತಿಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ರೋಗಿಯ ಹೃದಯ ಗೆಲ್ಲುವ ಮನಸ್ಸು ಮಾಡಬೇಕು. ರೋಗ ಗುಣಪಡಿಸುವ ಪವಿತ್ರ ಕಾರ್ಯದ ಗೌರವ ಹೆಚ್ಚಿಸಬೇಕು ಎಂದು ವೈದ್ಯರಿಗೆ ಸಲಹೆ ನೀಡಿದ ಅವರು, ಬಿವಿವಿ ಸಂಘದ ಸೇವೆ, ಬೆಳವಣಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ವೈದ್ಯರು ರೋಗಿಗಳಿಗೆ ಉತ್ತಮ ಸೇವೆ ನೀಡಬೇಕು. ಹಣದ ವ್ಯಾಮೋಹದಿಂದ ದೂರವಾಗಬೇಕು. ಎಲ್ಲರಿಗೂ ಸೇವಾ ಭಾಗ್ಯ ಸಿಗುವುದಿಲ್ಲ. ನಿಮಗೆ ದೊರೆತಿದೆ. ಅದರ ಸದ್ಬಳಕೆಯಾಗಬೇಕು. ಸಂಘದಿಂದ ಹೋಮಿಯೋಪಥಿ, ಫಿಜಿಯೋಥೆರಪಿ ಕಾಲೇಜು ಆರಂಭಿಸಲಾಗಿದೆ. ಸದ್ಯದಲ್ಲಿ ಬೆಂಗಳೂರಿನಲ್ಲಿ ಮೆಡಿಕಲ್ ಕಾಲೇಜು ಆರಂಭಿಸಲಾಗುವುದು. ಉತ್ತರ ಕರ್ನಾಟಕ ಭಾಗದಲ್ಲಿ ವೈದ್ಯಕೀಯ ಸೇವೆ ದುರ್ಲಬ ಎನ್ನುವ ಕಳಂಕವನ್ನು ನಮ್ಮ ಆಸ್ಪತ್ರೆ ದೂರ ಮಾಡಬೇಕು ಎಂದರು.

    ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರು, ಸಿಬ್ಬಂದಿ ವರ್ಗವನ್ನು ಸನ್ಮಾನಿಸಲಾಯಿತು. ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಸಿದ್ದಣ್ಣ ಶೆಟ್ಟರ, ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಆಡಳಿತ ಅಧಿಕಾರಿ ಎನ್.ಜಿ. ಕರೂರ, ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅಶೋಕ ಮಲ್ಲಾಪೂರ ಉಪಸ್ಥಿತರಿದ್ದರು.

    ಭಾವುಕರಾದ ಶಾಸಕ ಚರಂತಿಮಠ
    ಸಂಘದ ಕಾರ್ಯಾಧ್ಯಕ್ಷ, ಡಾ. ವೀರಣ್ಣ ಚರಂತಿಮಠ ಮಾತನಾಡಿ, ಸಂಘದ ಅಧಿಕಾರ ವಹಿಸಿಕೊಳ್ಳುವಾಗ ಕೇವಲ ನನಗೆ 30 ವರ್ಷ. ತಂದೆ ವಯಸ್ಸಿನವರು ಸಂಘದ ಸದಸ್ಯರಾಗಿದ್ದರು. ವಿಶ್ವಾಸವಿಟ್ಟು ಜವಾಬ್ದಾರಿ ವಹಿಸಿದರು. ಆರಂಭದಲ್ಲಿ ಕೆಲವರು ಅಪಹಾಸ್ಯ ಮಾಡಿದರು. ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ಅದನ್ನೇ ಸವಾಲಾಗಿ ಸ್ವೀಕರಿಸಿದೆ. ಪ್ರತಿಯೊಂದು ಕೆಲಸ ಮಾಡುವಾಗ ಯಾರೂ ಇಲ್ಲದ ಸಮಯದಲ್ಲಿ ಬೀಳೂರು ಗುರುಬಸವ ಶ್ರೀಗಳ ಮತ್ತು ಕಣವಿ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಸಂಕಲ್ಪ ತೊಡುತ್ತೇನೆ. ಅದೇನೋ ಗೊತ್ತಿಲ್ಲ. ಎಂತಹ ಕಠಿಣ ಸಂದರ್ಭ ಬಂದರೂ ಎಲ್ಲವನ್ನೂ ಧೈರ್ಯದಿಂದ ಎದುರಿಸುವ ಶಕ್ತಿ ದೇವರು ನೀಡುತ್ತಾನೆ. ಜತೆಗಾರರ ಸಂಘಟಿತ ಪ್ರಯತ್ನದಿಂದ ಸಂಘವು ದೊಡ್ಡ ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು. ನನಗೆ ಬಂದ ಕಷ್ಟ ಯಾರಿಗೂ ಬರಬಾರದು ಎಂದು ತಾವು ನಡೆದು ಬಂದ ದಾರಿ ಮೆಲಕು ಹಾಕುತ್ತಾ ಭಾವುಕರಾದರು. ಕಣ್ಣಾಲೆಗಳು ತೇವಗೊಂಡವು.

    ಬಿವಿವಿ ಸಂಘದಿಂದ ವೈದ್ಯಕೀಯ ಕಾಲೇಜು ಮಾಡುವ ಕನಸು ಬಹುದಿನಗಳಿಂದ ಇತ್ತು. ಅದು ಸಾಕಾರಗೊಂಡಿರಲಿಲ್ಲ. 2002ರಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವಾಗ ಸಂಘದ ಖಾತೆಯಲ್ಲಿ 1 ಲಕ್ಷ ರೂ. ಕೂಡ ಇರಲಿಲ್ಲ. ಕೇವಲ 16 ವರ್ಷದಲ್ಲಿ 250 ವರೆಗೆ ವಿದ್ಯಾರ್ಥಿಗಳ ಪ್ರವೇಶ ಅನುಮತಿ ದೊರೆತಿದೆ. ಇದರ ಹಿಂದೆ ಆಡಳಿತ ಮಂಡಳಿ ಸದಸ್ಯರು, ಕಾಲೇಜಿನ ಸಿಬ್ಬಂದಿ ವರ್ಗದ ಪಾತ್ರ ದೊಡ್ಡದಿದೆ. 1100 ಹಾಸಿಗೆಯ ಕುಮಾರೇಶ್ವರ ಆಸ್ಪತ್ರೆಯಲ್ಲಿ ಮುಂದಿನ ಯುಗಾದಿ ಹಬ್ಬದಿಂದ ನಿರಂತರವಾಗಿ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ.
    ವೀರಣ್ಣ ಚರಂತಿಮಠ ಶಾಸಕ ಬಾಗಲಕೋಟೆ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts