More

    ಡಿಸಿಸಿ ಚುನಾವಣೆ ಡಾ.ದಡ್ಡೇನವರ ಅಖಾಡಕ್ಕೆ

    ಬಾಗಲಕೋಟೆ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯು ಕೋಟೆನಾಡಿನಲ್ಲಿ ರಂಗು ಪಡೆದುಕೊಂಡಿದ್ದು, ಎಲ್ಲ ನೇಕಾರರ ಸಹಕಾರ ಸಂಘಗಳ ಮತಕ್ಷೇತ್ರಕ್ಕೆ ಹಾಲಿ ನಿರ್ದೇಶಕ ಡಾ.ಎಂ.ಎಸ್.ದಡ್ಡೇನವರ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಉಮೇದುವಾರಿಕೆ ಸಲ್ಲಿಕೆ ಮಾಡಿದರು.

    ನವನಗರದ ಪಂಜುರ್ಲಿ ಹೊಟೇಲ್‌ದಿಂದ ಬೆಂಬಲಿಗರು, ಹಿತೈಶಿಗಳೊಂದಿಗೆ ಮೆರವಣಿಗೆ ಮೂಲಕ ಆಗಮಿಸಿದ ಡಾ.ಎಂ.ಎಸ್.ದಡ್ಡೇನವರ ಚುನಾವಣೆ ಅಧಿಕಾರಿ ಎಂ.ಗಂಗಪ್ಪ ಅವರಿಗೆ ನಾಮಪತ್ರ ಸಲ್ಲಿಸಿದರು. ತನ್ಮೂಲಕ ಪ್ರತಿ ಸ್ಪರ್ಧಿಗಳಿಗೆ ರಣವೀಳ್ಯ ನೀಡಿದರು. ಮೆರವಣಿಗೆ ವೇಳೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಬೆಂಬಲಿಗರು, ಕಾರ್ಯಕರ್ತರು ಡಾ.ದಡ್ಡೇನವರ ಅವರಿಗೆ ಜಯವಾಗಲಿ, ನೇಕಾರರ ನೇತಾರ, ಜೈ ಜೈ ನೇಕಾರ ಹೀಗೆ ನಾನಾ ರೀತಿಯ ಜಯಘೋಷಗಳು ಮೊಳಗಿದವು.

    ಡಿಸಿಸಿ ಬ್ಯಾಂಕ್ ಹಾಲಿ ಅಧ್ಯಕ್ಷ ಅಜಯಕುಮಾರ ಸರನಾಯಕ, ವಿಧಾನ ಪರಿಷತ್ತ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಮಾಜಿ ಸಚಿವರಾದ ಎಚ್.ವೈ.ಮೇಟಿ, ಉಮಾಶ್ರೀ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮುಖಂಡರಾದ ಮಲ್ಲಪ್ಪ ಭಾವಿಕಟ್ಟಿ, ರಾಜು ಬದ್ರೆನ್ನವರ, ಶಂಕರ ಜಾಲಿಗಿಡದ, ಈಶ್ವರ ಚನ್ನಕೇರಿ, ಪ್ರಕಾಶ ಮಂಡಿ, ಶಂಕರ ಸೋರಗಾಂವಿ, ರಾಜು ಧೂಪದ, ಬಾಬಣ್ಣ ಬಿ, ಕೃಷ್ಣಾ ರಾಮದುರ್ಗ, ನಾಗೇಶ ಹುಲ್ಲೂರ, ಶಂಕ್ರಣ್ಣ ಮಂಕಣಿ, ನಾಗರಾಜ ಹದ್ಲಿ ಹಾಗೂ ಕಮತಗಿ, ಅಮೀನಗಡ, ರಬಕವಿ-ಬನಹಟ್ಟಿ, ಜಮಖಂಡಿ ಸೇರಿದಂತೆ ಜಿಲ್ಲೆಯ ನಾನಾ ಭಾಗದ ನೇಕಾರ ಸಮುದಾಯದ ಮುಖಂಡರು, ನಾಯಕರು ಸಾಥ್ ನೀಡಿದ್ದು ವಿಶೇಷವಾಗಿ ಗಮನ ಸೆಳೆಯಿತು.

    ಈ ಸಂದರ್ಭದಲ್ಲಿ ಡಾ.ಎಂ.ಎಸ್.ದಡ್ಡೇನವರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ವೃತ್ತಿಯಲ್ಲಿ ವೈದ್ಯನಾಗಿದ್ದರು ಸಹ ನೇಕಾರರ ಕುಟುಂಬದಲ್ಲಿ ಜನಿಸಿದವರು. ಹೀಗಾಗಿ ನೇಕಾರರು ಕಷ್ಟ, ನೋವು ಹತ್ತಿರದಿಂದ ಅರಿತು ಕೊಂಡಿದ್ದೇನೆ. ಹೀಗಾಗಿ ಸಹಕಾರಿ ರಂಗ ಪ್ರವೇಶಿಸಿ ನೇಕಾರರನ್ನ ಆರ್ಥಿಕ, ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದ್ದೇನೆ. ಕಳೆದ ಬಾರಿ ಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿ ಸರ್ಕಾರ, ಸಹಕಾರಿ ರಂಗದಿಂದ ನೇಕಾರರಿಗೆ ಸಿಗಬೇಕಾದ ಸೌಲಭ್ಯ ದೊರೆಯಲು ವಿಶೇಷ ಒತ್ತು ನೀಡಿದೆ. ರೈತರಿಗೆ ಯಾವ ರೀತಿ ಸಬ್ಸಿಡಿ ದರದಲ್ಲಿ ಸಾಲ ದೊರೆಯುತ್ತದೆ ಹಾಗೇ ಜಿಲ್ಲೆಯ ನೇಕಾರರಿಗೆ ಶೇ.1 ಹಾಗೂ ಶೇ.3 ಬಡ್ಡಿ ದರದಲ್ಲಿ ಸಾಲ ಸರಳವಾಗಿ ಸಿಗುವಂತೆ ಮಾಡಿದ್ದೇನೆ. ಇದೀಗ ಮರು ಆಯ್ಕೆ ಬಯಸಿ ಸ್ಪರ್ಧೆ ಮಾಡುತ್ತಿದ್ದೇನೆ. ಎಲ್ಲ ನೇಕಾರರು ಸಂಘಗಳು ಪಕ್ಷಾತೀತವಾಗಿ ಬೆಂಬಲಿಸುವ ವಿಶ್ವಾಸವಿದೆ ಎಂದು ತಿಳಿಸಿದರು.

    ಈ ಸಾರಿ ಡಿಸಿಸಿ ಬ್ಯಾಂಕ್ ಚುನಾವಣೆ ಅಂತಹ ಪೈಪೋಟಿ ಏನು ಇಲ್ಲ. ಅರ್ಹ ಅಭ್ಯರ್ಥಿಗಳು ಅವಕಾಶ ಬಯಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದರಲ್ಲೇನು ವಿಶೇಷವಿಲ್ಲ. ಡಿಸಿಸಿ ಬ್ಯಾಂಕ್‌ನ 13 ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ ಎನ್ನುವುದು ನೂರಕ್ಕೆ ನೂರರಷ್ಟು ವಿಶ್ವಾಸವಿದೆ.
    – ಎಸ್.ಆರ್.ಪಾಟೀಲ, ವಿ.ಪಕ್ಷ ನಾಯಕ, ಡಿಸಿಸಿ ಬ್ಯಾಂಕ್ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts