More

    ಕರವೇ ದರ್ಪ ತೋರುವುದು ಸಲ್ಲ

    ಬಾಗಲಕೋಟೆ: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಬಾಗಲಕೋಟೆ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ಅಭಿವೃದ್ಧಿಗೆ ನೂರಾರು ಕೋಟಿ ರೂ. ಅನುದಾನ ತಂದಿದ್ದಾರೆ. ಮೆಡಿಕಲ್ ಕಾಲೇಜು ವಿಷಯ ಮುಂದಿಟ್ಟುಕೊಂಡು ಅವರ ಮೇಲೆ ಕರವೇ ದರ್ಪ ತೋರುತ್ತಿದೆ. ಇದು ಸರಿಯಲ್ಲ. ಹೀಗೆ ವರ್ತನೆ ಮುಂದುವರಿದಲ್ಲಿ ಬಿಜೆಪಿ ಕಾರ್ಯಕರ್ತರು ತಕ್ಕ ಉತ್ತರ ನೀಡುತ್ತಾರೆ ಎಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಎಸ್.ಟಿ. ಪಾಟೀಲ ಕರವೇ ಸಂಘಟನೆಗೆ ಎಚ್ಚರಿಕೆ ನೀಡಿದರು.

    ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಈಚೆಗೆ ನಡೆದ ಕಾರ್ಯಕ್ರಮದ ವೇಳೆ ಜಿಲ್ಲೆಗೆ ಘೋಷಣೆಯಾಗಿರುವ ಮೆಡಿಕಲ್ ಕಾಲೇಜು ಬಗ್ಗೆ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಲು ಬಂದಿದ್ದರು. ಶಾಂತ ಚಿತ್ತದಿಂದ ಡಿಸಿಎಂ ಗೋವಿಂದ ಕಾರಜೋಳ ಮನವಿ ಆಲಿಸಿ ಸ್ಪಂದಿಸಿದರು. ಆದರೆ, ಕರವೇ ಅಧ್ಯಕ್ಷ ರಮೇಶ ಬದ್ನೂರ ಸುಖಾಸುಮ್ಮನೇ ದರ್ಪದ ಮಾತುಗಳನ್ನು ಆಡಿ ಅಗೌರವ ತೋರಿದ್ದಾರೆ. ಮನವಿ ಸಲ್ಲಿಸುವುದು ತಪ್ಪಲ್ಲ. ಆದರೆ, ಧಮ್ಕಿ ಹಾಕುವ ರೀತಿಯಲ್ಲಿ ಮಾತಿನಶೈಲಿ ಒಪ್ಪುವಂತಹದಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

    ಜಿಲ್ಲೆಗೆ ತೋವಿವಿ ಸ್ಥಾಪನೆ ಮಾಡಲು, ಪದವಿ ಕಾಲೇಜು ಆರಂಭಿಸುವಲ್ಲಿ, ವಸತಿ ನಿಲಯಗಳು ನಿರ್ಮಿಸುವಲ್ಲಿ ಡಿಸಿಎಂ ಗೋವಿಂದ ಕಾರಜೋಳ ಪಾತ್ರ ದೊಡ್ಡದಿದೆ. ಸರ್ಕಾರಿ ಮೆಡಿಕಲ್ ಕಾಲೇಜು ಬಾಗಲಕೋಟೆಗೆ ಬರಬೇಕು ಎನ್ನುವುದು ಎಲ್ಲರ ಆಶಯ. ಇದು ಒಂದೇ ಕಾರಣಕ್ಕೆ ಅವರನ್ನು ಜಿಲ್ಲೆಗೆ ಕಾಲಿಡಲು ಬಿಡುವುದಿಲ್ಲ ಎನ್ನುವ ಹೇಳಿಕೆ ಸಲ್ಲ. ಬಿಜೆಪಿ ಬಗ್ಗೆಯೂ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

    ಸಿದ್ದರಾಮಯ್ಯ ಬಾದಾಮಿಗೆ ಏನು ಮಾಡಿಲ್ಲ
    ಬಾದಾಮಿ ಕ್ಷೇತ್ರಕ್ಕೆ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಏನೂ ಕೊಡುಗೆ ನೀಡಿಲ್ಲ. ತಾವೇ ಮುಖ್ಯಮಂತ್ರಿ ಇದ್ದಾಗ ಅನುದಾನ ನೀಡಲಿಲ್ಲ. ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗ ತಾವೇ ನೇತೃತ್ವ ವಹಿಸಿದ್ದರು. ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಾದಾಮಿ ಕ್ಷೇತ್ರಕ್ಕೆ ಕೋಟ್ಯಂತರ ರೂ. ಅನುದಾನ ಬಂದಿದೆ. ಅದರಿಂದ ಬಾದಾಮಿ ಅಭಿವೃದ್ಧಿ ಕಾಣುತ್ತಿದೆ. ಅತಿಥಿ ರೀತಿ ತಿಂಗಳಿಗೆ ಒಂದು ಸಾರಿ ಬಂದು ಹೋಗುವ ಸಿದ್ದರಾಮಯ್ಯ ಬಜೆಟ್ ಸಮೀಪಿಸುತ್ತಿದ್ದಂತೆ ಸಿಎಂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆಯುತ್ತಾರೆ ಎಂದು ವ್ಯಂಗ್ಯವಾಡಿದರು.

    ಸಂಸದ ಪಿ.ಸಿ. ಗದ್ದಿಗೌಡರ ಕ್ಷೇತ್ರದಲ್ಲಿ ಇದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ಭ್ರಷ್ಟಾಚಾರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಐಎಂಎ ಹಗರಣದಲ್ಲಿ ಅವರ ಆಪ್ತ 5 ಕೋಟಿ ರೂ. ತೆಗೆದುಕೊಂಡಿರುವುದು ಬಹಿರಂಗಗೊಂಡಿದೆ ಎಂದು ಟಾಂಗ್ ನೀಡಿದರು.

    ಬಿಜೆಪಿ ಮುಖಂಡರಾದ ರಾಜು ನಾಯ್ಕರ, ಯಲ್ಲಪ್ಪ ಬೆಂಡಿಗೇರಿ, ಸಂಗಮೇಶ ಹಿತ್ತಲಮನಿ, ಸಿ.ಟಿ.ಉಪಾಧ್ಯಾಯ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಶ್ರೀರಾಮಲುರನ್ನು ಸೋಲಿಸಿಲ್ಲ
    ಬಾದಾಮಿ ಕ್ಷೇತ್ರದಲ್ಲಿ ಶ್ರೀರಾಮುಲು ಅವರನ್ನು ಸೋಲಿಸಲು ಬಿಜೆಪಿ ನಾಯಕರು ಕಾರಣರಲ್ಲ. ಅವರ ಗೆಲುವಿಗೆ ಶ್ರಮಿಸಿದ್ದರಿಂದಲೇ ಅಲ್ಪಮತಗಳ ಅಂತರದಿಂದ ಸಿದ್ದರಾಮಯ್ಯ ಗೆದ್ದರು. ಯಾಕೆ ಹೀಗೆ ಹೇಳಿಕೆ ನೀಡಿದರು ಅಂತ ಅವರೊಂದಿಗೆ ಚರ್ಚೆ ನಡೆಸಲಿದ್ದೇನೆ ಎಂದು ಎಸ್.ಟಿ.ಪಾಟೀಲ ಹೇಳಿದರು.

    ಜಿಲ್ಲೆಯ ಅಭಿವೃದ್ಧಿಗೆ ಡಿಸಿಎಂ ಗೋವಿಂದ ಕಾರಜೋಳ ಕೋಟ್ಯಂತರ ರೂ. ಅನುದಾನ ತಂದಿದ್ದಾರೆ. ಅದರ ಬಗ್ಗೆ ನೆನೆಯುವುದನ್ನು ಬಿಟ್ಟು ಕರವೇ ಧಮ್ಕಿ ಹಾಕಲು ಮುಂದಾಗುವುದು ಸರಿಯಲ್ಲ. ದಲಿತ ವ್ಯಕ್ತಿಯೊಬ್ಬರೂ ಡಿಸಿಎಂ ಆಗಿದ್ದಾರೆ ಎನ್ನುವ ಕಾರಣಕ್ಕೆ ಈ ರೀತಿ ಕೀಳುಮಟ್ಟದಿಂದ ನಡೆದುಕೊಳ್ಳಬಾರದು. ಡಿಸಿಎಂ ಗೋವಿಂದ ಕಾರಜೋಳ ಅವರನ್ನು ಹೇಗೆ ತಡೆ ಹಿಡಿಯುತ್ತೀರಿ ನೋಡೋಣ.
    ಶಿವಾನಂದ ಟವಳಿ ಬಿಟಿಡಿಎ ಸದಸ್ಯ



    ಕರವೇ ದರ್ಪ ತೋರುವುದು ಸಲ್ಲ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts