More

    ಕ್ರೀಡಾಕೂಟಕ್ಕೆ ಕೋಟೆನಗರಿ ಸಜ್ಜು

    ಸಂತೋಷ ದೇಶಪಾಂಡೆ
    ಬಾಗಲಕೋಟೆ: ತಾಂತ್ರಿಕ ಶಿಕ್ಷಣ ಇಲಾಖೆ, ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಹಾಗೂ ಬಾಗಲಕೋಟೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಹಯೋಗದಲ್ಲಿ 43ನೇ ರಾಜ್ಯಮಟ್ಟದ ಅಂತರ ಪಾಲಿಟೆಕ್ನಿಕ್ ಕ್ರೀಡಾಕೂಟ ಫೆ. 2, 3 ರಂದು ಜರುಗಲಿದ್ದು, ಕ್ರೀಡಾಕೂಟಕ್ಕಾಗಿ ನವನಗರದ ಜಿಲ್ಲಾ ಕ್ರೀಡಾಂಗಣ ಸಜ್ಜುಗೊಂಡಿದೆ. 1998ರಲ್ಲಿ ಬಾಗಲಕೋಟೆ ನಗರದ ಬಿವಿವಿ ಸಂಘದ ಪಾಲಿಟೆಕ್ನಿಕ್ ಕ್ರೀಡಾಕೂಟ ನೇತೃತ್ವ ವಹಿಸಿತ್ತು. ಎರಡು ದಶಕಗಳ ಬಳಿಕ ಬಾಗಲಕೋಟೆ ನಗರ ಆತಿಥ್ಯ ವಹಿಸಿಕೊಂಡಿದೆ.

    ಎರಡು ದಿನ ನಡೆಯುವ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ನಡೆಸಲು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪೂರ್ವ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾ ಕ್ರೀಡಾಂಗಣವನ್ನು ಮಧುವಣಗಿತ್ತಿಯಂತೆ ಅಲಂಕರಿಸಲಾಗಿದೆ. ಭಾನುವಾರ ಬೆಳಗ್ಗೆ 7 ಗಂಟೆಗೆ ಕ್ರೀಡಾಕೂಟ ಆರಂಭಗೊಳ್ಳಲಿದೆ.

    1057 ಕ್ರೀಡಾಪಟುಗಳು ಭಾಗಿ
    ರಾಜ್ಯದ ವಿವಿಧ ಜಿಲ್ಲೆಗಳಿಂದ 53 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, 18 ಅನುದಾನಿತ ಪಾಲಿಟೆಕ್ನಿಕ್ ಕಾಲೇಜು, 14 ಖಾಸಗಿ ಪಾಲಿಟೆಕ್ನಿಕ್ ಕಾಲೇಜುಗಳ 757 ಪುರುಷ, 290 ಮಹಿಳೆಯರು ಹಾಗೂ 10 ಅಂಗವಿಕಲರು ಸೇರಿ 1057 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 112 ಸಿಬ್ಬಂದಿಯನ್ನು ಕ್ರೀಡಾಕೂಟಕ್ಕೆ ನಿಯೋಜಿಸಲಾಗಿದೆ. 60 ದೈಹಿಕ ಶಿಕ್ಷಣ ಶಿಕ್ಷಕರು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.

    ಫೆ.2 ರಂದು ಬೆಳಗ್ಗೆ 10 ಗಂಟೆಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಉದ್ಘಾಟಿಸುವರು. ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸುವರು. ವಿಪಕ್ಷ ನಾಯಕ ಎಸ್.ಆರ್. ಪಾಟೀಲ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಸೇರಿ ಜಿಲ್ಲೆ ಶಾಸಕರು, ವಿಧಾನ ಪರಿಷತ್ ಸದಸ್ಯರು ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ.

    ಉತ್ತರ ಕರ್ನಾಟಕದ ಖಾದ್ಯ
    ಕ್ರೀಡಾಪಟುಗಳಿಗೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ 3 ಹಾಸ್ಟೆಲ್, ನವನಗರದ ಆರ್‌ಎಂಎಸ್ ಶಾಲೆ, ಎಪಿಎಂಸಿ ಆವರಣದಲ್ಲಿರುವ ಕೃಷಿ ಭವನದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಕ್ರೀಡಾಂಗಣಕ್ಕೆ ಕರೆ ತರಲು ವಾಹನ ವ್ಯವಸ್ಥೆ ಮಾಡಲಾಗಿದೆ. ಇನ್ನು ಬೆಂಗಳೂರು, ಮಂಗಳೂರು, ಮಡಿಕೇರಿ ಸೇರಿ ರಾಜ್ಯದ ವಿವಿಧ ಪ್ರದೇಶಗಳಿಂದ ಬರುವ ಕ್ರೀಡಾಪಟುಗಳಿಗೆ ಶೇಂಗಾ ಚಟ್ನಿ, ಗುರೆಳ್ಳು ಹಿಂಡಿ, ಬದನೆಕಾಯಿ ಪಲ್ಲೆ, ಗೋಧಿ ಹುಗ್ಗಿ, ಖಡಕ್ ರೊಟ್ಟಿ, ಚಪಾತಿ ಸೇರಿ ಉತ್ತರ ಕರ್ನಾಟಕ ಖಾದ್ಯ ಉಣಬಡಿಸಲಾಗುತ್ತಿದೆ.

    ಗೆದ್ದವರಿಗೆ ಬಹುಮಾನ
    100, 200, 400, 800, 1500 ಮೀಟರ್ ಓಟ, 4*100 ಮೀಟರ್ ರಿಲೆ, ಉದ್ದ ಜಿಗಿತ, ಎತ್ತರ ಜಿಗಿತ, ಜಾವಲೀನ್ ಥ್ರೋ, ಶಾಟ್‌ಪುಟ್, 3 ಕಿ.ಮೀ. ರೋಡ್ ರೇಸ್, ಚೆಸ್, ಟೆಬಲ್ ಟೆನ್ನಿಸ್ ಸೇರಿ ಪುರುಷರಿಗೆ 17 ಹಾಗೂ ಮಹಿಳೆಯರಿಗೆ 16 ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ಕ್ರೀಡೆಯಲ್ಲಿ ಪ್ರಥಮ ಸ್ಥಾನಕ್ಕೆ ಚಿನ್ನ, ದ್ವಿತೀಯ ಸ್ಥಾನಕ್ಕೆ ಬೆಳ್ಳಿ, ತೃತೀಯ ಸ್ಥಾನಕ್ಕೆ ಕಂಚಿನ ಪದಕ ಹಾಗೂ ಪ್ರಶಸ್ತಿ ನೀಡಲಾಗುತ್ತದೆ. ಉತ್ತಮ ಪ್ರದರ್ಶನ ನೀಡಿ ಹೆಚ್ಚು ಪದಕ ಪಡೆದ ಕಾಲೇಜಿಗೆ ಚಾಂಪಿಯನ್ ಪಟ್ಟ ಪ್ರಶಸ್ತಿ ಕೊಡಮಾಡಲಾಗುತ್ತದೆ.

    ಅಂಗವಿಕಲರಿಗೆ ವಿಶೇಷ ಕ್ರೀಡೆ
    ಅಂಗವಿಕಲರಿಗಾಗಿ ಪ್ರತ್ಯೇಕ ಕ್ರೀಡೆಗಳನ್ನು ಆಯೋಜನೆ ಮಾಡಿರುವುದು ವಿಶೇಷವಾಗಿದೆ. 100 ಮೀಟರ್ ವ್ಹೀಲ್‌ಚೇರ್ ಓಟ, ಲಿಂಬೆಹಣ್ಣು ಚಮಚದಲ್ಲಿ ಇಟ್ಟುಕೊಂಡು 50 ಮೀಟರ್ ಓಡುವ ಸ್ಪರ್ಧೆ, ಶಾಟ್‌ಪುಟ್ ಸೇರಿ ನಾನಾ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ.

    ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಸಕಲ ರೀತಿಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಊಟ, ವಸತಿ, ಶಿಸ್ತು ಬದ್ಧವಾಗಿ ಕ್ರೀಡೆಗಳು ಜರುಗಲು ದೈಹಿಕ ಶಿಕ್ಷಕರನ್ನು ನೇಮಿಸಲಾಗಿದೆ. ಎರಡು ದಶಕದ ಬಳಿಕ ಬಾಗಲಕೋಟೆಗೆ ಆತಿಥ್ಯ ವಹಿಸಲು ಅವಕಾಶ ಸಿಕ್ಕಿದ್ದು, ಖುಷಿ ತಂದಿದೆ. ಕಳೆದ ಸಾರಿ ಹಾಸನದಲ್ಲಿ ಜರುಗಿದ ಕ್ರೀಡಾಕೂಟದಲ್ಲಿ ಮಂಗಳೂರು ತಂಡ ಚಾಂಪಿಯನ್ ಪಟ್ಟ ಪಡೆದಿತ್ತು.
    ವಿ.ಬಿ. ಕಂಚಿ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ




    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts