More

    ದೇಶದಲ್ಲಿ ಇನ್ನು 20 ವರ್ಷ ಮೋದಿ ಗ್ರಾಫ್ ಇಳಿಯಲ್ಲ

    ಬಾಗಲಕೋಟೆ: ದೆಹಲಿ ವಿಧಾನಸಭೆ ಫಲಿತಾಂಶದ ಬಳಿಕ ಪ್ರಧಾನಿ ನರೇಂದ್ರ ಮೋದಿ ಗ್ರಾಫ್ ಇಳಿಯುತ್ತಿದೆ ಎನ್ನುವ ವಿರೋಧಿಗಳ ಟೀಕೆಗೆ ಡಿಸಿಎಂ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.

    ಬಾಗಲಕೋಟೆಯಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ಗ್ರಾಫ್ ಇಳಿಯಲಿಕ್ಕೆ ಸಾಧ್ಯವಿಲ್ಲ. ದೇಶದಲ್ಲಿ ಇನ್ನು ಇಪ್ಪತ್ತು ವರ್ಷ ಮೋದಿ ಗ್ರಾಫ್ ಇದ್ದೆ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ದೆಹಲಿ ಒಂದು ಊರಿಗೆ ಸೀಮಿತವಾದ ಚುನಾವಣೆ. ಆಡಳಿತದಲ್ಲಿ ಜನಪ್ರಿಯ ಘೋಷಣೆ ಮಾಡಿದರು. ಅದಕ್ಕೆ ಆಕರ್ಷಿತರಾಗಿ ಜನ ಎಎಪಿಗೆ ಮತ ಕೊಟ್ಟಿದ್ದಾರೆ. ಮತ ಕೊಟ್ಟ ಜನರಿಗೆ ಮುಂದೆ ನಿರಾಶೆಯಾಗಲಿದೆ ಎಂದರು.

    ನಾವು ಯಾವುದೇ ರಾಜ್ಯದಲ್ಲಾಗಲಿ ಶಾಶ್ವತ ಯೋಜನೆಗಳನ್ನು ಜಾರಿಗೆ ತರಬೇಕು. ದುಡಿಯುವ ಕೈಗಳಿಗೆ ಅನುಕೂಲಕರ ಯೋಜನೆ ತರಬೇಕು. ಅದು ಬಿಟ್ಟು ವಿದ್ಯುತ್, ನೀರು, ಬಸ್ ಪ್ರಯಾಣಕ್ಕೆ ದುಡ್ಡು ತೆಗೆದುಕೊಳ್ಳಲ್ಲ ಎನ್ನುವುದು ಸರಿಯಲ್ಲ. ನಾವು ಜನರಿಂದ ಸಂಗ್ರಹ ಮಾಡಿದ ತೆರಿಗೆ ಹಣ ದೇಶಕ್ಕೆ ಆಸ್ತಿ ಆಗಬೇಕು. ಅಭಿವೃದ್ಧಿ ಆಗಬೇಕು. ಆ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂದು ತಿಳಿಸಿದ ಅವರು, ಈಗ ಚುನಾವಣೆ ಸಂದರ್ಭದಲ್ಲಿ ಕೆಲವರು ಹಣ ಕೊಟ್ಟು ಗೆದ್ದು ಬರುತ್ತಿದ್ದಾರೆ. ದೆಹಲಿಯಲ್ಲಿನ ಯೋಜನೆಗಳು ಅದೇ ರೀತಿಯಲ್ಲಿವೆ ಎಂದರು.

    ಬಿಜೆಪಿ ಒಂದೊಂದೆ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುತ್ತಿದೆ ಎನ್ನುವುದನ್ನು ಒಪ್ಪದ ಡಿಸಿಎಂ ಕಾರಜೋಳ, ನಾವು ಅಧಿಕಾರ ಎಲ್ಲೂ ಕಳೆದುಕೊಳ್ಳುತ್ತಿಲ್ಲ. ದೆಹಲಿ ನಮ್ಮ ಕೈಯಲ್ಲಿರಲಿಲ್ಲ. ಆಮ್ ಆದ್ಮಿ ಪಕ್ಷದ ಕೈಯಲ್ಲಿತ್ತು. ಅದನ್ನು ಉಳಿಸಿಕೊಂಡಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ನಮ್ಮ ಓಟ್ ಬ್ಯಾಂಕ್ ಉತ್ತಮಗೊಂಡಿದೆ ಎಂದು ಸಮರ್ಥಿಸಿಕೊಂಡರು.

    ಬಿಜೆಪಿ ಬರೀ ಧರ್ಮ, ಭಾವನಾತ್ಮಕ ವಿಚಾರ ಎತ್ತಿಕೊಂಡು ಚುನಾವಣೆ ಎದುರಿಸುತ್ತಿಲ್ಲ. ಮೋದಿ ಸರ್ಕಾರದ ಬಜೆಟ್ ನೋಡಿದರೆ ಗೊತ್ತಾಗುತ್ತದೆ. ದೇಶಕ್ಕೆ ಸ್ವತಂತ್ರೃ ಬಂದ ಮೇಲೆ ಅಭಿವೃದ್ಧಿ ಪರ ಇರುವ ಮೊಟ್ಟ ಮೊದಲ ಬಜೆಟ್ ಅದಾಗಿದೆ. ಎಸ್‌ಸಿ, ಎಸ್‌ಟಿ ಸಮುದಾಯ ಮೇಲೆತ್ತಲು ಮೋದಿ ಸರ್ಕಾರದಲ್ಲಿ 1.38 ಲಕ್ಷ ಕೋಟಿ ರೂ. ಬಜೆಟ್‌ನಲ್ಲಿ ಕೊಟ್ಟಿದ್ದಾರೆ. ಸುರಕ್ಷಿತ ನೀರಿಗಾಗಿ 3.68 ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದಾರೆ. ದೇಶದ ಭದ್ರತೆಗಾಗಿ 4.25 ಲಕ್ಷ ಕೋಟಿ ರೂ. ಇಟ್ಟಿದ್ದಾರೆ ಎಂದು ಅಂಕಿಅಂಶ ಹರವಿದರು.

    ಸಮಾಜ ಕಲ್ಯಾಣ ಇಲಾಖೆಗೆ ಕೇಂದ್ರದಿಂದ ಸೀಮಿತ ಹಣ ಬರುತ್ತದೆ. ನಮ್ಮ ಕೆಲ ಯೋಜನೆಗಳಿಗೆ ಕೇಂದ್ರದ ಪಾಲು ಬರುತ್ತದೆ. ಉಳಿದದ್ದನ್ನು ರಾಜ್ಯ ಸರ್ಕಾರದಿಂದಲೇ ಭರಿಸಬೇಕಾಗುತ್ತದೆ. ಹೀಗಾಗಿ ಕೇಂದ್ರದಿಂದ ಸಮಾಜ ಕಲ್ಯಾಣ ಇಲಾಖೆಗೆ ಈ ಬಜೆಟ್‌ನಲ್ಲಿ ಕಡಿಮೆ ಹಣ ಇಟ್ಟಿದ್ದಾರೆ ಎಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಅಲ್ಲಗಳೆದರು.

    ಬಂದ್ ಕೈಬಿಡಬಹುದು
    ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಗುರುವಾರ ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಸರ್ಕಾರದ ಸಂಬಂಧಪಟ್ಟ ಸಚಿವರು ಅವರೊಂದಿಗೆ ಚರ್ಚೆ ಮಾಡಿದ್ದಾರೆ. ಸರ್ಕಾರ ಯಾವೆಲ್ಲ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅವರಿಗೆ ವಿವರವಾಗಿ ಮಾಹಿತಿ ನೀಡಿದ್ದಾರೆ. ಹೀಗಾಗಿ ಬಂದ್ ಕೈಬಿಡಬಹದು ಎಂದು ಡಿಸಿಎಂ ಹೇಳಿದರು.

    ಬಿಜೆಪಿ ರಾಜ್ಯಗಳಲ್ಲಿ ಮೀಸಲಾತಿಗೆ ದಕ್ಕೆ ಇಲ್ಲ
    ಸರ್ಕಾರಿ ಉದ್ಯೋಗ ಹಾಗೂ ಬಡ್ತಿಯಲ್ಲಿ ಮೀಸಲಾತಿ ಹಕ್ಕಲ್ಲ. ಅದು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದ್ದು ಎನ್ನುವ ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವ ಎಲ್ಲ ರಾಜ್ಯಗಳಲ್ಲಿ ಮೀಸಲಾತಿಗೆ ದಕ್ಕೆ ಆಗಲ್ಲ ಎಂದು ಹೇಳಿದರು.

    ಮೀಸಲಾತಿ ವ್ಯವಸ್ಥೆ ಸಮಾಜದಲ್ಲಿ ತುಳಿತಕ್ಕೆ ಒಳಗಾದವರು, ಅಸ್ಪೃಶ್ಯತೆಯಿಂದ ಬಳಲುವವರನ್ನು ಮೇಲೆತ್ತಲು ತೆಗೆದುಕೊಂಡ ವ್ಯವಸ್ಥೆ ಆಗಿದೆ. ಆದರೆ, 2012 ರಲ್ಲಿ ಉತ್ತರಾಖಂಡ್‌ನಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದ ತಪ್ಪಿನಿಂದಾಗಿ ಇವತ್ತು ತೀರ್ಪು ಬರುವಂತಾಗಿದೆ. ಆದರೆ, ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ಮೀಸಲಾತಿಗೆ ಧಕ್ಕೆ ತರದಂತೆ ಕಾಪಾಡಿಕೊಂಡು ಹೋಗುತ್ತೇವೆ. ಎಲ್ಲಿವರೆಗೂ ಅಸ್ಪೃಶ್ಯತೆ, ಅಸಮಾನತೆ ಇರುತ್ತೆ ಅಲ್ಲಿವರೆಗೂ ಸಂವಿಧಾನದ ಅಶಯಕ್ಕನುಗುಣವಾಗಿ ಕೆಲಸ ಮಾಡುತ್ತೇವೆ ಎಂದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts