More

    ಪಕ್ಷ ಇರುತ್ತವೆ ಹೋಗುತ್ತವೆ ಸರ್ಕಾರ ಶಾಶ್ವತ..!

    ಬಾಗಲಕೋಟೆ: ಪಕ್ಷಗಳು ಅಧಿಕಾರಕ್ಕೆ ಬರುತ್ತವೆ, ಹೋಗುತ್ತವೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರ್ಕಾರ ಶಾಶ್ವತವಾಗಿ ಇರುತ್ತದೆ. ಜನ ಸೇವೆ, ಸರ್ಕಾರದ ಕೆಲಸಗಳು ನಿರಂತರವಾಗಿ ನಡೆಯುತ್ತವೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

    ಜಿಲ್ಲಾಡಳಿತ ಭವನದ ಆವರಣದಲ್ಲಿ ಶುಕ್ರವಾರ ನೂತನ ಜಿಲ್ಲಾ ಪಂಚಾಯಿತಿ ಸಭಾ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿ, ಸರ್ಕಾರದಲ್ಲಿ ಯಾರೂ ಕಾಯಂ ಇರುವುದಿಲ್ಲ. ಆಡಳಿತ ಮಾಡುವವರು ಬರುವುದು, ಹೋಗುವುದು ಇದ್ದೆ ಇರುತ್ತದೆ. ಅಧಿಕಾರದಲ್ಲಿದ್ದಾಗ ಉತ್ತಮ ಕೆಲಸಗಳು ಆಗಬೇಕು ಎಂದು ತಿಳಿಸಿದರು.

    ಆಡಳಿತ ಮಾಡುವವರು ತಮ್ಮ ಅಧಿಕಾರ ಅವಧಿಯಲ್ಲಿ ಹಾಕಿಕೊಂಡ ಕಾರ್ಯಕ್ರಮ ಪೂರ್ಣಗೊಳ್ಳದಿದ್ದಲ್ಲಿ ಮುಂದಿನವರು ಅದನ್ನು ಪೂರ್ಣಗೊಳಿಸುತ್ತಾರೆ. ಇದು ಸ್ವಾತಂತ್ರೃ ನಂತರ ನಡೆದು ಬಂದಿದೆ. ಈ ಹಿಂದಿನ ಅಧ್ಯಕ್ಷರು ಈ ಸಮಾರಂಭಕ್ಕೆ ಅಡಿಗಲ್ಲು ಹಾಕಿದ್ದರು. ಕಟ್ಟಡ ನಿರ್ಮಾಣ ಪೂರ್ಣಗೊಳ್ಳುವಲ್ಲಿ ಈಗಿನ ಜಿ.ಪಂ. ಅಧ್ಯಕ್ಷೆ ಬಾಯಕ್ಕ ಮೇಟಿ ಮತ್ತು ಸದಸ್ಯರು ಶ್ರಮಿಸಿದ್ದಾರೆ ಎಂದರು.

    ಜಿಲ್ಲೆಯಲ್ಲಿ ಸಭೆ ಮತ್ತು ಸಮಾರಂಭಗಳನ್ನು ನಡೆಸಲು ವಿಶಾಲವಾದ ಸಭಾ ಭವನದ ಕೊರತೆ ಇತ್ತು. ಇಂದು ಈ ನೂತನ ಸಭಾಭವನ ಆ ಕೊರತೆ ನೀಗಿಸಿದೆ. ಸುಂದರವಾಗಿ ಭವನ ನಿರ್ಮಿಸಲಾಗಿದೆ. ಅಂದಾಜು 4.67 ಕೋಟಿ ರೂ. ವ್ಯಯವಾಗಿದೆ. 200 ಆಸನಗಳ ವ್ಯವಸ್ಥೆ ಇದೆ. ವಿಧಾನಸೌಧ ಮಾದರಿಯಲ್ಲಿ ಸುತ್ತಲೂ ಗ್ಯಾಲರಿ ನಿರ್ಮಿಸಲಾಗಿದೆ. ಗುತ್ತಿಗೆ ಪಡೆದ ನಿರ್ಮಿತಿ ಕೇಂದ್ರವು ಉತ್ತಮವಾಗಿ ಕಾಮಗಾರಿ ನಡೆಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಜಿ.ಪಂ. ಅಧ್ಯಕ್ಷೆ ಬಾಯಕ್ಕ ಮೇಟಿ ಮಾತನಾಡಿ, ಜಿಲ್ಲಾ ಪಂಚಾಯಿತಿ ಸದಸ್ಯರ ಸಹಕಾರದಿಂದ ಸುಂದರವಾದ ಅಚ್ಚುಕಟ್ಟಾದ ಸಭಾ ಭವನ ನಿರ್ಮಾಣವಾಗಲು ಸಾಧ್ಯವಾಗಿದೆ. ನಿರ್ಮಿತಿ ಕೇಂದ್ರದವರು ಉತ್ತಮವಾದ ಸಭಾ ಭವನ ನಿರ್ಮಿಸಿದ್ದಾರೆ ಎಂದರು.

    ಜಿಪಂ ಸಿಇಒ ಟಿ. ಭೂಬಾಲನ್ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಜಿಪಂ ಕೆಡಿಪಿ ಸಭೆ, ಸಾಮಾನ್ಯ ಹಾಗೂ ಇತರ ಮಹತ್ವದ ಸಭೆ ನಡೆಸಲು ಸಭಾಭವನದ ತೊಂದರೆ ಇತ್ತು. ಒಂದು ವಿಶಾಲವಾದ ಸಭಾಂಗಣ ನಿರ್ಮಿಸಬೇಕೆಂಬ ಬಹಳ ದಿನಗಳ ಕನಸಾಗಿತ್ತು. ಆ ಕನಸು ಇಂದು ಸಾಕಾರಗೊಂಡಿದೆ. ಇದಕ್ಕೆ ಜಿಪಂ ಸದಸ್ಯರ ಸಹಕಾರ ಸ್ಮರಣೀಯ ಎಂದು ತಿಳಿಸಿದರು.

    ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಆನಂದ ನ್ಯಾಮಗೌಡ, ಜಿ.ಪಂ. ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ, ಜಿಲ್ಲಾಧಿಕಾರಿ ಕೆ. ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಸೇರಿ ಜಿಪಂ ಎಲ್ಲ ಸದಸ್ಯರು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

    ಉದ್ಘಾಟನೆ ವೇಳೆ ಹೈಡ್ರಾಮಾ
    ಉದ್ಘಾಟನೆ ಸಮಾರಂಭ ಆರಂಭದಲ್ಲಿಯೇ ಕಾಂಗ್ರೆಸ್ -ಬಿಜೆಪಿ ಹೈಡ್ರಾಮಾಗೆ ಕಾರಣವಾಯಿತು. ಜಿ.ಪಂ. ಸಭಾ ಭವನಕ್ಕೆ ಕಟ್ಟಡ ನಿರ್ಮಿಸಿದ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಜಿ.ಪಂ. ಅಧ್ಯಕ್ಷೆ ಬಾಯಕ್ಕ ಮೇಟಿ ಹಾಗೂ ಇತರ ಸದಸ್ಯರಿಗೆ ಆಹ್ವಾನವನ್ನೇ ನೀಡಿಲ್ಲ ಅಂತ ಜಿ.ಪಂ. ಅಧ್ಯಕ್ಷೆ ಬಾಯಕ್ಕ ಮೇಟಿ ಗರಂ ಆಗಿದ್ದರು. ಸಭಾ ಭವನ ಉದ್ಘಾಟನೆಗೆ ಡಿಸಿಎಂ ಗೋವಿಂದ ಕಾರಜೋಳ ಆಗಮಿಸುತ್ತಿದ್ದಂತೆ ಬಾಯಕ್ಕ ಮೇಟಿ ಆಕ್ರೋಶ ಹೊರ ಹಾಕಿದರು.

    ಕಾರಜೋಳ ಬಾಯಕ್ಕ ಮೇಟಿಗೆ ಹೂಗುಚ್ಛ ನೀಡಿ ಸ್ವಾಗತಕ್ಕೆ ಮುಂದಾದರು. ಆದರೆ, ಬಾಯಕ್ಕ ಮೇಟಿ ಹೂಗುಚ್ಛ ಸ್ವೀಕರಿಸದೆ ಕಾರಜೋಳ ಅವರನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮದು ಸರ್ಕಾರವಿದೆ ಎಂದು ಹೀಗೆ ಮಾಡೋದಾ? ನಮ್ಮ ಸಾಹೇಬರು ಸಿದ್ದರಾಮಯ್ಯ ಹೇಳಿದ್ದಾರೆ. ಯಾರು ಕಿರಿಕಿರಿ ಮಾಡ್ತಾರಾ ಹೇಳಿ. ಚುನಾವಣೆ ಸಮಯದಲ್ಲಿ ನಾಲ್ಕೈದು ದಿನ ಟೆಂಟ್ ಹಾಕಿ ಬರೋಬ್ಬರಿ ಮಾಡೋಣ ಅಂತ ಹೇಳಿದ್ದಾರೆ. ನಮ್ಮ ಬಗ್ಗೆ ನಿರ್ಲಕ್ಷೃ ಧೋರಣೆ ಸರಿಯಲ್ಲ ಅಂತ ಸಿಡಿಮಿಡಿಗೊಂಡರು. ಬಾಯಕ್ಕ ಮೇಟಿ ಸಮಾಧಾನಪಡಿಸಲು ಡಿಸಿಎಂ ಕಾರಜೋಳ ಹರಸಾಹಸ ಪಡಬೇಕಾಯಿತು. ಕೊನೆಗೆ ಬಾಯಕ್ಕ ಮೇಟಿ ಅವರಿಂದ ನಾಮಫಲಕ ಅನಾವರಣಗೊಳಿಸಲಾಯಿತು.

    ಇನ್ನು ಗಲಾಟೆ ನಡುವೆಯೂ ಡಿಸಿಎಂ ಗೋವಿಂದ ಕಾರಜೋಳ ಕೆಡಿಪಿ ಸಭೆ ನಡೆಸಲು ಒಳ ಹೋದರು. ಆಗ ಬಾಯಕ್ಕ ಮೇಟಿ ಹಾಗೂ ಕಾಂಗ್ರೆಸ್ ಜಿ.ಪಂ. ಸದಸ್ಯೆಯರು ನಾವು ಒಳಹೋಗೋದಿಲ್ಲ ಎಂದು ಪಟ್ಟು ಹಿಡಿದರು. ವಿಷಯ ಗೊತ್ತಾಗುತ್ತಿದ್ದಂತೆ ಜಿಪಂ ಬಿಜೆಪಿ ಸದಸ್ಯರಾದ ಹೂವಪ್ಪ ರಾಠೋಡ ಹಾಗೂ ಶಶಿಕಾಂತ ಪಾಟೀಲ ಮನವೊಲಿಸಿ ಬಾಯಕ್ಕ ಮೇಟಿ ಅವರ ಕೈ ಹಿಡಿದು ಕಾರ್ಯಕ್ರಮಕ್ಕೆ ಕರೆ ತಂದರು. ಬಳಿಕ ಸಮಾರಂಭದಲ್ಲಿ ಕಹಿ ಘಟನೆ ಮರೆತು ಎಲ್ಲ ನಾಯಕರು ಸನ್ಮಾನ ಸ್ವೀಕರಿಸಿದರು. ನಂತರ ಬಾಯಕ್ಕ ಮೇಟಿ ಮಾತನಾಡಿ, ನನ್ನಿಂದ ಕೆಲವು ತಪ್ಪು ಆಗಿದೆ. ಅದಕ್ಕೆ ಕ್ಷಮೆ ಇರಲಿ ಎಂದರು.

    ಈ ಬಗ್ಗೆ ಮಾತನಾಡಿದ ಡಿಸಿಎಂ ಕಾರಜೋಳ ಬಾಯಕ್ಕ ಮೇಟಿ ಬಗ್ಗೆ ಗಂಭೀರವಾಗಿ ವಿಚಾರಿಸುವ ಅಗತ್ಯವಿಲ್ಲ, ಅವಳು ಚೇಷ್ಟೆಯಿಂದ ಹಾಗೆಲ್ಲ ಮಾತಾಡಿದ್ದಾಳೆ ಎಂದು ನಗುತ್ತಲೇ ಘಟನೆಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

    ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಭವನ ನಿರ್ಮಿಸಲಾಗಿದೆ. ಆದರೆ, ನಮ್ಮನ್ನು ಕೇಳದೆ ಉದ್ಘಾಟನೆ ಇಟ್ಟುಕೊಂಡಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿ ನೂತನ ಸಭಾ ಭವನದಲ್ಲಿ ಮೊದಲು ಜಿಪಂ ಸಾಮಾನ್ಯ ಸಭೆ ಮಾಡಬೇಕು ಎನ್ನುವುದು ಸದಸ್ಯರ ಆಸೆ ಇತ್ತು. ಆದರೆ ಬೇರೆನೆ ನಡೆದಿದೆ.
    ಬಾಯಕ್ಕ ಮೇಟಿ ಜಿಪಂ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts