More

    ಡಿಸಿಸಿ ಬ್ಯಾಂಕ್ ಸೋಲಿಗೆ ಪಕ್ಷದವರೇ ಕಾರಣ..!

    ಬಾಗಲಕೋಟೆ: ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಬಾದಾಮಿ ಪಿಕೆಪಿಎಸ್ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹೀನಾಯವಾಗಿ ಸೋತಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿ ಹಾಗೂ ಅವರ ಬೆಂಬಲಿಗರು ಸೋಮವಾರ ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರ ಬಳಿಯಲ್ಲಿ ತಮ್ಮ ದೂರು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

    ಪರಾಜಿತ ಅಭ್ಯರ್ಥಿ ಡಾ. ಎಂ.ಜಿ. ಕಿತ್ತಲಿ ಹಾಗೂ ಹಿರಿಯರು ಮತ್ತು ಬೆಂಬಲಿಗರು ಬಾದಾಮಿ ಖಾಸಗಿ ಹೋಟೆಲ್ನಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚುನಾವಣೆಯಲ್ಲಿ ತಮ್ಮ ಪಕ್ಷದವರೇ ತೆರೆಯ ಹಿಂದೆ ಬೆಂಬಲಿಸದ ಬಗ್ಗೆ ಆರೋಪಿಸಿದರು ಎನ್ನಲಾಗಿದೆ.

    ಈ ವೇಳೆ ಕ್ಷೇತ್ರದ ಕೆಲ ಕಾಂಗ್ರೆಸ್ ಮುಖಂಡರು ಸಹ ಚುನಾವಣೆ ನಡೆದ ಬಗೆ ಬಗ್ಗೆ ಸಿದ್ದರಾಮಯ್ಯ ಅವರಿಗೆ ಪರಿಸ್ಥಿತಿ ವಿವರಿಸಿದ್ದು, ಮಾಜಿ ಸಿಎಂಗೆ ಅಚ್ಚರಿ ತಂದಿತ್ತು. ಚುನಾವಣೆಯಲ್ಲಿ ಹಣದ ಹರಿವು, ಘಟಾಘಟಾನುಗಳ ಸ್ಪರ್ಧೆ ಬಗ್ಗೆ ಇದೆಲ್ಲ ಬೇಕಿತ್ತಾ ಎನ್ನುವ ಅರ್ಥದಲ್ಲಿ ಮಾತನಾಡಿದರು.

    ಅಲ್ಲದೆ, ಬಿಜೆಪಿ ಬಂಡಾಯ ಅಭ್ಯರ್ಥಿ ಬಗ್ಗೆ ಒಲವು ವ್ಯಕ್ತವಾಗಿ, ಕೆಲ ಮತದಾರರು ಬಂಡಾಯ ಅಭ್ಯರ್ಥಿಗೆ ಮತ ಹಾಕಿರುವುದು, ಯಾವುದೇ ಹಂತದಲ್ಲೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧ್ಯ ಇರಲಿಲ್ಲ. ಹೀಗಾಗಿ ಬಿಜೆಪಿ ಅಭ್ಯರ್ಥಿ ಸೋಲಿಸುವುದು ಮುಖ್ಯ ಉದ್ದೇಶ ಆಗಿತ್ತು ಎಂದು ಸಿದ್ದರಾಮಯ್ಯ ಅವರಿಗೆ ವಿವರಿಸಿದರು ಎಂದು ತಿಳಿದು ಬಂದಿದೆ.

    ಇದಕ್ಕೂ ಮೊದಲು ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸಿ ಗೆದ್ದಿರುವ ಮಾಜಿ ಎಚ್.ವೈ. ಮೇಟಿ ಅವರಿಗೆ ಮಾಜಿ ಸಿಎಂ, ಇದೆಲ್ಲ ಬೇಕಾ? ಎಂದು ಪ್ರಶ್ನಿಸಿದ್ದರಂತೆ. ಬ್ಯಾಂಕ್ ಚುನಾವಣೆಗೆ ಕಾರ್ಯಕರ್ತರಿಗೆ ಅವಕಾಶ ಕೊಡಬೇಕು. ಮುಂದೆ ಹೀಗೆಲ್ಲ ಮಾಡಬೇಡಿ. ಇದು ಬರೀ ಬಾಗಲಕೋಟೆ ಮಾತ್ರವಲ್ಲ. ಬಹುತೇಕ ಕಡೆ ಹೀಗೆಯೇ ಆಗುತ್ತಿದೆ. ಎಲ್ಲ ಕಡೆಗೂ ಶಾಸಕರು, ಮಾಜಿ ಶಾಸಕರು ಬಂದರೆ ಕಾರ್ಯಕರ್ತರು ಏನು ಮಾಡಬೇಕು? ಈ ಬಗ್ಗೆ ಪಕ್ಷದ ಸಭೆಯಲ್ಲಿ ಮಾತನಾಡುತ್ತೇನೆ ಎಂದು ಹೇಳಿದ್ದಾಗಿ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

    ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ದು ಎಂಟ್ರಿ
    ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಾದಾಮಿ ಕಾಂಗ್ರೆಸ್ ಅಭ್ಯರ್ಥಿ ಸೋಲು ಒಂದು ಕಡೆಯಾದರೆ ಮತ್ತೊಂದು ಕಡೆಗೆ ಬಹುಮತ ಇದ್ದರೂ ಆಂತರಿಕ ಗೊಂದಲ ಉಂಟಾಗಿದ್ದ ಗುಳೇದಗುಡ್ಡ ಹಾಗೂ ಬಾದಾಮಿ ಪುರಸಭೆ ಅಧಿಕಾರ ಗದ್ದುಗೆ ಕೈ ತಪ್ಪದಂತೆ ಸ್ವತಃ ಸಿದ್ದರಾಮಯ್ಯ ಎಚ್ಚರಿಕೆ ವಹಿಸಿದ್ದಾರೆ. ಇದಕ್ಕಾಗಿಯೇ ಸ್ವತಃ ಸಿದ್ದರಾಮಯ್ಯ ಎರಡು ದಿನ ಬಾದಾಮಿಯಲ್ಲಿ ಬಿಡಾರ ಹೂಡಿದ್ದಾರೆ. ಸೋಮವಾರ ಗುಳೇದಗುಡ್ಡ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕಾಗಿ ಉಂಟಾಗಿದ್ದ ಆಂತರಿಕ ಕಲಹಕ್ಕೆ ತೆರೆ ಎಳೆದು ಅಧಿಕಾರ ಪಕ್ಷಕ್ಕೆ ಬರುವಂತೆ ಮಾಡಿದ್ದಾರೆ. ಸ್ವತಃ ಗುಳೇದಗುಡ್ಡ ಪುರಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಮಂಗಳವಾರ ಬಾದಾಮಿ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ನಡೆಯಲಿದ್ದು, ಆ ಚುನಾವಣೆ ಮುಗಿದ ಬಳಿಕ ಸಿದ್ದರಾಮಯ್ಯ ಬೆಂಗಳೂರಿಗೆ ತೆರಳಲಿದ್ದಾರೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts