More

    ಸರ್ಕಾರದ ಮಾರ್ಗಸೂಚಿ ಪಾಲಿಸಿ

    ಬಾಗಲಕೋಟೆ: ಕೋವಿಡ್ ಸೋಂಕು ವ್ಯಾಪಕವಾಗಿ ಹರಡಿದ ಹಿನ್ನೆಲೆ ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಕೋವಿಡ್ ಸೋಂಕು ನಿಯಂತ್ರಣಕ್ಕೆ ಸರ್ಕಾರ ಜವಾಬ್ದಾರಿಯಿಂದ ಕೆಲಸ ಮಾಡಿದೆ. ಶೀಘ್ರದಲ್ಲಿ ಅನ್‌ಲಾಕ್ ಆಗಲಿದೆ ಎಂದು ಬಿಟಿಡಿಎ, ಶಾಸಕ ವೀರಣ್ಣ ಚರಂತಿಮಠ ಹೇಳಿದರು.

    ಸೋಂಕು ನಿಯಂತ್ರಣಕ್ಕೆ ಸಾರ್ವಜನಿಕರು ಜವಾಬ್ದಾರಿಯಿಂದ ಸಹಕರಿಸಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿತ್ಯ ಮಾರುಕಟ್ಟೆಗೆ ತೆರಳುವುದು ಕಡಿಮೆಯಾಗಬೇಕು. ವಾರಕ್ಕೊಮ್ಮೆ ಮಾತ್ರ ಮಾರುಕಟ್ಟೆಗೆ ತೆರಳಿ ದಿನಸಿ, ತರಕಾರಿ ಖರೀದಿ ಮಾಡುವುದನ್ನು ರೂಢಿಸಿಕೊಳ್ಳಬೇಕು. ಮಾಸ್ಕ್, ಪರಸ್ಪರ ಅಂತರ ಕಡ್ಡಾಯ ಕಾಪಾಡಬೇಕು. ಮಾರುಕಟ್ಟೆಯಲ್ಲಿ ಜನಸಂದಣಿಯಾಗದಂತೆ ವ್ಯವಹಾರ ವಹಿವಾಟನ್ನು ವ್ಯಾಪಾರಸ್ಥರು ಆರಂಭಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕರೊನಾ ಮೊದಲ,ಎರಡನೇ ಅಲೆಗಳು ದೊಡ್ಡ ಪಾಠ ಕಲಿಸಿವೆ. ಮೂರನೇ ಅಲೆ ಬಗ್ಗೆ ಈಗಲೇ ಜಾಗೃತಿ ವಹಿಸಬೇಕು. ಇದರಿಂದ ಸೋಂಕಿನ ತೀವ್ರತೆ ಕಡಿಮೆ ಮಾಡಲು ಸಾಧ್ಯವಿದೆ. ಎಪಿಎಂಸಿ ಆವರಣದಲ್ಲಿರುವ ತರಕಾರಿ ಹರಾಜು ಪ್ರಕ್ರಿಯೆ ವೇಳೆ ಪರಸ್ಪರ ಅಂತರ ಕಾಪಾಡಿಕೊಳ್ಳುವುದು, ಜನ ದಟ್ಟಣೆ ಕಡಿಮೆ ಮಾಡುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಪ್ರತಿಯೊಬ್ಬರೂ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ಹೇಳಿದರು.

    ಬಿವಿವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಇದ್ದರು.

    15 ವರೆಗೆ ಮಾತ್ರ ಕೋವಿಡ್ ಆಸ್ಪತ್ರೆ
    ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆಯನ್ನು ಮಾ.29 ರಂದು ಕೋವಿಡ್ ಆಸ್ಪತ್ರೆಗೆ ಮಾರ್ಪಾಡು ಮಾಡಲಾಗಿತ್ತು. ಇಲ್ಲಿ ದಾಖಲಾಗಿದ್ದ ರೋಗಿಗಳಿಂದ ಬಿಲ್ ಪಡೆದುಕೊಂಡಿಲ್ಲ. ಸೋಂಕಿತರ ಸಂಖ್ಯೆ ಬರುವುದು ಕಡಿಮೆಯಾಗಿದೆ. ಸದ್ಯ ಆಸ್ಪತ್ರೆಯಲ್ಲಿ 27 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀಘ್ರದಲ್ಲಿ ಅವರು ಗುಣಮುಖರಾಗಲಿದ್ದಾರೆ. ಜೂ.15ರ ನಂತರ ಕುಮಾರೇಶ್ವರ ಆಸ್ಪತ್ರೆಯನ್ನು ಸಾಮಾನ್ಯ ಆಸ್ಪತ್ರೆಯಾಗಿ ಪರಿವರ್ತಿಸಲಾಗುವುದು. ನಂತರ ಯಥಾಸ್ಥಿತಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ಮುಂದುವರಿಯಲಿದೆ. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ವೈದ್ಯರು, ಸಿಬ್ಬಂದಿ, ವಿವಿಧ ಅಧಿಕಾರಿಗಳು ಮಾಡಿದ ಕೆಲಸ ತೃಪ್ತಿ ತಂದಿದೆ ಎಂದು ಶಾಸಕ ಚರಂತಿಮಠ ಹೇಳಿದರು.

    ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವ ವಿಷಯ ಹೆಚ್ಚು ಸದ್ದು ಮಾಡುತ್ತಿರುವುದು ನನಗೆ ಗೊತ್ತಿಲ್ಲ. ಅಂತಹ ವಿಷಯಗಳು ನಮಗೆ ಗೊತ್ತಾಗುವದಿಲ್ಲ. ನಾನು ಬೆಂಗಳೂರಿಗೆ ಹೋಗಿಲ್ಲ. ಅಲ್ಲಿನ ಬೆಳವಣಿಗೆ ಬಗ್ಗೆ ಮಾಹಿತಿ ಇಲ್ಲ.
    – ವೀರಣ್ಣ ಚರಂತಿಮಠ, ಶಾಸಕರು, ಬಾಗಲಕೋಟೆ

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts