More

    ಸಂತೆ ನಿಷೇಧಿಸಿದರೂ ಜನದಟ್ಟಣೆ!

    ಬಾಗಲಕೋಟೆ: ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಕಠಿಣ ಕರ್ಫ್ಯೂ ವಿಧಿಸಿದ್ದರೂ ಜಿಲ್ಲೆಯಲ್ಲಿ ಜನರ ಅನಗತ್ಯ ಓಡಾಡಕ್ಕೆ ಬ್ರೇಕ್ ಬೀಳುತ್ತಿಲ್ಲ. ಪ್ರಮುಖ ಬೀದಿ, ವೃತ್ತಗಳಲ್ಲಿ ಸೋಮವಾರ ಜನಜಂಗುಳಿ ಕಂಡು ಬಂದಿತು.

    ಬಾಗಲಕೋಟೆ, ಮುಧೋಳ, ಜಮಖಂಡಿ, ತೇರದಾಳ, ರಬಕವಿ-ಬನಹಟ್ಟಿ, ಬೀಳಗಿ, ಲೋಕಾಪುರ, ಕಲಾದಗಿ, ಕೆರೂರ, ಬಾದಾಮಿ, ಗುಳೇದಗುಡ್ಡ, ಹುನಗುಂದ, ಇಳಕಲ್ಲ, ಕಮತಗಿ, ಅಮೀನಗಡ ಸೇರಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ ಅಗತ್ಯ ವಸ್ತುಗಳು, ತರಕಾರಿ, ಹಣ್ಣು-ಹಂಪಲು ಖರೀದಿಗೆ ಜನರು ಮುಗಿಬಿದ್ದರು.

    ಅನೇಕರು ಮಾಸ್ಕ್ ಧರಿಸದೆ, ಪರಸ್ಪರ ಅಂತರ್ ಇಲ್ಲದೆ ಮೈತಾಗಿಕೊಂಡು ಇರುವುದು ಕಂಡು ಬಂದಿತು. ಔಷಧ, ಆಸ್ಪತ್ರೆ, ಪೆಟ್ರೋಲ್ ಬಂಕ್ ಬಿಟ್ಟರೆ ಎಲ್ಲವು ಸ್ಥಗಿತಗೊಂಡಿದ್ದವು. ಪೊಲೀಸರು, ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಖಡಕ್ ಎಚ್ಚರಿಕೆ, ದಂಡ ಪ್ರಯೋಗಕ್ಕೂ ಅರ್ಥ ಮಾಡಿಕೊಳ್ಳುತ್ತಿಲ್ಲ.

    ಜಿಲ್ಲೆಯಲ್ಲಿ ಭಾನುವಾರ 4500 ಜನರ ಸ್ವಾಬ್ ಟೆಸ್ಟ್ ಪೈಕಿ 691 ಜನರಿಗೆ ಸೋಂಕು ದೃಢಪಟ್ಟರೂ ಸಾರ್ವಜನಿಕರು ಕೋವಿಡ್ ಗಂಭೀರ ಪರಿಸ್ಥಿತಿ ಅರಿಯುತ್ತಿಲ್ಲ. ಬೆಡ್, ಆಕ್ಸಿಜನ್, ರೆಮ್ಡೆಸಿವಿರ್ ಇಂಜೆಕ್ಷನ್‌ಗಾಗಿ ಹಾಹಾಕಾರ ಇದೆ. ಇದ್ಯಾವುದರ ಪರಿವಿಲ್ಲದೆ ಮಾರುಕಟ್ಟೆ ಪ್ರದೇಶದಲ್ಲಿ ಜನರ ಓಡಾಟ ನಡೆದಿದೆ. ಅಲ್ಲದೆ ತರಕಾರಿ, ದಿನಸಿ ವಸ್ತುಗಳ ಖರೀದಿ, ಸ್ಥಳ ಬದಲಾವಣೆ ಮಾಡಿದರು ಮಾರುಕಟ್ಟೆಯಲ್ಲಿ ಜನಜಂಗುಳಿ ಕಡಿಮೆ ಆಗಲಿಲ್ಲ. ಕರೊನಾ ಕಟ್ಟಿಹಾಕಲು ಜನರ ಬೇಕಿದೆ.

    ಕೋಟೆನಗರಿಯಲ್ಲಿ ನಿರ್ಲಕ್ಷೃ
    ಬಾಗಲಕೋಟೆಯ ಹಳೇ ನಗರದಲ್ಲಿ ನಿತ್ಯ ಸಾರ್ವಜನಿಕರ ನಿರ್ಲಕ್ಷೃ ಧೋರಣೆ ಮುಂದುವರಿದಿದೆ. ಒಂದೆಡೆ ಸೇರಿ ಸಂತೆ ಮಾಡುವುದನ್ನು ಸರ್ಕಾರ ನಿಷೇಧಿಸಿದರೂ ನಗರದಲ್ಲಿ ಮಾರಾಟಗಾರರು, ಗ್ರಾಹಕರು ಮತ್ತೆ ಹಳೇ ವರಸೆ ಮುಂದುವರಿಸಿದರು. ಹಳೇ ತರಕಾರಿ ಮಾರುಕಟ್ಟೆ, ವಲ್ಲಭಭಾಯಿ ಚೌಕ್ ಫುಲ್ ರಶ್ ಆಗಿತ್ತು. ಹೆಸರಿಗೆ ಮಾತ್ರ ತಳ್ಳುಗಾಡಿಯಲ್ಲಿ ವ್ಯಾಪಾರ ಎನ್ನುವಂತಾಗಿತ್ತು. ನಗರದ ವಿವಿಧ ಪ್ರದೇಶದಲ್ಲಿ ಸಂಚರಿಸದೆ ವ್ಯಾಪಾರಸ್ಥರು ಮಾರುಕಟ್ಟೆಯಲ್ಲಿಯೇ ವ್ಯಾಪಾರ ಶುರು ಮಾಡಿಕೊಂಡರು.

    ಹಣ್ಣು, ಬಿಸ್ಕತ್ ವಿತರಣೆ
    ಬಾಗಲಕೋಟೆ ನಗರದ ಬಸ್‌ನಿಲ್ದಾಣ, ಪ್ರಮುಖ ಬೀದಿಗಳಲ್ಲಿ ನಿರ್ಗತಿಕರು, ಭಿಕ್ಷುಕರು ಊಟ, ನೀರು ಇಲ್ಲದೆ ಪರದಾಡುತ್ತಿದ್ದಾರೆ. ಇದನ್ನು ಮನಗಂಡ ಅನೇಕರು ವಿದ್ಯಾಗಿರಿ, ನವನಗರ, ಹಳೇ ಬಾಗಲಕೋಟೆ ನಗರದಲ್ಲಿ ನೀರು ಹಣ್ಣು ಬಿಸ್ಕತ್, ಮಾಸ್ಕ್ ವಿತರಿಸಿದರು. ಆಹಾರ ಪಡೆದುಕೊಂಡು ನಿರ್ಗತಿಕರ ಕಣ್ಣುಗಳು ತೇವಗೊಂಡವು.

    ಆಹಾರ ನೀಡಿದ ಬಾಗಲಕೋಟೆ ನಾಗರಾಜ ದೇಶಪಾಂಡೆ ಮಾತನಾಡಿ, ಕರ್ಫ್ಯೂ ಹಿನ್ನೆಲೆ ಊಟ, ನೀರು ಇಲ್ಲದೆ ಅನೇಕ ಜನ ಭಿಕ್ಷುಕರು ಪರದಾಡುತ್ತಿದ್ದಾರೆ. ಅವರಿಗೆ ಸಹಾಯ ಹಸ್ತ ಚಾಚುವುದು ನೆಮ್ಮಲ್ಲರ ಕರ್ತವ್ಯ. ಮಾನವೀಯತೆ ಮುಖ್ಯ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts