More

    ನಿಷೇಧದ ಮಧ್ಯೆ ನಡೆದ ಬನಶಂಕರಿ ರಥೋತ್ಸವ

    ಬಾಗಲಕೋಟೆ: ಕರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿಷೇಧ ಮಾಡಿದ್ದರೂ ಭಕ್ತರ ಒತ್ತಾಸೆ ಮೇರೆಗೆ ಐತಿಹಾಸಿಕ ಪ್ರಸಿದ್ಧ ಬಾದಾಮಿ ಬನಶಂಕರಿ ಮಹಾರಥೋತ್ಸವ ಗುರುವಾರ ಸಂಜೆ ಸಂಭ್ರಮದಿಂದ ನಡೆಯಿತು.

    ಬನದ ಹುಣ್ಣಿಮೆಯ ಗೋಧೋಳಿ ಮುಹೂರ್ತದಲ್ಲಿ ದೇವಸ್ಥಾನದ ಅರ್ಚಕರ ಸಮ್ಮುಖದಲ್ಲಿ ಸಾವಿರಾರು ಭಕ್ತರು ಮಹಾರಥವನ್ನು ಎಳೆದರು. ಪ್ರತಿ ವರ್ಷದಂತೆ ಭಕ್ತರ ಸಂಖ್ಯೆ ಲಕ್ಷಗಟ್ಟಲೆ ಇರಲಿಲ್ಲವಾದರೂ ಇರುವ ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು, ತೇರಿಗೆ ಉತ್ತತ್ತಿ, ಬಾಳೆಹಣ್ಣೆ ಎಸೆದು ಭಕ್ತಿಯಿಂದ ಕೈಮುಗಿದು ವಾಪಸ್ಸಾದರು.

    ಉತ್ತರ ಕರ್ನಾಟಕದಲ್ಲಿ ನಿರಂತರ ಒಂದು ತಿಂಗಳು ಕಾಲ ಹಗಲು ರಾತ್ರಿ ನಡೆಯುವ ಅತಿದೊಡ್ಡ ಮತ್ತು ಏಕೈಕ ಜಾತ್ರೆ ಎನ್ನುವ ಹೆಗ್ಗಳಿಕೆ ಇರುವ ಬನಶಂಕರಿ ಜಾತ್ರೆ ಮಹಾರಥೋತ್ಸವಕ್ಕೆ ಒಂದು ಲಕ್ಷದ ಆಸುಪಾಸಿನಲ್ಲಿ ಭಕ್ತರು ಆಗಮಿಸುತ್ತಿದ್ದರು. ಅಲ್ಲದೆ, ತಿಂಗಳು ಕಾಲ ಲಕ್ಷಾಂತರ ಭಕ್ತರು ಬಂದು ಹೋಗುವುದು ವಾಡಿಕೆ. ಆದರೆ, ಪ್ರಸಕ್ತ ವರ್ಷ ಕರೊನಾ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಸೇರುವುದು ಒಳ್ಳೆಯದಲ್ಲ ಎಂದು ಜಿಲ್ಲಾಡಳಿತ ಒಂದು ತಿಂಗಳು ಮೊದಲೇ ಜಾತ್ರೆಯನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.

    ಅಲ್ಲದೆ, ಕಳೆದ ಹದಿನೈದು ದಿನಗಳ ಕಾಲ ಭಕ್ತರಿಗೆ ದೇಗುಲ ಪ್ರವೇಶವನ್ನು ಬಂದ್ ಮಾಡಿಸಿ, ದೇವಸ್ಥಾನಕ್ಕೆ ಬರುವ ಮಾರ್ಗಕ್ಕೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದರು. ಜಿಲ್ಲಾಡಳಿತದ ಈ ಕ್ರಮಕ್ಕೆ ದೇಗುಲ ಭಕ್ತ ಸಮೂಹ ತೀವ್ರ ಬೇಸರ ಹಾಗೂ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

    ಹಾಗೆಯೇ ಕಲಾವಿದರು ಮತ್ತು ವ್ಯಾಪಾರಸ್ಥರು ಜಾತ್ರೆಗೆ ಅವಕಾಶ ಕೊಡಿ ಎಂದು ಸಾಕಷ್ಟು ಮನವಿ ಮಾಡಿದ್ದರೂ ಜಿಲ್ಲಾಡಳಿತ ಮಾತ್ರ ಕರೊನಾ ಹಿನ್ನೆಲೆಯಲ್ಲಿ ತನ್ನ ನಿರ್ಧಾರ ಸಡಿಸಲಿಲ್ಲ. ಆದರೆ, ದೇಗುಲದಲ್ಲಿ ನಡೆಯುವ ಪೂಜಾ ಕೈಂಕರ್ಯ ನಡೆಸಲು ಅರ್ಚಕರಿಗೆ ಅವಕಾಶ ಕೊಟ್ಟಿದ್ದರು. ಆದರೆ, ಬನದ ಹುಣ್ಣಿಮೆಯಂದು ದೇವಸ್ಥಾನಕ್ಕೆ ಆಗಮಿಸಿ, ರಥೋತ್ಸವದಲ್ಲಿ ಭಾಗವಹಿಸುವ ಉದ್ದೇಶದಿಂದ ಬುಧವಾರ ಸಂಜೆಯಿಂದಲೇ ಭಕ್ತರು ಅಗಮಿಸಲು ಆರಂಭಿಸಿದ್ದರು. ಗುರುವಾರ ಗೋಧೋಳಿ ಮುಹೂರ್ತದ ಹೊತ್ತಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.

    ಇದಕ್ಕೂ ಮುನ್ನ ಸಂಪ್ರದಾಯದಂತೆ ತೇರಿನ ಹಗ್ಗವನ್ನು ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮಸ್ಥರು ಎತ್ತಿನ ಬಂಡಿಯಲ್ಲಿ ತಂದರು. ಮಲಪ್ರಭಾ ನದಿ ಮಧ್ಯದಲ್ಲಿ ಹಾಯ್ದು ಬರುವ ಹೊಳೆಬಂಡಿ ಪ್ರತಿ ವರ್ಷದಂತೆ ಕರೆ ತಂದರು. ಸಂಜೆ ದೇವಸ್ಥಾನದ ಅರ್ಚಕರು ಪಲ್ಲಕ್ಕಿ ಮೆರವಣಿಗೆ ಮೂಲಕ ಮೂರ್ತಿಯನ್ನು ರಥದಲ್ಲಿ ಇಟ್ಟ ಬಳಿಕ ನೂರಾರು ಭಕ್ತರು ಜಯಘೋಷ ಹಾಕುತ್ತ ರಥವನ್ನು ಎಳೆದು ಸಂಭ್ರಮಿಸಿದರು.

    ಬನಶಂಕರಿ ದೇವಸ್ಥಾನ, ರಥೋತ್ಸವದ ಸ್ಥಳ ಹಾಗೂ ದೇವಸ್ಥಾನದ ಮಾರ್ಗಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸಂಜೆವರೆಗೂ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹಾಗೂ ಎಸ್ಪಿ ಲೋಕೇಶ್ ಜಗಲಾಸರ್ ಸಹ ಸ್ಥಳದಲ್ಲಿ ಠಿಕಾಣಿ ಹೂಡಿದ್ದರು.

    ನಾಟಕದ ಹವಾ ಇಲ್ಲದೇ ಭಣಭಣ
    ಬನಶಂಕರಿ ರಥೋತ್ಸವದ ಜಾಗದಲ್ಲಿ ಕಡಿಮೆ ಸಂಖ್ಯೆಯಲ್ಲಿ ಭಕ್ತರು ಇದ್ದರೂ ಸಹ ಜಾತ್ರೆಯ ಖದರ್ ಇರುವ ನಾಟಕ ಕಂಪನಿಗಳು ಇಲ್ಲದೆ ಆ ಪ್ರದೇಶವೆಲ್ಲ ಭಣಗುಟ್ಟುತ್ತಿತ್ತು. ಅಲ್ಲದೆ, ಕಿ.ಮೀ. ಗಟ್ಟಲೆ ಇರುತ್ತಿದ್ದ ಅಂಗಡಿ, ಮುಂಗಟ್ಟುಗಳು ಇರಲಿಲ್ಲ. ಇದರಿಂದ ಕೋಟ್ಯಂತರ ವಹಿವಾಟಿಗೆ ಕೊಕ್ಕೆ ಬಿದ್ದಿದೆ. ಮುಖ್ಯವಾಗಿ ನೂರಾರು ಕಲಾವಿದರು ಹಾಗೂ ಕಾರ್ಮಿಕರ ವಾರ್ಷಿಕ ಆದಾಯದ ಮೂಲವಾಗಿದ್ದ ಬನಶಂಕರಿ ಜಾತ್ರೆಯಲ್ಲಿ ಈ ವರ್ಷ ನಾಟಕ ಕಂಪನಿ ಇಲ್ಲದೆ ಕಲಾವಿದರು ಹಾಗೂ ನಾಟಕ ಪ್ರಿಯರಿಗೆ ತೀವ್ರ ಬೇಸರ ಹೊರಹಾಕಿದರು.

    ಕೋವಿಡ್ ಹಿನ್ನೆಲೆಯಲ್ಲಿ ಜಾತ್ರೆಯನ್ನು ಅದ್ದೂರಿಯಾಗಿ ನಡೆಸಬಾರದು ಎನ್ನುವ ಸರ್ಕಾರದ ನಿಯಮವನ್ನು ಪಾಲಿಸಿದ್ದೇವೆ. ಯಾವುದೇ ಅದ್ದೂರಿ ಆಚರಣೆಗೆ ಅವಕಾಶ ಕೊಟ್ಟಿಲ್ಲ. ಭಕ್ತರ ಒತ್ತಾಸೆ ಮೇರೆಗೆ ಅತ್ಯಂತ ಸರಳವಾಗಿ ರಥೋತ್ಸವ ನಡೆಸಲಾಗಿದೆ. ಅಂಗಡಿ, ಮುಂಗಟ್ಟು, ನಾಟಕ ಕಂಪನಿಗಳಿಗೆ, ವ್ಯಾಪಾರ ವಹಿವಾಟಿಗೆ ಅವಕಾಶ ಇಲ್ಲವಾಗಿದೆ.
    ಮಹೇಶ ಪೂಜಾರ, ಬನಶಂಕರಿ ದೇವಸ್ಥಾನದ ಅರ್ಚಕರು

    ಬನಶಂಕರಿ ದೇವಸ್ಥಾನ ರಥೋತ್ಸವ ಒಂದು ಸಲವೂ ನಿಂತಿರುವುದನ್ನು ನಾವು ಕಂಡಿಲ್ಲ. ಈ ಸಲ ಕರೊನಾ ಕಾರಣಕ್ಕೆ ಜಾತ್ರೆ ಬಂದ್ ಮಾಡಿದ್ದಾರೆ. ಆದರೆ, ಒಂದು ದಿನ ರಥೋತ್ಸವ ನೋಡಲು ಕಡಿಮೆ ಸಂಖ್ಯೆಯ ಭಕ್ತರಿಗಾದರೂ ಅವಕಾಶ ನೀಡಿರುವುದು ಸಮಾಧಾನ ತಂದಿದೆ. ಜಾತ್ರೆಯ ಸಂಭ್ರಮ ಇಲ್ಲವಾಗಿದೆ. ವ್ಯಾಪಾರ ವಹಿವಾಟು ಇಲ್ಲವಾಗಿದ್ದರಿಂದ ಭಣಭಣ ಎನ್ನುತ್ತಿದೆ.
    ಚೇತನ , ದೇವಸ್ಥಾನದ ಭಕ್ತೆ



    ನಿಷೇಧದ ಮಧ್ಯೆ ನಡೆದ ಬನಶಂಕರಿ ರಥೋತ್ಸವ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts