More

    ಜಿಲ್ಲೆಯ ಗೋವಿನಜೋಳಕ್ಕೆ ಬಾಂಗ್ಲಾದೇಶದಲ್ಲಿ ಬೇಡಿಕೆ

    ಬಾಗಲಕೋಟೆ: ಕರೊನಾದಿಂದ ಸ್ತಬ್ಧವಾಗಿದ್ದ ಬಾಗಲಕೋಟೆ ಎಪಿಎಂಸಿ ವಹಿವಾಟು ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಇದರಿಂದ ವಹಿವಾಟಿಗೆ ಮತ್ತಷ್ಟು ವೇಗ ನೀಡಲು ಇದೀಗ ಬಾಗಲಕೋಟೆ ಎಪಿಎಂಸಿ ಮೆಕ್ಕೆಜೋಳದ ವರ್ತಕರು ಒಂದು ಹೆಜ್ಜೆ ಮುಂದೆ ಹೋಗಿ ದಾಸ್ತಾನು ವಿದೇಶಕ್ಕೆ ರಫ್ತು ಮಾಡಿದ್ದಾರೆ.

    ಬಾಗಲಕೋಟೆಯಿಂದ ಬಾಂಗ್ಲಾದೇಶಕ್ಕೆ 42 ಬೋಗಿಗಳಲ್ಲಿ 2500 ಮೆಟ್ರಿಕ್ ಟನ್ ಮೆಕ್ಕೆಜೋಳ ತುಂಬಿಕೊಂಡಿದ್ದ ಗೂಡ್ಸ್ ರೈಲು ಸಂಚಾರಕ್ಕೆ ಶಾಸಕ ವೀರಣ್ಣ ಚರಂತಿಮಠ ಶುಭಹಾರೈಸಿ ಬೀಳ್ಕೊಟ್ಟರಲ್ಲದೆ ರೈಲು ಬಾಡಿಗೆ 75 ಲಕ್ಷ ರೂ. ಚೆಕ್‌ನ್ನು ವರ್ತಕರ ಪರವಾಗಿ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

    ಈ ವೇಳೆ ಮಾತನಾಡಿದ ಶಾಸಕ ವೀರಣ್ಣ ಚರಂತಿಮಠ, ಬಾಗಲಕೋಟೆ ಎಪಿಎಂಸಿ ವರ್ತಕರು ಮೊದಲ ಹಂತದಲ್ಲಿ 25 ಸಾವಿರ ಕ್ವಿಂಟಾಲ್ ಮೆಕ್ಕೆಜೋಳವನ್ನು ನೇರವಾಗಿ ಬಾಂಗ್ಲಾದೇಶಕ್ಕೆ ಕಳುಹಿಸುತ್ತಿದ್ದಾರೆ.

    ಅತಿವೃಷ್ಟಿ ಉಂಟಾಗಿದ್ದರೂ ಬಾಗಲಕೋಟೆ ಹಾಗೂ ಸುತ್ತಮುತ್ತ ಪ್ರದೇಶದ ಮೆಕ್ಕೆಜೋಳ ಕಪ್ಪು ಆಗಿಲ್ಲ. ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಮೆಕ್ಕೆಜೋಳ ಕಪ್ಪಾಗಿ ಬೇಡಿಕೆ ಕುಸಿದಿದೆ. ಇದರಿಂದ ನಮ್ಮ ಭಾಗದ ದಾಸ್ತಾನಿಗೆ ಬಾಂಗ್ಲಾದೇಶದಲ್ಲಿ ಬೇಡಿಕೆ ಇದೆ ಎಂದರು.

    ಕರೊನಾ ಬಳಿಕ ರಾಜ್ಯದಿಂದ ಹೊರದೇಶಕ್ಕೆ ಹೋಗುತ್ತಿರುವ ಮೊದಲ ದಾಸ್ತಾನು ತುಂಬಿದ ರೈಲು ಇದಾಗಿದೆ. ವಿದೇಶಕ್ಕೆ ಮೆಕ್ಕೆಜೋಳ ರಫ್ತು ಆಗುತ್ತಿರುವುದರಿಂದ ಬೆಲೆ ಹೆಚ್ಚಳವಾಗಿ ಅದರ ಲಾಭ ರೈತರಿಗೆ ಸಿಗುತ್ತಿದೆ. ಇದೀಗ ಅಂದಾಜು 4 ಕೋಟಿ ರೂ. ವಹಿವಾಟು ಇದಾಗಿದ್ದು, ಇದರಲ್ಲಿ 75 ಲಕ್ಷ ರೂ. ರೈಲ್ವೆ ಬಾಡಿಗೆ ಹೋಗುತ್ತದೆ. ಅಲ್ಲದೆ, ವಹಿವಾಟು ಚುರುಕು ಆಗುವುದರಿಂದ ರೈತರು, ವರ್ತಕರ ಜೊತೆಗೆ ಲಾರಿ ಮಾಲೀಕರು, ಹಮಾಲರು ಸೇರಿ ಸಾವಿರಾರು ಜನರಿಗೆ ಉದ್ಯೋಗ ಸಿಗುತ್ತಿದೆ. ಎಪಿಎಂಸಿ ವರ್ತಕರ ಸಾಹಸದ ಕೆಲಸ ಇದಾಗಿದೆ ಎಂದು ತಿಳಿಸಿದರು.

    ದಾಸ್ತಾನು ತುಂಬಿದ ರೈಲು ಬೋಗಿಗೆ ಪೂಜೆ ಸಲ್ಲಿಸಿದರು. ಸಿಹಿ ಹಂಚಿ ಶುಭ ಹಾರೈಸಿದರು. ವರ್ತಕರಾದ ಮುರುಗೇಶ ನಾಗರಾಳ, ವಿ.ಎನ್.ಅಥಣಿ, ಮಹೇಶ ಅಂಗಡಿ, ಸಿದ್ದು ಟೆಂಗಿನಕಾಯಿ, ಎಂ.ತಾಳಿಕೋಟಿ, ವಿ.ಟಿ.ಗಜ್ಜರ, ಸಂತೋಷ ಬರದಾವಿ, ಮಹೇಶ ಕುಮುಟಗಿ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts