More

    ಹಬ್ಬ ಸಂಭ್ರಮಕ್ಕೆ ಕೋವಿಡ್ ಕೊಕ್ಕೆ

    ಬಾಗಲಕೋಟೆ: ಡೆಡ್ಲಿ ಕರೊನಾ ಹಾವಳಿ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಪ್ರತಿಯೊಬ್ಬ ಮನೆ, ಮನವದಲ್ಲಿ ಆತಂಕ, ಕಣ್ಣೀರು ಮನೆ ಮಾಡಿದೆ. ಹೀಗಾಗಿ ಕೋಟೆನಾಡಿನಲ್ಲಿ ಅಕ್ಷಯತ್ರಿತೀಯಾ, ಬಸವ ಜಯಂತಿ, ರಂಜಾನ್ ಹಬ್ಬದ ಸಂಭ್ರಮಕ್ಕೂ ಕರೊನಾ ಕೊಕ್ಕೆ ಹಾಕಿತು.!!

    ಕೋವಿಡ್ ಎರಡನೇ ಅಲೆ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ ಪರಿಣಾಮ ಜಿಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆ ಹಾಗೂ ಮುಧೋಳ, ಜಮಖಂಡಿ, ಬೀಳಗಿ, ಹುನಗುಂದ, ಇಳಕಲ್ಲ, ಅಮೀಗಡ, ರಬಕವಿ-ಬನಹಟ್ಟಿ, ಬಾದಾಮಿ ಸೇರಿದಂತೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶುಕ್ರವಾರ ಸರಳವಾಗಿ ಹಬ್ಬ ಆಚರಿಸಲಾಯಿತು. ತಮ್ಮ ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಹಬ್ಬ ಆಚರಿಸಿ ಕೋವಿಡ್ ಸೋಂಕಿನಿಂದ ನಾಡು, ದೇಶ, ವಿಶ್ವಕ್ಕೆ ಮುಕ್ತಿ ನೀಡುವಂತೆ ಪ್ರಾರ್ಥಿಸಿದರು.

    ಮಾರುಕಟ್ಟೆಯಲ್ಲಿ ಮೌನ…
    ಹಬ್ಬ ಬಂದರೇ ಸಾಕು ಜಿಲ್ಲೆಯ ಎಲ್ಲ ಮಾರುಕಟ್ಟೆ ಪ್ರದೇಶದಲ್ಲಿ ಜನಜಂಗುಳಿಯಿಂದ ತುಂಬಿಕುತ್ತಿತ್ತು. ಬಟ್ಟೆ, ಚಿನ್ನಾಭರಣ, ಸಿಹಿ ಪದಾರ್ಥ ಖರೀದಿ ಜೋರಾಗಿ ನಡೆಯುತ್ತಿತ್ತು. ಕಳೆದ ವರ್ಷ ಈ ವರ್ಷವು ಹೆಮ್ಮಾರಿ ವ್ಯಾಪಾರಕ್ಕೂ ದೊಡ್ಡ ಹೊಡೆತ ನೀಡಿದೆ. ಆರ್ಥಿಕ ಸಂಕಷ್ಟ ಒಂದು ಕಡೆಯಾದರೇ, ಕೋವಿಡ್ ಭಯಕ್ಕೆ ಸಾರ್ವಜನಿಕರು ಮನೆಯಿಂದ ಹೊರಗೆ ಬರಲಿಲ್ಲ. ಹಬ್ಬಕ್ಕಾಗಿ ವಿಶೇಷ ಖರೀದಿಗೂ ಆಸಕ್ತಿ ತೋರಲಿಲ್ಲ. ಲಾಕ್‌ಡೌನ್ ಪರಿಣಾಮ ಎಲ್ಲವು ಬಂದ್ ಆಗಿದ್ದರಿಂದ ಮಾರುಕಟ್ಟೆಯಲ್ಲಿಯೂ ಜೀವ ಕಳೆ ಕಳೆದುಕೊಂಡು ನೀರವಮೌನ ಆವರಿಸಿತ್ತು.

    ದೇವಸ್ಥಾನಗಳು ಬಂದ್
    ಅಕ್ಷಯತ್ರೀತಿಯ ಹಾಗೂ ಬಸವ ಜಯಂತಿ ಅಂಗವಾಗಿ ಜಿಲ್ಲೆಯ ಪ್ರಮುಖ ದೇವಾಲಯ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಂಡು ಸಂಭ್ರಮದಿಂದ ಹಬ್ಬ ಆಚರಿಸಲಾಗುತ್ತಿತ್ತು. ಕೋವಿಡ್ ಹಿನ್ನಲೆಯಲ್ಲಿ ಈ ಸಾರಿ ಬಹುತೇಕ ದೇವಾಲಯಗಳ ಬಾಗಿಲು ಬಂದ್ ಆಗಿತ್ತು. ಬಸವ ಜಯಂತಿ ಅಂಗವಾಗಿ ಹಮ್ಮಿಕೊಳ್ಳುತ್ತಿದ್ದ ಬೃಹತ್ ಮೆರವಣಿಗೆ ರದ್ದು ಪಡಿಸಲಾಗಿತ್ತು. ಬಸವೇಶ್ವರ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಿ ಸರ್ಕಾರಿ ಕಚೇರಿಗಳಲ್ಲಿ ಮಾತ್ರ ಜಯಂತಿ ಆಚರಿಸಲಾಯಿತು. ಎಲ್ಲರು ಮನೆಯಲ್ಲಿ ದೇವರಿಗೆ ಪೂಜೆ ಸಲ್ಲಿಸಿದರು.

    ಚಿನ್ನಾಭರಣ ವ್ಯಾಪಾರ ಡೌನ್
    ಅಕ್ಷಯತ್ರೀಯ ಹಬ್ಬಕ್ಕೆ ಬಹಳಷ್ಟು ಜನ ಚಿನ್ನಾಭರಣ ಖರೀದಿಗೆ ಮುಗಿ ಬೀಳುತ್ತಾರೆ. ಅಂಗಡಿ, ಮುಂಗಟ್ಟು ಸಂಪೂರ್ಣ ಬಂದ್ ಆಗಿದ್ದರಿಂದ ಸಾರ್ವಜನಿಕರು ಚಿನ್ನ ಖರೀದಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ನೂರಾರು ಕೋಟಿ ರೂ. ವಹಿವಾಟಿಗೂ ಸ್ತಬ್ಧಗೊಂಡಿತ್ತು.

    ಸರಳವಾಗಿ ರಂಜಾನ್ ಆಚರಣೆ
    ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬವನ್ನು ಕರೊನಾ ಹಿನ್ನಲ್ಲೆಯಲ್ಲಿ ಸರ್ಕಾರ ನಿಯಮದಂತೆ ಜಿಲ್ಲಾದ್ಯಂತ ಮನೆಯಲ್ಲಿಯೇ ಸರಳವಾಗಿ ಸಡಗರದಿಂದ ಆಚರಿಸಿದರು.

    ಕಳೆದ ಒಂದು ತಿಂಗಳಿಂದ ಆಚರಿಸಿಕೊಂಡು ಬಂದಿದ್ದ ಉಪವಾಸ ವೃತವನ್ನು ಮುಕ್ತಾಯಗೊಳಿಸಿದರು. ಡೆಡ್ಲಿ ಕರೊನಾ ಹರಡುವ ಭೀತಿಯಿಂದ ಸಾಮೂಹಿಕ ಪ್ರಾರ್ಥನೆಗೆ ಸರ್ಕಾರ ಅವಕಾಶ ನಿರಾಕರಣೆ ಮಾಡಿದ್ದರಿಂದ ಮುಸ್ಲಿಂ ಬಾಂಧವರು ತಮ್ಮ ನಿವಾಸದಲ್ಲಿ ಕುಟುಂಬ ಸದಸ್ಯರೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ಕರೊನಾದಿಂದ ದೇಶ, ನಾಡು ರಕ್ಷಿಸುವಂತೆ ಅಲ್ಲಾಹುವಿನಲ್ಲಿ ಬೇಡಿಕೊಂಡರು.

    ಸಾಮಾಜಿಕ ಅಂತರ್ ಕಾಯ್ದುಕೊಂಡು, ಮಾಸ್ಕ ಧರಿಸಿ ಮಕ್ಕಳು, ಯುವಕರು, ಹಿರಿಯರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಇನ್ನು ಈದ್ಗಾ ಮೈದಾನ, ಮಸೀದಿಗಳಲ್ಲಿ ನೀರವ ಮೌನ ಆವರಿಸಿದ್ದು, ನೋವು ಉಂಟು ಮಾಡಿತು. ಹಬ್ಬದ ಅಂಗವಾಗಿ ಹೊಸ ಬಟ್ಟೆ ಧರಿಸಿ ಮಕ್ಕಳು, ಯುವಕರು, ಮಹಿಳೆಯರು, ವೃದ್ಧರು ಸಂಭ್ರಮಿಸಿದರು. ಆತ್ಮೀಯ ಬಳಗಕ್ಕೆ ಮಾತ್ರ ಹಬ್ಬದ ಪ್ರಯುಕ್ತ ತಯಾರಿಸಲಾಗಿದ್ದ ಸುರಕುಂಬ ಮತ್ತು ವಿವಿಧ ವಿಶೇಷ ಖಾದ್ಯಗಳನ್ನು ಉಣಬಡಿಸಿದರು.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts